ಬಿದ್ದಿಯಬೇ ಮುದುಕಿ

-ಶಿಶುನಾಳ ಶರೀಫ್

ಬಿದ್ದಿಯಬೇ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ
ಬಿದ್ದಿಯಬೇ ಮುದುಕಿ      ||ಪ||

ಸಧ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದಿಯಬೇ ಮುದುಕಿ      ||೧||

ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟೀಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ
ಬಿದ್ದಿಯಬೇ ಮುದುಕಿ      ||೨||

ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನ್ವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದಿಯಬೇ ಮುದುಕಿ      ||೩||
            ****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ