ಪಾಹಿ ಪರಮದಯಾಳು ಕೃಪಾಕರ

ಪಾಹಿ ಪರಮದಯಾಳು ಕೃಪಾಕರ ದೇವ ಬಲಭೀಮ

ತ್ರಾಹಿ ಎನುತ ಪಾದಕೆರಗಿದ ಜನರಿಗೆ

ಕಾಮಿತ ಫಲದಾಯಕ ರಘುವರ ಸೇವಕ ಶಿರೋಮಣಿ

ಕೋವಿಧ ಮುನಿಜನ ಜೀವ ಜಗನ್ಮಯ ವಾಯುಕುಮಾರ                    ||ಪ||


ಶೂರ ಪರಮ ಗಂಭೀರ ಅತಿ ಸುಂದರ ಮಾರುತಿ

ಶೌರ್ಯ ವಿಚಾರ ಪರಾಕ್ರಮ ಕಾರುಣ್ಯ ಕಪಿವರ ಮಾತುತಿ

ಬಾರಿ ಬಾರಿಗೂ ನುತಿಪ ಭಕುತರ ಮಾರುತಿ

ವಜ್ರ ಶರೀರ ನಿರಾಮಯ ವೀರ ನರನ ಧ್ವಜ ಸಾರಥಿ

ಮೀರಿದ ಉಗ್ರ ಅವತಾರದಿ ಪೂರ್ಣ

ವಾರಿಧಿಯೊಳು ಘನ ಸಾರವ ನಿರ್ಮಿಸಿ

ಧರಣಿಯಾತ್ಮಜ ಇದ್ದ ವನವನು ಸೇರುತ

ಹಾರಿ ಮುದ್ರಿಕೆಯ ತೋರಿದ ಮಾರುತಿ                                            ||೧||


ಕುಸುಮಶರಪಿತನುಸುರಿದ ನುಡಿಯನು ಲಾಲಿಸಿ

ಮುಸುಕಿದ ಅಸುರರ ಪಡೆಯನಾವರಿಸಿ ಬಲವನು ತೋರಿಸಿ

ಅಸಮನು ಶಕ್ತಿಲೆ ಕುಂಭಕರ್ಣನನು ಸೋಲಿಸಿ ಲಂಕಾದೇಶಗೆಡಿಸಿದಿ

ವಾಲಾಗ್ರದ ಕೊನೆಯ ಜ್ವಲನದಿ ದಶಶಿರನಾಥನ ಮರ್ದಿಸಿ

ವಸುಧೆಯಾಳು ಹೊಸಪಟ್ಟ ವಿಭೀಷಣ ಶರಣಿಗೆ ನೀ-

ನತಿಶಯದಲಿ ಪಾಲಿಸಿದಿ ಪರಾತ್ಪರ ಹಸುಳನಾಗಿ ಹರಿಚರಣಕೆರಗಿದಿ      ||೨||


ಮಂದಹಾಸ ಆನಂದಯೋಗ ದುರಂಧತಾ ಕರುಣಿಸು ಇಂದು

ಮುನೀಂದ್ರ ಮೌನವ್ರತ ಮಂತ್ರದಲಿ ಬಂಧುರ

ಇಂದ್ರಜಿತುಹರ ಚಂದ್ರರೂಪದಲಿ ಚಂದಿರಾ

ಅಂಜನಿ ಕಂದಾ ಮಣಿಯಮುಕುಟದಿ ಶೋಭಿಸುವ ಸುಂದರಾ

ಇಂದು ನಿಮ್ಮಯ ಪಾದಾರವಿಂದಗಳಿಗೆ ಕರ-

ಹೊಂದಿಸೆನ್ನ ಮನಮಂದಿರದೊಳು ಮುದದಿಂದ ಪೇಳೆ

ಗೋವಿಂದರಾಜ ಗುರುವಿಂದ ಪಡೆದ ಉಪದೇಶ ಬಲದಿ ನುತಿಪೆ          ||೩||

* * * *
-ಶಿಶುನಾಳ ಶರೀಫ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ