ಮಾನಾಪಮಾನ ನಿನ್ನವಮ್ಮಾ

ಮಾನಾಪಮಾನ ನಿನ್ನವಮ್ಮಾ ಎನಗೇನು

ಶ್ವಾನನಂತೆ ಬೊಗಳುತಿಹರು ಹೀನ ಜನರೆಲ್ಲರಿವರು    ||ಪ||


ಸದಾ ನಿನ್ನ ಧ್ಯಾನದೊಳಿರಲು

ಮದಾ ಬಂದಿತೆಂಬುವರಿವರು

ಕದನವ ಮಾಡುವರಿವರು

ನಿಧಾನವ ತಿಳಿಯದೆಯವರು

ಇದು ನಿನ್ನ ಮನಸ್ಸಿಗೆ

ಮೃದುವಾದರೊಳಿತಮ್ಮಾ                    ||೧||



ನಿನ್ನ ಚಿಂತೆಯೊಳಿರಲು

ಖಿನ್ನ ಪಡಿಸುವರೆನ್ನ ಖೂಳರು

ಸಣ್ಣ ಮಾತನಾಡುವವರು

ಸೊನ್ನಿ ಸೂಕ್ಷ್ಮವನರಿಯದವರು

ಎನಗೇನು ಕುಂದುವದು

ನಿನಗದು ಹೊಂದುವದು                       ||೨||


ನಿಜಾನಂದ ಬೋಧ ಎನಗೆ

ಕುಜನರ ನಿಂದೆ ನಿನಗೆ

ಸುಜನರ ರಕ್ಷೆಯೊಳಗೆ

ಗಜಿಬಿಜಿ ಬರುವದು ನಿನಗೆ

ಭಜಿಸುವೆ ಗುಡಿಪುರೇಶನ

ನಿಜ ವಿಷಯ ನಾಯಕಿ                       ||೩||
* * * *
-ಶಿಶುನಾಳ ಶರೀಫ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ