ನಾ ನಿನ್ನ ಮಗ ನಗಗೇಡು ಮಾಡಬ್ಯಾಡ

ನಾ ನಿನ್ನ ಮಗ ನಗೆಗೇಡು ಮಾಡಬ್ಯಾಡ ಈ ಜಗದೊಳಗೆ                    ||ಪ||


ನಾ ನಿನ್ನ ಮಗನು ಅಹುದೆನ್ನುವ ಮಾತಿದು

ಎನ್ನ ಗುರುವಿನುಪದೇಶ ವಚನದಿಂ

ಮುನ್ನ ತಿಳಿದು ಮಹೇಶ ಮಂತ್ರ ಜಪ ತನ್ನೊಳಗಿರುತಿಹೆ

ಕುನ್ನಿ ಜನರ ಹಂಗಿನ್ನಾಯತಕ ಭಯ ಚೆನ್ನ ಶ್ರೀಗುರುವೆ                      ||೧||


ತಾಯಿ ತಂದೆಗಳ ಇಂದ್ರಿ ವಿಕಾರದಿ

ಕಾಯ ಜನಿಸಿ ಅದರೋಳ್ ಮನಮೋಹಿಸಿ

ನೋವು ಬ್ಯಾನಿಯಿಂದಾಯಾಸಪಡುತಿರೆ

ಸಾವಿಗಂಜಿ ಬಾಯಾರಿ ಬಳಲುತಿರೆ

ಜೀವದ ಪರವಿಯ ಬಿಟ್ಟಾಚರಿಸುವೆ ನೀ ರಕ್ಷಿಸು ಮಹಾದೇವ ದಯಾನಿಧೆ   ||೨||


ಸಾರಲೇನು ಸಂಸಾರ ವಿಷಯ ಸುಖ

ಮೂರು ದೇಹದೊಳು ಹೇರಿ ಕಳುಹಿದ ಜೀವದ್ಯಾವಾರ

ಮರತು ವರಪಾರಮಾರ್ಥಲೊಳು ನಾ ಬ್ಯಾರಿರುತಿರೆ

ಧಾರುಣಿಯೊಳು ಶಿಶುನಾಳಧೀಶನ

ಆಧಾರ ಹಿಡಿದು ಆನಂದವಾದೆ                                                       ||೩||


* * * *
-ಶಿಶುನಾಳ ಶರೀಫ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ