-ತಾರಿಣಿ ಶುಭದಾಯಿನಿ ಆರ್
ರೂಪ ಯೌವನಗಳದೆ
ಮೆರವಣಿಗೆ ಸಾಕು
ಬುದ್ಧಿ ಭಾವಗಳಿಗೆ
ಮನ್ನಣೆಯು ಬೇಕು
- ಹೇಮ ಪಟ್ಟಣಶೆಟ್ಟಿ
-ಎಂದು ಘೋಷಿಸಿಸಕೊಂಡರೂ ಸಹ ಒಮ್ಮೊಮ್ಮೆ ಹೆಣ್ಣೊಬ್ಬಳ ಕವಿತೆಯ ಅಂತರಂಗ ತೆರೆದುಕೊಲ್ಳುವುದೇ ಇಲ್ಲ! ಕಾವ್ಯವನ್ನು ಹೆಣ್ಣಿನ ದೇಹದ ಹೊರ ವಿವರಗಳಂತೆ ಗ್ರಹಿಸಿ ಗ್ಲಾಮರ್ ಅಂಶಗಳಾಗಿ ಗಣಿಸಿ ಚರ್ಚಿಸುವ ಅಪಾಯವೇ ಹೆಚ್ಚು. ಸ್ತ್ರೀಲೇಖದ ಚೌಕಟ್ಟು ಸಿದ್ಧಗೊಳಿಸಿ ಅದರ ಮಿತಿಯಲ್ಲಿಯೇ ಓದುವ ಅಭ್ಯಾಸ ಬೆಳೆದದ್ದು ಬಹುಶಃ ಸ್ತ್ರೀವಾದ ಪ್ರಖರಗೊಂಡ ಕಾಲದಲ್ಲಿರಬೇಕು. ಆಗಿನಿಂದ ಈಗಿನವರೆಗು ಹೆಣ್ಣುಲಕ್ಷಣಗಳನ್ನು ಹುಡುಕುವುದರಾಚೆ ವಿಮರ್ಶೆ ಬೆಳೆದೇ ಇಲ್ಲ. ಹೇಮಾ ಪಟ್ಟಣಶೆಟ್ಟಿ ಕಾವ್ಯ ಕರ್ಮ ಪ್ರರಂಭಿಸಿದಾಗ ಅವರ ಸೌಭಾಗ್ಯವೋ ದೌರ್ಭಾಗ್ಯವೋ ಸ್ತ್ರೀಯರ ಕಾವ್ಯ ಹುಲುಸಾಗಿ ಬರುತ್ತಿತ್ತು. ಆ ಗೆಲಾಕ್ಸಿಯಲ್ಲಿ ಇವರೂ ಒಬ್ಬರಂತೆ ಕಂಡು, ಅವರ ಕವಿತೆಗಳ ಗುಣಾವಗುಣಗಳ ಚರ್ಚೆ ಬಿಚ್ಚಿಕೊಂಡಂತೆ ಕಾಣುವುದಿಲ್ಲ.
`ವಿರಹೋತ್ಸವ'ದಿಂದ ಕಾವ್ಯಪ್ರವೇಶ ಪಡೆದ ಹೇಮಾ ಪಟ್ಟಣಶೆಟ್ಟಿ ಈವರೆಗೂ `ಹೊಸಹಾಡು', `ಕಣ್ಣುಗಳಲ್ಲಿ ಕನಸು ತುಂಬಿ'. `ಊಸಿರ ಬದುವಿನ ಗುಂಟ' - ಎಂಬ ನಾಲ್ಕು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಒಂದೊಂದು ಸಂಕಲನಕ್ಕೂ ನಡುವ ಸಾಕಷ್ಟು ಅಂತರಗಳಿವೆ. ಸುಮಾರು ೨೦-೨೫ ವರ್ಷಗಳಿಂದ ಕಾವ್ಯಕರ್ಮದಲ್ಲಿ ಆಸಕ್ತಿಯಿಟ್ಟುಕೊಂಡು, ಅದರಲ್ಲಿ ತೊಡಗಿಸಿಕೊಂಡ ಈ ಕವಯಿತ್ರಿಯ ಕಾವ್ಯ ಅವರ ಕಾಲದ ಕವಿಯಿತ್ರಿಯರ ದನಿಗಳಿಗಿಂತ ಭಿನ್ನವಾಗಿದೆ. ಆದರೆ ಸಮೂಹಗಾನದ ಆಲಾಪದಲ್ಲಿ ಆ ಭಿನ್ನದನಿಯು ಅಷ್ಟಾಗಿ ಕೇಳದೇ ಹೋಗಿದೆ.
ಹೇಮಾ ಪಟ್ಟಣಶೆಟ್ಟಿಯವರ ಕಾವ್ಯ ಒಂದು ವಿಶೇಷ ಬಗೆಯ ಲಯವನ್ನು ಹೊಂದಿದೆ. ಅದೆಂದರೆ, ಅಲ್ಲಿ ನಾವು ಕಾಣುವ ಪ್ರಶ್ನಾವಳಿಗಳು. ಕವಿತೆ ಅವರಲ್ಲಿ ಹುಟ್ಟುವುದೇ ಪ್ರಶ್ನೆಗಳನ್ನು ಹಾಕಿಕೊಳ್ಳುವುದರ ಮೂಲಕ. ಮತ್ತು ನಾನು ಎಂಬ ಆತ್ಮಪ್ರತ್ಯಾಯದಿಂದಲೇ ಅವರ ಕಾವ್ಯ ಉಸಿರಾಡುತ್ತದೆ. ಸ್ಥೂಲವಾಗಿ ಹೇಳಬಹುದಾದರೆ ಹೇಮಾ ಅವರದು ಆತ್ಮಕೇಂದ್ರಿತ ಧೋರಣೆಯನ್ನು ಹೇಳುವಂತದ್ದು.
ಡಿ.ಆರ್. ನಾಗರಾಜ್ ಗುರುತಿಸುವಂತೆ ಮಹಿಳೆಯರ ಬರವಣಿಗೆಯಲ್ಲಿ `ನಾನು' ಎಂಬುದು ವಿವರಿಸಿಕೊಳ್ಳುವ ಹಂತದಲ್ಲಿ ಊಲಿದಿದೆ. ಅದು ಬಹುಶಃ ಆ ಕಾಲದ ಎಚ್ಚೆತ್ತ ಪ್ರಜ್ಞೆಯನ್ನು ಇಟ್ಟುಕೊಂಡ ಸ್ತ್ರೀಯ ಬರವಣಿಗೆಗಳಲ್ಲಿ ಕಾಕತಾಳೀಯವೆಂಬಂತೆ ಈ ಸರ್ವನಾಮ ಕಾಣಿಸಿಕೊಳ್ಳುತ್ತ ಬಂದಿರುವುದು ಡಿ.ಆರ್. ಅವರ ಮಾತಿಗೆ ತಕ್ಕನಾಗಿ ಕಾಣುತ್ತದೆ. ಹೇಮಾ ಈ ಅಂಶವನ್ನು ಕೈಬಿಟ್ಟಿಲ್ಲ. ಮತ್ತು ಪ್ರಶ್ನಾರ್ಥಕ ನೆಲೆಯಲ್ಲಿ ನಿಂತು ಕೇಳಿ ಕೊಳ್ಳುವ, ಹುಡುಕುವ ಅವಕಾಶಗಳನ್ನು ಬಿಟ್ಟುಕೊಡುವುದೂ ಇಲ್ಲ. ಆದರೆ ಇದರಲ್ಲಿಯೇ ಸಮೂಹನಿಷ್ಠೆಯ ಗುಣವಿರುವ, ಅದಂದರೆ ನಾನು ಎಂಬುದನ್ನು ಸಾರ್ವತ್ರಿಕವಾಗಿ ಗುರುತಿಸಿಕೊಂಡು, ಸ್ತ್ರೀ ಬದುಕಿನ ಗುಣಲಕ್ಷಣಗಳನ್ನು ಒಂದು ಹಂತದಲ್ಲಿ ಸಮೀಕರಿಸಿಕೊಂಡು ನೋಡುವುದನ್ನು ಹೇಮಾ ಅವರ ಕಾವ್ಯದಲ್ಲಿ ಕಾಣಲಾಗುವುದಿಲ್ಲ. ಅಂದರೆ ಪ್ರತಿಭಾ ನಂದಕುಮಾರರ ಸಾಲು ಹೇಳುವಂತೆ `ನಾವು ಹುಡುಗಿಯರೇ ಹೀಗೆ' ಎಂತಲೋ, ಅಥವಾ ಎಚ್.ಎಸ್. ಮುಕ್ತಾಯಕ್ಕ ಹೇಳುವಂತೆ, `ನಿಮ್ಮ ಮಾನಾಪಮಾನವನು | ಕಾಪಾಡಲು ನಿಮ್ಮಿಂದಲೇ ಪತಿವ್ರತೆಯರ ಪಟ್ಟಕ್ಕೇರಿ ಎಂದೋ ಹೀಗೆ. ಆದರೆ ಹೇಮಾ ಈ ರೀತಿ ಸಾರ್ವತ್ರಿಕಗೊಳಿಸುವ ಗೋಜಿಗೆ ಹೋದಂತೆ ಕಾಣುವುದಿಲ್ಲ. ಅಕಸ್ಮಾತ್ ಇದ್ದರೂ ಅದು ಗೌಣ ಎನಿಸುವುಷ್ಟು ಕಾಣುತ್ತದೆ. ಸೂಕ್ಷ್ಮಗಳಿಗೆ ಎಡೆಯಿರದ, ಮಿಥ್‌ಗಳಿಗೆ ಹೇರಳವಾಗಿ ಅವಕಾಶ ಇರುವ ಈ ಸ್ತರದಲ್ಲಿ ಹೇಮಾ ತಮ್ಮ ಕಾವ್ಯವನ್ನು ತೆರೆದಿಡುವ ಪ್ರಯತ್ನ ಮಾಡುವುದಿಲ್ಲ. ಮೇಲಾಗಿ ಈ ಹೇಮಾ ತಮ್ಮ ಕಾವ್ಯವನ್ನು ತೆರೆದಿಡುವ ಪ್ರಯತ್ನ ಮಾಡುವುದಿಲ್ಲ. ಮೇಲಾಗಿ ಈ ಬಗೆಯ ಕವಿತೆಗಳಲ್ಲಿ ರಾಜಕೀಯ ಹಕ್ಕುಗಳ ಧ್ವನಿ ಸ್ಪಷ್ಟವಾಗಿ ಕೇಳುತ್ತಿರುತ್ತದೆ. ಅಸಮಾನತೆಯ ಏರುಪೇರುಗಳ ಕುರಿತು ಯಾವುದೇ ಹಂತದಲ್ಲಿ ದನಿ ಎತ್ತುತ್ತಿರುವುದು ಕಾಣುತ್ತದೆ.
ಇದನ್ನು ಬಿಟ್ಟು ವ್ಯಕ್ತಿನಿಷ್ಠತೆಯನ್ನು ನೆಚ್ಚುವ `ನಾನು' ಎಂಬ ವಲಯಕ್ಕೆ ಬಂದರೆ ನಾನು ಎಂಬುದು ಆಧ್ಯಾತ್ಮಿಕ ಸ್ವರೂಪದಲ್ಲಿ, ಆತ್ಮನಿರೀಕ್ಷಣೆಯ ಸ್ವರೂಪದಲ್ಲಿ. ಮೆಟಫಿಸಿಕಲ್ ಹಂತದಲ್ಲಿ ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ಕನ್ನಡ ಕಾವ್ಯ ಪರಂಪರೆಯಲ್ಲಿ ಆತ್ಮನಿಷ್ಠವಾದ ಆತ್ಮನಿರೀಕ್ಷಣೆ, ಆಧ್ಯಾತ್ಮಿಕ ಹುಡುಕಾಟವನ್ನು ಹೊಂದಿದ ಸಂಪದ್ಭರಿತ ಕಾವ್ಯಗಳೇ ಇವೆ. ಆತ್ಮನಿರೀಕ್ಷಣೆಗೆ ಮಾದರಿಯನ್ನು ಹಾಕಿಕೊಟ್ಟ ಬಸವಣ್ಣನಂತಹ ಕವಿಗಳಿದ್ದಾರೆ. ಬಸವಣ್ಣ ಆತ್ಮ ನಿರೀಕ್ಷಣೆಯ ಮಾಗದಲ್ಲಿ ನಾನು ಎಂಬುದನ್ನು ಬಳಸುವಾಗ ಸೂಕ್ಷ್ಮವಾಗಿ ಅದು ಸಾಮಾಜಿಕವಾದ ಮತ್ತು ವೈಯಕ್ತಿಕವಾದ ವಲಯಗಳೆರಡರಲ್ಲಿಯೂ ವಿಸ್ತರಿಸಿಕೊಳ್ಳುತ್ತಾರೆ. ನಿಷ್ಠೆ, ಪ್ರಮಾಣಿಕತೆಯ ಸ್ವರೂಪಗಳು ಹೆಚ್ಚಾಗಿ ಸ್ಫಟಿಕದ ಪಾರದರ್ಶಕತೆಯನ್ನು ಸೂಚಿಸುತ್ತವೆಯಲ್ಲದೆ, ಹೊರಗಿನ ಸಾಮಾಜಿಕ ವರ್ತನೆಗಳಿಗೂ, ವೈಯಕ್ತಿಕ ವರ್ತನೆಗಳಿಗೂ ಇರಬಾರದ ಅಡೆತಡೆಗಳ ಬಗ್ಗೆ ಹೇಳುವಂತದ್ದಾಗಿದೆ. ಆದರೆ ಆ ಪ್ರತೀಕಗಳ ಹಾದಿಯಲ್ಲಿ ಇರುವಂತೆ ಕಾಣುವ ಹೇಮಾ ಒಲವು ಆ ಹಂತದಲ್ಲಿಯೂ ನಿಂತಿಲ್ಲ. ಇನ್ನು ಆಧ್ಯಾತ್ಮಿಕವಾದ `ನಾನು' ಎನ್ನುವುದು ಇಲ್ಲವಾಗುವ ಕ್ರಿಯೆಯನ್ನು ಸೂಚಿಸುವಂತದ್ದು. ನಾನು ಎಂದರೆ ಏನು-ಎಂಬ ಪ್ರಶ್ನೆ ಹಾಕಿಕೊಳ್ಳುತ್ತ ಅದನ್ನು ಛೇದಿಸಿಕೊಳ್ಳುತ್ತ ಹೋಗುವುದು ಮತ್ತು ಕೊನೆಗೆ ಏನೂ ಉಳಿಯದೆ ಇರುವ ಒಂದು ಶೂನ್ಯಸ್ಥಿತಿಯಲ್ಲಿ ಕರಗುವ ಕಲ್ಪನೆಯದು. ಈ ಬಗೆಯ ಹುಡುಕಾಟ ಅನುಭಾವದ ನೆಲೆಯನ್ನೂ ಹೇಮಾ ಕಾವ್ಯ ನಿರಾಕರಿಸುತ್ತದೆ. ಆಧ್ಯಾತ್ಮಿಕ ಅಥವಾ ಡೈಡಾಕ್ಟಿಕ್ ಅನ್ನಿಸಿಕೊಳ್ಳುವ ಕಾವ್ಯದಲ್ಲಿ ಅತ್ಯಂತಿಕ ಅನ್ನಿಸಿಕೊಳ್ಳುವಂತದ್ದು ಇರತ್ತದೆ. ಆ ಬಗೆಯ ಕೊನೆಮುಟ್ಟುವ ಆತುರವನ್ನು ಹೇಮಾ ಅವರ ಕಾವ್ಯ ತೋರುವುದಿಲ್ಲ. ನಿರ್ಬಯಲು, ಬಯಲು, ಬೆತ್ತಲೆ - ಎಂಬ ಶಬ್ದಗಳನ್ನು ಅವರು ತಮ್ಮ ಕಾವ್ಯದಲ್ಲಿ ಆಗ್ಗಿಂದಾಗ್ಗೆ ಬಳಸಿದ್ದಾರೆ. ಆದರೆ ಅವು ಪೂರ್ಣ ಸ್ವರೂಪದಲ್ಲಿ ಆಧ್ಯಾತ್ಮಿಕ ಆಶಯಗಳನ್ನು ಹೊಮ್ಮಿಸುವಂತೆ ಕಾಣುವುದಿಲ್ಲ.
ಇನ್ನೊಂದು ಬಗೆಯ ಹುಡುಕಾಟದ ಹಾದಿಯನ್ನು ಅವರ ಕಾವ್ಯ ಹುಡುಕುತ್ತಿದೆ:
ನಾನಾ ಎಂದು
ನನಗಿರುವ ಹಸಿರು
ನಾನಾ ಬಗೆ,
ಇದಕೆ ಸಮುದ್ರ ತೃಷೆ ನೆಲದೂಟ
ಆಕಾಶದತಿ ವ್ಯಂಜನ ಮೆಲ್ಲಬೇಕೆನ್ನುವ
(ಹಸಿವು: ಕಣ್ಣುಗಳಲ್ಲಿ ಕನಸು ತುಂಬಿ).
`ನಾನು' ಎನ್ನುವ ಸ್ವರೂಪ ದಿನದಿನಕ್ಕು ಬದಲಾಗುತ್ತ ಇರುವಂತಹದ್ದು. ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣವಿರುವುದಿಲ್ಲ. ಈ ಬದಲಾವಣೆ ಅಸ್ತಿತ್ವದ ಸೂಕ್ಷ್ಮಸ್ಥಿತಿಯನ್ನು ಸೂಚಿಸುತ್ತಿರುತ್ತದೆ. ಬದಲಾಗುತ್ತಿರುವ ಸ್ಥಿತಿಗಳ ಸ್ವರೂಪ ಅರಿಯುವ ಪ್ರಯತ್ನ ಮತ್ತು ಅದನ್ನು ಅರಿಯುವ ಶೋಧದಲ್ಲಿ ತೊಡಗುವುದರಿಂದಲೇ ಹೇಮಾ ಅವರ ಕಾವ್ಯ ಪ್ರಶ್ನಾವಳಿಗಳನ್ನು ಹಾಕಿಕೊಳ್ಳುವ ವಿನ್ಯಾಸ ರೂಪಿಸಿಕೊಂಡಿದೆಯೇನೋ. ನಿತ್ಯ ನೋಯುವ, ಸಾಯುವ, ರಗಳೆಗಳಲ್ಲಿ ಮುಳುಗಿರುವ ಲೋಗರ ಬದುಕಿನ ಅಣು ಕ್ಷಣದ ಸವಾಲಿನ ಪ್ರಶ್ನೆಗಳನ್ನು ಇಲ್ಲಿ ಅವರು ಕಾಣಲು ಬಯಸುತ್ತಾರೆ:
ಹೆಸರಾಗಿ ಹೆಸರಿನಲಿ ಕಳೆದು
ಹೋದಾಗ ಬಯಸಿದ್ದು ಬಂದಾಗ
ಗಳಿಕೆಯೇ ಕಳಯುವಿಕೆಯಾಗಿ
ಎಲ್ಲಿರುವೆ ಏನಾದ
ಬರಿ ತಾಯಿ-
ಪಳೆಯುಳಿಕೆ?
(ತಲ್ಲಣ: ಉಸಿರ ಬದುವಿನ ಗುಂಟ)
ಹೇಮಾ ಈ ನಿತ್ಯದ ಬದುಕನ್ನು ಅನುಭವಿಸುವ ತಹತಹದಲ್ಲಿರುವ ಲಕ್ಷಣ ತೋರಿದರೂ, ಅದರಲ್ಲಿ ಉತ್ಸಾಹದ ಮೇರೆ ಮೀರುವ ಗುಣವಿಲ್ಲ. ಆದರೆ ಅವರು ತಮ್ಮಿಂತಾವೆ ಹೇಳಿಕೊಳ್ಳುವಂತೆ ಬರುವ ಸಾಲುಗಳು ತಾನಾಗಿಯೇ ಹುಡುಕಾಟದ ದಾರಿಗೆ ಹೊರಳುವಂತಿವೆ. ಈ ಸಾಲುಗಳನ್ನು ಗಮನಿಸಬೇಕು:
ನನಗೆ ಬೇಕಾದದ್ದು ಅಲ್ಲ ಕನಸಿನ ಲೋಕ
............................
ನನಗೆ ಭಾವದ ಸತ್ಯ ನಿತ್ಯ ಉಸಿರಿನ ಜೊತೆಗೆ
ಬದುಕಾಗಬೇಕು
(ಆಯ್ಕೆ: ವಿರಹೋತ್ಸವ)
ಅವರ `ಉಸಿರ ಬದುವಿನ ಗುಂಟ ಸಂಕಲನದಲ್ಲಿ ಅವರು ಅಕ್ಕಮಹಾದೇವಿಯನ್ನು ತಡವಿಕೊಳ್ಳುತ್ತಾರೆ. ಅನುಭಾವದ ಅಶಯ ಹುಟ್ಟಿಸಿದ ಹೆಣ್ಣಾಗಿ ಪುರುಷ ಪ್ರಧಾನ ಸಮಾಜದಲ್ಲಿ ಮನ್ನಣೆ ಪಡೆದ ಅಕ್ಕ, ಕವಯಿತ್ರಿಯರಿಗೆ ಮನೆ ಬಿಟ್ಟು ಹೋಗುವ, ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಕಾರಣಕ್ಕಾಗಿ ಅವರ ಪ್ರೀತಿ ಗಳಿಸಿದ್ದಾಳೆ. ಆದರೆ ಹೇಮಾ ಪದ್ಯ ಪ್ರಾರಂಭವಾಗುವುದು ಹೀಗೆ:
ಈ ಬದುಕು ಈಗಲೂ ಗಹನ
ಕದಳೀವನ - ಎಂದು.
ಕದಳೀವನದ ಅನುಭಾವದ ಹೊಂದಿಕೆಗಳನ್ನು ಬದಿಗೆ ಸರಿಸುತ್ತಾ ಹೋಗಿ, ಬಾಳೇ ಬಾಳೇವು ಎಂಬ ಪದಗಳಲ್ಲಿ ಆಟವಾಡುತ್ತಾರೆ. ಆದರೆ ಅಕ್ಕ ದಾಟಿ, ಮುಟ್ಟಿದ ಕದಳೀವನದ ಬಗ್ಗೆ ಲಕ್ಷ್ಯ ಇಲ್ಲಿ ಕವಯಿತ್ರಿಗಿಲ್ಲ. ಅವರು ಅಕ್ಕನಿಗೆ ಕೇಳುವುದು ಇಷ್ಟು:
ಬೆಳೆಯಬಹುದಿತ್ತು ಇದೇ ಈ ಕದಳಿಯಲಿ
ಪ್ರತಿ ಉಸಿರ ಬದುವಿನ ಗುಂಟ ಬದುಕ ಬಾಳೆ
....................
ಇಹದ ಗಂಡನ ಕೂಡಿ, ಬದುಕಿ
ಎಲ್ಲ ಬ್ರಹ್ಮಾಂಡಗಳ ತದಕಿ
ಉಳಿಸಿ ನಿನ್ನದೇ ಅಸ್ಮಿತೆ
ಇಲ್ಲಿ ವಿಜೃಂಭಿಸಿದ ತರ್ಕಾತೀತ ಪ್ರಶ್ನೆ ಸವಾಲು
ದಿವ್ಯದಿಬ್ಬಗಳನ್ನು ನೀನೆದುರಿಸಿದ್ದರೆ....
-ಎನ್ನುತ್ತಾರೆ. `ಇಲ್ಲಿ ಬದುಕುವುದೇ ಪ್ರಶ್ನೆ' ಎನ್ನುವ ಹೇಮಾ, ವಸ್ತುಸಹಜ ಬದುಕಿನ ವ್ಯಮೋಹ, ತಲ್ಲಣಗಳು ಮುಖ್ಯವಾಗುವುದನ್ನು ತಮ್ಮ ಕಾವ್ಯದಲ್ಲಿ ತಂದುಕೊಳ್ಳುತ್ತಾರೆ.
ಹೇಮಾ ಅವರು ಬಳಸುವ `ನಾನು' ಎನ್ನುವುದನ್ನು `ಬಯಲು' ಪದದ ಜೊತೆ ಇಟ್ಟು ನೋಡಬೇಕು ಅನ್ನಿಸುತ್ತದೆ. ನಾನು ಎನ್ನುವುದು ಆವರಣಗಳಿಂದ ಆವರಿಸಿಕೊಂಡಿದೆ. ಅದನ್ನು ಬಿಡಿಸಿಕೊಂಡು ಸಹಜತೆಯತ್ತ ತಿರುಗುವ ಮನಸ್ಸು ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ. ಕದಳೀವನದ ಪರಿಭಾಷೆಯಲ್ಲಿ ವಿವರಿಸಬಹುದಾದರೆ ಹೇಮಾ ಅವರ ನಾನು ಎಂಬ ಸ್ವರೂಪ ಬದಲಾಗುವುದನ್ನೆ ಗುರುತಿಸಬಹುದು. ಬಾಳೆಗಿಡ ಒಂದು ಕಂದನ್ನು ಹಾಕಿದೊಡನೆ ಸಾಯುತ್ತದೆ. ಹೀಗೆ ವ್ಯಕ್ತಿತ್ವಗಳು, ಸಾಮಾಜಿಕ ಚಹರೆಗಳು ಬದಲಾಗಬೇಕೆಂದರೆ ಒಂದು ಸತ್ತೆ ಇನ್ನೊಂದಕ್ಕೆ ಅಸ್ತಿತ್ವ ಸಿಗುವಂತದ್ದು. ಈ ಬದಲಾಗುವ, ನಿರಂತರತೆಯನ್ನೆ ಹೇಮಾ ತಮ್ಮ ಕಾವ್ಯಜೀವನದಲ್ಲಿ ಕಂಡಕೊಳ್ಳಬಯಸುವುದು.
ಹೇಮಾ ಪಟ್ಟಣಶೆಟ್ಟಿಯವರ ಕಾವ್ಯದಲ್ಲಿ ಆಗಿದ್ದಾಂಗೆ ಪ್ರಸ್ತಾಪಿಸಲ್ಪಡುವುದು ಮಗು ಮತ್ತು ಕನಸು. ಈ ಸಾಲು ನೋಡಿ;
ನನ್ನ ಸಂತಯಿಸುವ ಮಕ್ಕಳು ಕವನಗಳು
(ಸಂಕರ: ವಿರಹೋತ್ಸವ).
ಮೊದಲ ಸಂಕಲನದಲ್ಲೇ ಇಂತಹ ಸಾಲುಗಳನ್ನು ಬರೆಯುವ ಹೇಮಾ ಈ ತನಕ ಅದನ್ನು ಉಳಿಸಿಕೊಂಡೇ ಬಂದಿದ್ದಾರೆ.
ನಮಗಾಗಿ ಬರುತ್ತದೆ
ನನ್ನ ಮುಗ್ಧ ಮಗುವಿನ ಹಾಗೆ
..................
ಒಂದು ಚಣ
ತುಟಿಯಂಲಚಿ ನಕ್ಕು! ಮಗನನ್ನು ಎತ್ತಿಕೊಳ್ಳುತ್ತೇನೆ
(ಯುಗಾದಿಗೊಂದು ಕನ್ನಡಿ: ಕಣ್ಣುಗಳಲ್ಲಿ ಕನಸುತುಂಬಿ)
ಈ ಮಗು ಸಹಜ ಮುಗ್ಧತೆ ಅವರು ಬಯಸುವ ಭಾವ. ನಿರ್ಮಲವಾದ ಸಹಜತೆಯ ಸ್ವರೂಪದಲ್ಲಿ ಬರುವ ಮಗು ಅವರು ಸೇರಬಯಸುವ ಗುರಿ. ಏನಾದೆ, ಏನಾದೆ ಎಂದು ಕೇಳಿಕೊಳ್ಳುತ್ತ ಮಗುವಿನ ಸೂಚನೆಗಳನ್ನು ಕೊಡುವಾಗ ಸ್ಥಿತಿಗೆ ಹಿಂದಿರುಗುವ ಬಯಕೆಯನ್ನು ಕಾಣಬಹುದು. ಇದನ್ನು ಇನ್ನೊಂದು ರೀತಿಯಲ್ಲಿ ವಿವರಿಸಬಹುದಾದರೆ ಜೀವನ್ಮುಖಿ ಧೋರಣೆಯನ್ನೆ ಹೇಳುತ್ತದೆ. ಒಂದಿಲ್ಲೊಂದು ಕಾರಣದಿಂದ ಅವರ ಕವಿತಗೆಳಲ್ಲಿ ಬದುಕಿನ ಪ್ರೇಮವು ಮೇಲುಗೈ ಪಡೆಯುತ್ತದೆ ಎನ್ನುವುದನ್ನು ಅವರ `ಗೆಳತಿ ಡಯಾನಾಗೆ' ಪದ್ಯ ವಿವರಿಸುತ್ತದೆ.
ಪ್ರಕೃತಿ ಹೇಮಾ ಕವನಗಳಲ್ಲಿ ಕಾಣಿಸಿಕೊಳ್ಳುವ ಮಹತ್ವ ಅಂಶ. ಪ್ರಕೃತಿಯನ್ನು ವರ್ಣಿಸುವ ಧಾವಂತದಲ್ಲಿ ಹೇಮಾ ಪ್ರಕೃತಿಯನ್ನು ವಿವರಗಳನ್ನು ಬಯಸುವುದಿಲ್ಲ. ಬದಲಾಗಿ, ಪ್ರಕೃತಿಯ ಸದಾ ಬದಲಾಗುವ ಸ್ವರೂಪಗಳೆ ಅವರ `ನಾನು' ಶೋಧದ ಭಾಗವಾಗಿದೆ. ಪ್ರಕೃತಿ ಎನ್ನುವುದು ಮತ್ತೆ ಅಕ್ಕಮಹಾದೇವಿಯಲ್ಲಿ ಆಪ್ತವಾಗಿ ಒದಗುವಂತೆ ಹೇಮಾ ಅವರಿಗೆ ಕಾಣುವುದಿಲ್ಲ. ಅದು ಅವರಿಗೆ ಅವರ ಸುತ್ತ ಇರುವ ವಾಸ್ತವ. ಅದನ್ನು ಹುಡುಕಿ ಹೊರಡುವ ಚೈತನ್ಯವನ್ನಾಗಿ ಅವರು ನೋಡುವುದಿಲ್ಲ.
ಪ್ರಕೃತಿಯನ್ನು ಕವನಗಳಲ್ಲಿ ತರುವುದನ್ನೇ ಹೇಮಾ ಕಾಯಕ ಮಾಡಿಕೊಳ್ಳುವುದಿಲ್ಲ. ಹಾಪ್‌ಕಿನ್ಸ್ ಕವಿ ಪ್ರಕೃತಿಯಲ್ಲಿನ ಅಂಶ ನಮ್ಮೊಳಗು ಚಾರ್ಜ್ ಆಗುವ ಬಗ್ಗೆ ಬರೆಯುತ್ತಾನೆ. ಈ ಸಾವಯವ ಸ್ಪಂದನದ, ಆಗುವಿಕೆಯ ಕ್ರಿಯೆಯ ಮಧ್ಯೆ ಹೇಮಾ ಓಡಾಡಲು ಬಯಸುತ್ತಾರೆ. ಈ ಅಂತಃಸತ್ವ ಹೆಣ್ಣಿನ ಕ್ರಿಯಾಶೀಲ ಚೇತನದ ಇನ್ನೊಂದು ಸ್ವರೂಪ. ಅದನ್ನು ಹೇಮಾ ಹಿಡಿಯಲು ಬಯಸಿದಂತಿದೆ.
ಇನ್ನು ಹೇಮಾ ಅವರ ಆಶಯಗಳಿಗೆ ವಿರುದ್ಧವಾದ ಪದ್ಯಗಳೂ ಅವರ ಸಂಕಲನದಲ್ಲಿ ಸೇರಿಕೊಂಡಿವೆ! ಅವು ನಾನು ಆಗಲೇ ವಿವರಿಸಿದಂತೆ ಕರೆಕ್ಟ್‌ನೆಸ್ ಅನ್ನು ಸಾಧಿಸ ಬಯಸುವ ಕವನಗಳು. ಅವುಗಳನ್ನು ಹೇಮಾ ಭಾವಿಸಿ ಬರೆಯುವಂತೆ ಕಾಣುವುದಿಲ್ಲ. ಹಾಗಾಗಿ ಅಂತಹ ಪದ್ಯಗಳು ಅವರ ಆಶಯಗಳಿಗೆ ಹೊರತಾಗಿಯೇ ನಿಲ್ಲುತ್ತವೆ. ಜೊತೆಗೆ, ಕೆಲವೆಡೆ ಮಧ್ಯಮವರ್ಗದ ನಿಶ್ಚಿತತೆ ಅವರನ್ನು ಬಾಧಿಸದಂತೆ ಕಾಣುತ್ತದೆ. ದೇಶಭಕ್ತಿಯ ಕವನಗಳು, ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸಲು, ತೊಡಗುವ ಅರಿವು - ಇವು ಆ ವರ್ಗದ ಹೊಸ ಅರಿವಿನ ಪ್ರಕಟ ರೂಪವಾಗಿ ಕಾಣುತ್ತದೆ. `ಸ್ವಯಂ ಸಿದ್ಧಳಾಗುವುದನ್ನು ಕಲಿಯುತ್ತೇನೆ' ಎನ್ನುವ, `ಹತ್ತರಲಿ ಹನ್ನೊಂದಾಗಿ ಬಾಳಲೊಲ್ಲೆ', ಎನ್ನುವ ಹೇಮಾ ಈ ಜಾಡಿನಲ್ಲಿ ಸಾಗುವುದು ಸ್ವಲ್ಪ ನಿರಾಶೆಯನ್ನೇ ಉಂಟುಮಾಡುತ್ತದೆ. ನಿತ್ಯ ಉಸಿರಾಟದ ಸಹಜ ಲಯ ಅಂದುಕೊಳ್ಳದೆ, ಅದರ ಬದುವಿನಗುಂಟ ಸಾಗಬಯಸುವ ಸಹಜ ಬದುಕಿನ ಆಶಯದ ಕವಯಿತ್ರಿ ತಮ್ಮ ಹುಡುಕಾಟದ ದಾರಿಗಳನ್ನು ಇನ್ನಷ್ಟು ಆಳಕ್ಕೆ, ಅರಿವಿನ ವಿಸ್ತಾರದಿಂದ ಪಡೆದುಕೊಳ್ಳಲಿ ಎಂದು ಹಾರೈಸುವುದು ಕನ್ನಡ ಕವಯಿತ್ರಿಯರ ಬಗ್ಗೆ ಆಶಾವಾದಿಯಾದ ನನ್ನಂತವರಿಗೆ ಉಳಿದ ಆಯ್ಕೆ.
*****
ಕೀಲಿಕರಣ: ಕಿಶೋರ್ ಚಂದ್ರ

0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ