ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ

-ಶಿಶುನಾಳ ಶರೀಫ್

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ
ಜಲದಿಂದ ಕೊಡಗಳ ತುಂಬುತಿದ್ದರು ನಲಿದು ನೀರಾಗ                        ||ಪ||

ಸಲಗಿಯಿಂದ ಗೆಳತೆರೆಲ್ಲರು ಕುಲಕೆ ಒಬ್ಬರು ಕೂಡಿಕೊಂಡು
ಹಲವು ಮಾತಗಳಾಡುತಾಡುತ ಚಿಕ್ಕಿ ಸೀರಿ ಚಿಮ್ಮು ಚಿಮ್ಮುತ               ||ಅ.ಪ.||

ಅಡಗಿಮಾಡುವ ಲಕ್ಷ್ಯ ಆಗಿತ್ತು
ಅದರೊಳಗೆ ಇವರು ನೀರಿಗಂದರೆ ನಿಲ್ಲದೆ ಹೋಗುವರು
ಕಲ್ಲಭಾವಿ ಮೆಲ್ಲನೇರಿ ಬಂದು ಹತ್ತಿ ನಿಂತು
ನಾಲ್ವರಿದ್ದ ಠಾವಿನಲ್ಲಿ ನಲಿದು ನಲಿದು ನುಡಿಯುತಿದ್ದರು                        ||೧||

ವಿಟಕರಿದ್ದಲಿ ಚಟದಿ ನೋಡುವಳು ಸಲಿಹಲ್ಲು ಇವಳು
ಹುಬ್ಬು ಕಾಮನಬಿಲ್ಲು ತುಟಿಯವಳು
ರಬ್ಬಿಲೊಂದು ಸೀರೆನುಟ್ಟು ಹುಬ್ಬು ಹಾರಿಸಿ ಮಬ್ಬುಗವಿಸಿ
ಆರಿಯದವರಿಗೆ ಆಳತೆ ಕಲಿಸುವ ಹಿರಿಯ ಹಾದರ ಮರಿಯ ಹೌದಿದು      ||೨||

ಕುಟಿಲಕುಂತಳೆ ನಿಟಿಲನೇತ್ರದಲಿ
ಇವಳಾಟ ನೋಡಿ ದಾಟಲಾರರು ವಿಪಿನದೊಳಗಿನ ತಪದ ಋಷಿಗಳು
ಮುಖವ ನೋಡಿ ತಪವ ಬಿಟ್ಟು ಕಪವ ಇಲ್ಲದೆ ಕ್ಯಾರಿ ಉಗುಳಿ
ನೊಸಲೊಳುಪ್ಪುವ ಕುಚವ ನೋಡಿ ಕಾಸಿ ಕೈಪವ ಸಡಲತಿದ್ದವು            ||೩||

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ
ಜಲದಿಂದ ಕೊಡಗಳ ತುಂಬುತಿದ್ದರು ನಲಿದು
ಜಾರಿಬಿದ್ದು ಊರಿ ಎದ್ದು ಧೀರ ಶರೀಫರು ಸಾರುಸಾರುತ
ಊರ ಆಗಡಿಯ ಗ್ರಾಮದೊಳು ಚಾರುಚರಿತ್ತವ ಸಾರುಸಾರುತ            ||೪||
                 *****

ಕೀಲಿಕರಣ: ಎಮ್.ಎನ್.ಎಸ್.ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ