-ಅಬ್ಬಾಸ್ ಮೇಲಿನಮನಿ
ಆಗರ್ಭ ಶ್ರೀಮಂತರ ಮಗಳಾಕೆ. ದಿನಾಲು ಶಾಲೆಗೆ ಕಾರಿನಲ್ಲಿ ಬಂದು ಹೋಗುವಳು. ಅವಳ ಚೆಂದದ ಪಾದಗಳಿಗೆ ಒಮ್ಮೆಯೂ ಮಣ್ಣು ತಗುಲಿರಲಿಲ್ಲ. ಮೈ ನೆಲದ ಸ್ಪರ್ಶ ಅನುಭವಿಸಿರಲಿಲ್ಲ. ಅವಳಿಗೆ ಬೇಕೆನೆಸಿದ್ದೆಲ್ಲ ಕ್ಷಣ ಮಾತ್ರದಲ್ಲಿ ದಕ್ಕುತ್ತಿತ್ತು. ಮಕಮಲ್ಲಿನ ಬಟ್ಟೆಯಂತಿತ್ತು ಅವಳ ಬದುಕು.
ಶಾಲೆಯಲ್ಲೂ ಅಷ್ಟೆ. ಅವಳಿಗೆ ಸ್ಪೆಷಲ್ಲಾಗಿ ಅಸನದ ವ್ಯವಸ್ಥೆ. ಎಲ್ಲರ ನಡವಳಿಕೆಗಳು ಅವಳಿಗೆ ಹಿತವೆನಿಸಿದ್ದವು. ಗೊಂಬೆಯಂತೆ ಕಾಣುತ್ತಿದ್ದ ಅವಳನ್ನು ಸಹಪಾಟಿಗಳು ಅದ್ಭುತವೆನ್ನುವಂತೆ ನೋಡುತ್ತಿದ್ದರು, ಮಾತನಾಡಲು ತವಕಿಸುತ್ತಿದ್ದರು.
ಒಂದಿನ ಒಬ್ಬ ಅಧ್ಯಾಪಕರು "ನಮ್ಮ ದೇಶದ ಬಡವರು" ಎಂಬ ವಿಷಯ ಕುರಿತು ಪ್ರಬಂಧ ಬರೆದುಕೊಂಡು ಬರಲು ಹೇಳಿದರು. ಮರುದಿನ ಎಲ್ಲರ ಪ್ರಬಂಧಗಳು ಅಧ್ಯಾಪಕರ ಕೈ ಸೇರಿದ್ದವು. ಎಲ್ಲ ವಿದ್ಯಾರ್ಥಿಗಳಿಗಿಂತ ಶ್ರೀಮಂತ ಹುಡುಗಿಯ ಪ್ರಬಂಧ ವಿಶೇಷವಾಗಿತ್ತು.
ಆಕೆ ಸುಂದರ ಅಕ್ಷರಗಳಲ್ಲಿ ನೀಟಾಗಿ ಬರೆದಿದ್ದಳು.
"ನಮ್ಮ ದೇಶದ ಬಡವರು ದೊಡ್ಡ ಬಂಗಲೆಗಳಲ್ಲಿ ವಾಸಿಸುವರು. ಅವರು ಕಾರಿನಲ್ಲಿ ಓಡಾಡುವರು. ಟಬ್‌ನಲ್ಲಿ ಸ್ನಾನ ಮಾಡುವರು. ಡೈನಿಂಗ್ ಟೇಬಲ್ ಮೇಲೆ ಕುಳಿತು ಟಿಫಿನ್, ಊಟ ಮಾಡುವರು. ಬ್ರೆಡ್ ಟೋಸ್ಟ್, ಬೆಣ್ಣೆ ದೋಸೆ, ಸಮೋಸಾ, ಪೇಡೆ, ಬರ್ಫಿ, ಗುಲಾಬ್ ಜಾಮೂನು ತಿನ್ನುವರು. ಹೋಳಿಗೆ, ತುಪ್ಪ, ಚಪಾತಿ, ಚಿತ್ರಾನ್ನ ಕೆನೆ ಮೊಸರು ಊಟ ಮಾಡುವರು. ಮುಂಜಾನೆ ಮತ್ತು ಸಂಜೆ ಗಟ್ಟಿಯಾದ ಹಾಲಿನ ಚಹ ಕುಡಿಯುವರು. ಸೇಬು, ಬಾಳೆಹಣ್ಣು, ದಾಳಂಬರಿ, ಕಿತ್ತಳೆ, ಮೋಸಂಬಿ, ಮಾವಿನ ಹಣ್ಣು, ದ್ರಾಕ್ಷಿ ಹಣ್ಣು ತಿನ್ನುವರು. ಬಿಸಲೇರಿ ನೀರು ಕುಡಿಯುವರು. ಟಿ.ವಿ. ನೋಡುವರು, ಮೆತ್ತನೆಯ ಮಂಚದ ಮೇಲೆ ಸೊಳ್ಳೆಪರದೆ ಕಟ್ಟಿಕೊಂಡು ಮಲಗುವರು. ನಸುಕಿನಲ್ಲೆದ್ದು ವಾಕಿಂಗ್ ಹೋಗುವರು, ಜಾಗಿಂಗ್ ಮಾಡುವರು..... ಇತ್ಯಾದಿ ಇತ್ಯಾದಿಯಾಗಿ ಪ್ರಬಂಧ ಮುಂದುವರಿದಿತ್ತು.
ಅಧ್ಯಾಪಕರಿಗೆ ಸುಸ್ತೋ ಸುಸ್ತು.
*****
ಕೀಲಿಕರಣ: ಕಿಶೋರ್ ಚಂದ್ರ
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ