ತೂಗುತಿದೆ ನಿಜ ಬೈಲಲಿ ಜೋಕಾಲಿ

-ಶಿಶುನಾಳ ಶರೀಫ್

ತೂಗುತಿದೆ ನಿಜ ಬೈಲಲಿ
ಜೋಕಾಲಿ -ಜೋಲಿ- ಲಾಲಿ                                 ||ಪ||

ಸಾಂಬಲೋಕದ ಮಧ್ಯದಿ ಸವಿಗೊಂಡು
ಕಂಬ ಸೂತ್ರದ ಸಾಧ್ಯದಿ
ಆಂಬರದೊಳವತಾರ ತುಂಬಿ ತುಳುಕುವಂತೆ
ಸಾಂಬ ಸಾಕ್ಷತ್ ಜೋಕಾಲಿ -ಜೋಲಿ- ಲಾಲಿ           ||೧||

ಪೊಡವಿಗಡಗಿರ್ದ ಜ್ಯೋತಿ
ಮೃಡನಿರ್ದು ತಾನಾಗಿ ಬಿಳಿಯ ಬತ್ತಿ
ಪೊಡವಿ ಆಕಾಶ ತಾನೇಕವಾಗಿ
ಒಡೆಯ ಕರ್ತುಕನ ಜೋಕಾಲಿ -ಜೋಲಿ- ಲಾಲಿ       ||೨||

ಹೊಳೆವ ಮಹಾಬೆಳಕಿನಲ್ಲಿ
ಕಳೆಯುಳ್ಳ ತಿಳಿನೀರ ತೊಟ್ಟಿಲಲ್ಲಿ
ಇಳೆಯೊಳು ಶಿಶುನಾಳಧೀಶನ ಮನದೊಳು
ಹೊಳೆವ ಕೈವಲ್ಯ ಜೋಕಾಲಿ -ಜೋಲಿ- ಲಾಲಿ       ||೩||
                     *****

ಕೀಲಿಕರಣ: ಎಮ್.ಎನ್.ಎಸ್.ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ