ಆರಗೊಡವಿನ್ನೇನು ಮಗಳೆ

-ಶಿಶುನಾಳ ಶರೀಫ್

ಆರಗೊಡವಿನ್ನೇನು ಮಗಳೆ
ಮುನ್ನೋಡಿ ಹಂಜಿ ನೂಲಮ್ಮಾ            || ಪ ||

ದಾರಿಕಾರರು ನಿನ್ನ ಮಾರಿನೋಡಲು
ಮಾರಿಯತ್ತಿ ನೋಡ ಬೇಕಮ್ಮಾ           || ಅ. ಪ.||

ಆಸನ ದೊಡ್ಡಾ ಮಣಿಗಳ ಮಾಡಿ
ಅ ಶಶಿ ರವಿಗಳ ಕುಂಭಗಳ್ಹೂಡಿ
ಸೂಸುವ ಚಕ್ರದ ಎಲೆಗಳಮೇಲೆ
ದಶವಾಯುಗಳೆಂಬ ನುಲಿಗಳ ಬಿಗಿದು   || ೧ ||

ಹರಿಯನು ಬ್ರಹ್ಮನಾಳ ಮಾಡಿ
ಕುರುಹು ನಾಶಕ ಬೆನಕವ ಹೂಡಿ
ಪರಶಿವನೆಂಬುವ ದಾರವ ಕಟ್ಟಿ
ವೈರಾಗ್ಯವೆಂಬುವ ಬಿಲ್ಲುಗಳಿಟ್ಟು           || ೨ ||

ಜ್ಞಾನವೆಂಬುವಾ ಕದರನಿಟ್ಟು
ಮಾನವ ಧರ್ಮ ಹಂಜಿಯ ಪಿಡಿದು
ಅನುಭವವೆಂಬುವ ಎಳೆಗಳು ತೆಗೆದು
ಅನುವಿಲಿ ಸುಮ್ಮನೇ ನೂಲಮ್ಮಾ          || ೩ ||

ಕಕುಲಾತಿಯೆಂಬುವ ಕಸರನು ಕಳಿದು
ಸುಖ ದುಃಖೆಂಬುವ ಸಿರದೊಡಕಳಿದು
ಭಕುತಿಯೆಂಬುವಾ ಕೊಳವಿಯನ್ಹಿಡಿದು
ಕುಕ್ಕಡಿನೆಲ್ಲಾ ನೂಲಮ್ಮಾ                   || ೪ ||

ಇಪ್ಪತ್ತೊಂದು ಸಾವಿರದಾ
ಮೇಲಾರನೂರಾ ಎಳಿಗಳ ಹೊಯ್ದು
ತಪ್ಪದೇ ಎಣಕಿಯಮಾಡಿ ನೀನು
ಒಪ್ಪಿಸಿ ಪಟ್ಟೇವ ಸುತ್ತವ್ವಾ                   || ೫ ||

ಪ್ರತ್ಯಕ್ಷ ಪರಮಾತ್ಮನೆಂಬುವ
ಉತ್ತಮವಾದ ಹೊಳಾನೇಯ್ದು
ಕೃತ್ತಿವಾಸ ಶಿಶುನಾಳಧೀಶನಿಗೆ
ಮುಟ್ಟಿಸಿ ಮುಕ್ತಿ ಪಡಿಯವ್ವಾ                || ೬ ||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ