ಕೆರೆ ಕೊಟ್ಟ ಕರೆ....

- ರಾಮಸ್ವಾಮಿ ಡಿ ಎಸ್

ನನ್ನ ಹುಟ್ಟೂರು ತರೀಕೆರೆ.  ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು ಬೆಂಗಳೂರಿನ ಕೆರೆಯೊಂದನ್ನು ಅಚ್ಚುಕಟ್ಟು ಮಾಡಿ ನಿರ್ಮಿಸಲಾದ ಬಡಾವಣೆ ಚನ್ನಮ್ಮನ ಕೆರೆ. ನಿನ್ನ ಪ್ರವರ ಯಾರು ಕೇಳಿದ್ದು ಅಂತ ಗೊಣಗಿದಿರಾ? ಸ್ವಲ್ಪ ಇರಿ. ಕೆರೆ ಅನ್ನುವ ಅಂತ್ಯಪ್ರಾಸ ಇರುವ ಊರುಗಳು ಕೆರೆಯ ಹಂಗೇ ಇಲ್ಲದೆ ಹೇಗೆ ಈಗ ಬದುಕು ಕಳೆದುಕೊಳ್ಳುತ್ತಿವೆ ಅಂತ ಕೊಂಚ ಆಲೋಚಿಸುವುದು ಈ ಬರಹದ ಉದ್ದೇಶ.

ಹಾಗೆ ನೋಡಿದರೆ ಎಲ್ಲ ಊರುಗಳಿಗೂ ಒಂದಲ್ಲ ಒಂದು ಕೆರೆಯ ಸಂಬಂಧ ಇರಲಿಕ್ಕೇ ಬೇಕು. ಕೃಷಿಗೆ, ನಿತ್ಯದ ಉಪಯೋಗಕ್ಕೆ, ಊರಿಗೊಂದು ನೀರಿನ ಮೂಲ ನೆಲೆ ಬೇಕೇ ಬೇಕು. ಬಯಲು ಸೀಮೆಯ ತರೀಕೆರೆ, ತುರುವೇಕೆರೆ, ನೊಣವಿನಕೆರೆ ಮುಂತಾದ ಸ್ಥಳ ನಾಮಗಳು ಆಯಾ ಊರುಗಳಲ್ಲಿರುವ ಕೆರೆಗಳಿಂದ ಬಂದದ್ದಾದರೆ, ತುಮಕೂರು ಪ್ರಾಂತ್ಯದ ಅಮ್ಮಸಂದ್ರ, ಬಾಣಸಂದ್ರ, ತಿಪ್ಪಸಂದ್ರ ಮುಂತಾದವು ಕೆರೆಗಿಂತಲೂ ದೊಡ್ಡದಾದ ನೀರಿನ ತಾಣ ಸಮುದ್ರ ಅನ್ನುವ ಅರ್ಥ ಸೂಸುವ ಸಂದ್ರಗಳ ಮೂಲಕ ಬಂದದ್ದು. ಎಮ್ಮೆಗಳು ಆರಾಮಾಗಿ ವಿಶ್ರಮಿಸಬಹುದಾದ ಜಾಗಕ್ಕೂ ಸಂದ್ರ ಅಂತ ಕರೆದಿರುವುದು ಆ ಜನ ಸಮುದ್ರವನ್ನು ಕಾಣದೇ ಇದ್ದುದ್ದಕ್ಕೇ ಇರಬಹುದೇನೋ? ಇನ್ನು ಹುಬ್ಬಳ್ಳಿಯ ಕಡೆ ಹೊಂಡ ಎನ್ನುವ ಅಂತ್ಯಪ್ರಾಸದ ಹಲವು ಹೆಸರುಗಳು ಸಿಕ್ಕುವಂತೆಯೇ ದಕ್ಷಿಣಕನ್ನಡದ ಬಹುತೇಕ ನೀರ ಝರಿಗಳಿಗೆ ತೀರ್ಥ ಅಂತ ಕರೆಯುವುದೂ ವಾಡಿಕೆ. ಈಗ ಹೆಸರಿಗಷ್ಟೇ ಕೆರೆ ಅಂತ ಅಂತ್ಯವಾಗುವ ಊರುಗಳಲ್ಲಿರಲಿ, ಬಹುತೇಕ ಎಲ್ಲ ಊರುಗಳಲ್ಲೂ ನಜೀರ್ ಸಾಬರ ದಯದಿಂದ ಹೆಜ್ಜೆಗೊಂದು ಕೊಳವೆ ಬಾವಿ ಬಂದ ಕಾರಣ ಆ ಊರುಗಳ ಕೆರೆಗಳೆಲ್ಲ ಸ್ಟೇಡಿಯಂಗಳಾಗಿ ಅಥವ ಹೊಸಬಡಾವಣೆಗಳಾಗಿ ಬದಲಾಗಿವೆ. ಕೆರೆ ಅನ್ನುವ ಪದಕ್ಕಿರುವ ನಿಘಂಟಿನರ್ಥಕ್ಕಿಂತಲೂ ಕೆರೆಗೆ ಹಾರವಾದ ಭಾಗೀರಥಿಯ ಕತೆಗೊತ್ತಿರುವವರಿಗೆ ಈ ಕೆರೆಗಳ ಜೊತೆಗಿರುವ ಭಾವನಾತ್ಮಕ ಸಂಬಂಧಗಳನ್ನು ಅರಿಯುವುದು ಸುಲಭ ಸಾಧ್ಯ.

ಕುಕ್ಕರಹಳ್ಳಿಯ ಕೆರೆ ಮೈಸೂರಿನವರಿಗಷ್ಟೇ ಅಲ್ಲದೇ ಕುವೆಂಪು ಮೂಲಕ ಕನ್ನಡ ಬಲ್ಲ ಎಲ್ಲರಿಗೂ ಗೊತ್ತಾದ ಹಾಗೇ, ತರೀಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತೂ ಅನ್ನುವ ನಾಲಿಗೆ ಹೊರಳಿಸುವ ಪದಗಳ ಮೂಲಕ ಗೊತ್ತಿದ್ದ ತರೀಕೆರೆ ಈಗ ವಿಮರ್ಶಕ ರಹಮತ್ ಹೆಸರಿಗೆ ಅಂಟಿಸಿಕೊಂಡ ಕಾರಣಕ್ಕೂ ಖ್ಯಾತಿಗೆ ಬಂದಿದೆ. ಕಳ್ಳರಸೀಕೆರೆ ಅಂತಲೇ ಖ್ಯಾತವಾದ ಅರಸೀಕೆರೆಯಲ್ಲೇ ನಟ ರಾಜಕುಮಾರ್‌ಗೆ ನಟಸಾರ್ವಭೌಮ ಅನ್ನುವ ಬಿರುದು ಬಂದದ್ದು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ! ಊರಿಗೆ ಬಂದವಳು ಕೆರೆಯ ನೀರಿಗೆ ಬಾರಳೇ ಅನ್ನುವ ಹಾಗೇ ಆ ಕೆರೇಲಿ ಹುಟ್ಟಿದಾಕೇನು, ಗೇಕೇನು, ಗೆಡ್ಡೇನು, ಗೆಣಸೇನು? ಅನ್ನುವ ಎಲ್ಲರ ಮಾನವನ್ನೂ ಕಳೆದು ಬಿಸಾಕುವ ಗಾದೆ ಮಾತೂ ಅಷ್ಟೇ ಪ್ರಖ್ಯಾತವಾದದ್ದು. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಅನ್ನುವ ದಾಸರ ಮಾತಿನ ಅಂತರಾರ್ಥ ಹಾಗೆಲ್ಲ ಲೌಕಿಕದ ಕೆಸರಲ್ಲಿ ಬಿದ್ದಿರುವ ನನ್ನಂಥ ಸಾಮಾನ್ಯರಿಗೆ ಅರ್ಥವಾಗದ್ದು.

ತಮ್ಮ ಹೆಸರಿನ ಪಕ್ಕದಲ್ಲೇ ಕೆರೆ ಅನ್ನುವ ಅಭಿದಾನವಿದ್ದೂ ಕೃಷಿಗಿರಲಿ ನಿತ್ಯೋಪಯೋಗದ ನೀರಿಗೂ ತತ್ವಾರವಿರುವ ಹಲವು ಹತ್ತು ಊರುಗಳ ಪಟ್ಟಿ ಕ್ಷಣಾರ್ಧದಲ್ಲಿ ಸಿದ್ಧಪಡಿಸಿಕೊಡಬಹುದು. ಅಂಥ ಊರಿನ ಕೆರೆಗಳ ಪಕ್ಕದ ಜಮೀನು ತೋಟಗಳವರು ತಮ್ಮ ಜಾಗವನ್ನು ಒತ್ತರಿಸಿ ಒತ್ತರಿಸಿ ಕೆರೆಯ ಮೂಲ ಆಕಾರಕ್ಕೆ ಕುಂದು ತಂದಿರುವ ಘಟನೆಗಳು ಕೆರೆಯಿರುವ ಎಲ್ಲ ಊರುಗಳ ಮಾಮೂಲಿ ಕರ್ಮಕಾಂಡ. ಮೊದಲೆಲ್ಲ ಕೆರೆ ಎಂದರೆ ಕುಡಿಯುವ ನೀರಿನ ಆಕರ. ಸಂಜೆ ಸೂರ್ಯ ಕಂತುವ ಮೊದಲು ಹಾಗೇ ಬೆಳಗು ಹರಿದು ಸೂರ್ಯ ನೆತ್ತಿ ಮೇಲೆ ಏರುವ ಮೊದಲೂ ಸೊಂಟದಲ್ಲೊಂದು ತಲೆಯ ಮೇಲೊಂದು ಬಿಂದಿಗೆಯಿಟ್ಟುಕೊಂಡ ಚೆಲುವೆಯರು ನೀರಿಗೆ ಕೆರೆಯ ದಾರಿ ಹಿಡಿದು ಬರುತ್ತಿದ್ದರೆಂದರೆ ಆ ಹೆಂಗೆಳೆಯರ ಗುಂಪು ಕಲರವ ಮಾಡುತ್ತ ಕಾಲು ಕಾಲಿಗೆ ತೊಡರುವ ತಮ್ಮ ಕಂದಮ್ಮಗಳನ್ನು ನಿವಾರಿಸಿಕೊಳ್ಳುತ್ತ ಆ ದಾರಿಯುದ್ದಕ್ಕೂ ಜಗಲಿಗಳ ಮೇಲೆ ಸೊಪ್ಪು ಶೋಧಿಸುತ್ತಲೋ, ಹೂವು ಕಟ್ಟುತ್ತಲೋ ಕುಳಿತಿರುತ್ತಿದ್ದ ಅಜ್ಜಮ್ಮಗಳನ್ನು ಮಾತನಾಡಿಸುತ್ತ ಕಷ್ಟ-ಸುಖ ಹೇಳಿಕೊಳ್ಳುತ್ತ ಹೋಗುತ್ತಿದ್ದರೆಂದರೆ ಆ ಮೋಜನ್ನು ಈಗ ವರ್ಣಿಸಲೂ ಅಸಾಧ್ಯವಾಗಿದೆ. ದನಕರುಗಳನ್ನು ಮೇಯಿಸಲು ಕೆರೆಯ ಏರಿಯ ಮೇಲೇ ಅಟ್ಟಿಕೊಂಡು ಹೋದ ದನಗಾಹಿಗಳ ಹಿಂದೆಯೇ ಕತ್ತೆಗಳ ಬೆನ್ನ ಮೇಲೆ ಬಟ್ಟೆಗಳ ಹೊರೆ ಹೊರಿಸಿಕೊಂಡು ಅಗಸರ ಕ್ಯಾರವಾನು ಬರುತ್ತಿತ್ತು. ಕೆರೆಯ ಮುಂದಣ ಪಾವಟಿಕೆಗಳ ಬಳಿ ಕುಡಿಯುವ ನೀರಿನ ಘಟ್ಟಗಳಿದ್ದರೆ ಜಾತಿಗೊಂದೊಂದರಂತೆ ಇರುತ್ತಿದ್ದ ಸ್ನಾನಘಟ್ಟಗಳಲ್ಲಿ ಆಯಾ ಕುಲಕಸುಬು ಬಿಡುವು ಕೊಟ್ಟ ವಾರದ ದಿನಗಳಲ್ಲಿ ಆಯಾ ಜಾತಿಯವರು ಮಡಿಯಾಗುತ್ತಿದ್ದರು. ಕೋಡಿ ಹತ್ತಿರವಿದ್ದ ದೋಭಿಘಾಟಿನಲ್ಲಿ ಊರವರೆಲ್ಲರ ಬಟ್ಟೆಗಳೂ ಮಡಿಯಾಗಿ ಕೋಡಿ ಕಲ್ಲುಗಳಲ್ಲಿ ಒಗೆದು ಒಣಹಾಕಿದ ಬಟ್ಟೆಗಳು ಸೂರ್ಯನ ಪ್ರಖರತೆಯನ್ನೇ ತಗ್ಗಿಸಿಬಿಡುತ್ತಿದ್ದವು. ಬಟ್ಟೆಯೊಗೆದು ಹಿಂಡಿ ಕಲ್ಲಿನ ಮೇಲೆ ಒಣಹಾಕಿ ಅವು ಗಾಳಿಗೆ ಹಾರದಂತೆ ಅವುಗಳ ಮೇಲೊಂದು ಪುಟ್ಟಕಲ್ಲಿನ ಭಾರವನ್ನು ಇರಿಸಿ ಪಾದಗಳನ್ನು ತರಚು ಕಲ್ಲುಗಳ ಮೇಲೆ ಉಜ್ಜುತ್ತಿದ್ದಾಗ ಪಾದದ ಸೀಳಿದ ಸಂದುಗಳಲ್ಲಿದ್ದ ಕೊಳೆ ತಿನ್ನಲು ಪಾದ ಚುಂಬಿಸುತ್ತಿದ್ದ ಮೀನಿನ ನೆನಪು ಬಲು ಮೋಜು. ಬಟ್ಟೆಯೊಗೆದು ಮೆತ್ತಗಾಗಿದ್ದ ಬೆಳೆದ ಉಗುರುಗಳನ್ನು ಕತ್ತರಿಸಿಹಾಕುವುದೂ ಎಷ್ಟು ಸುಲಭದ ಕೆಲಸವಾಗಿತ್ತು. ನೈಲ್ ಕಟ್ಟರಿನಲ್ಲಿ ಗಂಟೆಗಟ್ಟಲೇ ಒದ್ದಾಡಿದರೂ ಸ್ವಚ್ಛವಾಗದ ಟ್ರಿಂ ಆಗದ ಬೆರಳ ಉಗುರುಗಳು ಕ್ಷಣಾರ್ಧದಲ್ಲಿ ಸುಲಭವಾಗಿ ಸಾಪುಗೊಳ್ಳುತ್ತಿದ್ದುದ್ದರ ಮಜವೇ ಬೇರೆ.

ಊರಿನವರೆಲ್ಲರ ನೀರಿನ ಅಗತ್ಯತೆಯನ್ನೂ ಊರಿನಲ್ಲಿದ್ದ ಒಂದು ಕೆರೆಯೇ ಪೂರೈಸುತ್ತಿದ್ದದ್ದು ಈಗಲೂ ಆಶ್ಚರ್ಯದ ಮಾತೇ. ಜನ ಜಾನುವಾರುಗಳಿಗಾಗಿ ಮಿಕ್ಕುವಂತೆ ಆ ಕೆರೆಯನ್ನು ಪರಿಪೋಷಿಸುತ್ತಿದ್ದ ರೀತಿಯೂ ಸ್ತುತ್ಯಾರ್ಹವೇ. ತಳವಾರ ನೀರುಕಂಟಿ ಭದ್ರಯ್ಯ ಯಾವ ಜಲತಜ್ಞ ಇಂಜಿನಿಯರಿಗಿಂತಲೂ ಮಿಗಿಲಾಗಿ ಕೆರೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನೆಂದರೆ ಸ್ವತಃ ಪಟೇಲರು, ಶ್ಯಾನುಭೋಗರು ಅಥವ ಒಮ್ಮೊಮ್ಮೆ ಅಮಲ್ದಾರರು ಉಸ್ತುವಾರಿಯ ಬಗ್ಗೆ ನಿಗಾ ವಹಿಸುವುದು ಹೆಚ್ಚುಕಡಿಮೆ ಮಾಡಿದರೂ ಅವನು ತಡೆದುಕೊಳ್ಳುತ್ತಿರಲಿಲ್ಲ. ಕೆರೆಯ ತೂಬೆತ್ತಿ ನೀರು ಬಿಡುವುದಕ್ಕೂ ಅವನ ಪಂಚಾಂಗವೇ ಬೇರೆಯದಿತ್ತು. ಯಾರ ಜಮೀನಲ್ಲಿ ಯಾವ ಯಾವ ಬೆಳೆ ಬೆಳೆದಿದ್ದಾರೆ, ಅದಕ್ಕೆ ಅಗತ್ಯವಿರುವ ನೀರೆಷ್ಟು ಎನ್ನುವುದರ ಸಂಪೂರ್ಣ ವಿವರ ಅವನಲ್ಲಿರುತ್ತಿತ್ತು. ಕೆರೆಯ ಸ್ವಚ್ಛತೆಗೆ ಕೊಂಚ ಭಂಗ ತಂದವರಿಗೂ ಅವನ ದಂಡದ ಭರಾಟೆ ಗೊತ್ತಿರುತ್ತಿತ್ತು. ಬೇಸಿಗೆಯ ಕಡೆಯಲ್ಲೊಮ್ಮೆ ಕೆರೆಯ ಹೂಳೆತ್ತಿ ಶುದ್ಧ ಮಾಡುವುದಕ್ಕೆ ಗಾಡಿಗಿಷ್ಟೆಂದು ಸುಂಕ ವಸೂಲಿಮಾಡಿ, ಆಬಾದು ಮಾಡುವವರಿಗೆ, ತೆಂಗಿನ ಸಸಿ ಹಾಕಿಸುವ ಉದ್ದೇಶವುಳ್ಳವರಿಗೆ ತಳವಾರರ ಮಾರ್ಗದರ್ಶನ ಇದ್ದೇ ಇರುತ್ತಿತ್ತು. ಜೊತೆಗೇ ಕೆರೆಗೆ ನೀರಿನ ಹರಿವು ಎಲ್ಲೆಲ್ಲಿಂದ ಬರಬೇಕೋ ಆಯಾ ಮಾರ್ಗಗಳನ್ನು ಸಾಪುಗೊಳಿಸಿ ಮಳೆಗಾಲಕ್ಕೆ ಪೂರ್ವದಲ್ಲೇ ಒಂದು ವಿಚಕ್ಷಣೆ ಕೂಡ ನಡೆದಿರುತ್ತಿತ್ತು. ಒಮ್ಮೊಮ್ಮೆ ಬಟಾಬೇಸಿಗೆಯಲ್ಲಿ ಕೆರೆಯನೀರೊಣಗಿ ಪರಿಸ್ಥಿತಿ ವಿಪರೀತಕ್ಕಿಟ್ಟುಕೊಂಡಾಗಲೂ ನೀರುಕಂಟಿಯ ಲೆಕ್ಕಾಚಾರವೇ ಬೇರೆಯಾಗಿರುತ್ತಿತ್ತು. ಪಂಚಾಯತಿನವರ ತಾಲ್ಲೂಕು ಅಮಲ್ದಾರರ ಸಹಾಯ ಪಡೆದು ಕುಡಿಯುವ ನೀರಿನ ಘಟ್ಟವಿದ್ದಲ್ಲಿ ತೋಡುಗುಂಡಿ ತೆಗೆದು ಒಸರುವ ನೀರ‌ಒರತೆಯನ್ನು ಇನಿತೂ ಹಾಳಾಗದಂತೆ ಕಾಪಾಡಿ ಜನಜಾನುವಾರುಗಳನ್ನು ಜಲಕ್ಷಾಮದಿಂದ ಪೊರೆಯುತ್ತಿದ್ದ ಆ ದಿನಗಳಲ್ಲಿನ ಸ್ವಾರ್ಥ ರಹಿತ ಜನಸೇವೆಯ ಕಿಲುಬೂ ಈ ಹೊತ್ತಿನ ನಮ್ಮ ಅಧಿಕಾರಷಾಹಿಗಳಿಗಿಲ್ಲದಿರುವುದು ನಮ್ಮ ದೌರ್ಭಾಗ್ಯ. 

ಯಾವಾಗ ಕೊಳಾಯಿಗಳಲ್ಲಿ ನೀರು ಮನೆಯ ಅಂಗಳಕ್ಕೆ ಬರತೊಡಗಿತೋ ಆವತ್ತಿನ ದಿನದಿಂದಲೇ ಕೆರೆಗಳಿಗೆ ಶಾಪ ಹಿಡಿಯಿತೆನ್ನಬೇಕು. ಸ್ವಲ್ಪವೂ ಶ್ರಮ ಪಡದೇ ಕುಡಿದ ನೀರು ಅಲ್ಲಾಡದ ಹಾಗೆ ಅನುಕೂಲಗಳು ಸಿಕ್ಕುವಂತಾದರೆ ಮನುಷ್ಯ ಹೆಚ್ಚು ಹೆಚ್ಚು ಸ್ವಾರ್ಥಿಯಾಗುತ್ತಾನೆ ಅನ್ನುವುದು ಸತ್ಯ. ಯಾವಾಗ ಕೆರೆಯ ದಾರಿ ಜನ ಮರೆತರೋ ಪೋಲಿಪಟಾಲಮ್ಮುಗಳಿಗೆ, ದನಗಾಹಿಗಳಿಗೆ, ಬಹಿರ್ದೆಸೆಗೆಂದು ಕೋಡಿಯ ತುದಿಯವರೆಗೂ ಓಡಬೇಕಲ್ಲ ಎಂದು ಪರಿತಪಿಸುತ್ತಿದ್ದ ಶುದ್ಧ ಸೋಂಬೇರಿಗಳಿಗೆ ಈಗ ಸುಲಭವಾಯ್ತು. ಸುಂಕ ಕಟ್ಟದೇ ಬೇಕಾಬಿಟ್ಟಿ ಕೆರೆಯ ಮಣ್ಣನ್ನೆತ್ತಿಕೊಂಡು ಹೋಗುವವರಿಗೆ ಕಾಲ ನಡೆಸಿತು. ಕೆರೆಯ ಗೋಡು ಹೇಗೆಂದರೆ ಹಾಗೇ ತೋಡಿದ ಕಾರಣ ಸೊಳ್ಳೆಗಳಿಗೂ, ಹಂದಿಗಳಿಗೂ ಸಾಮ್ರಾಜ್ಯವನ್ನೇರ್ಪಡಿಸಿಕೊಳ್ಳಲು ತಾಂಬೂಲ ಕೊಟ್ಟಂತಾಯಿತು. ಕೆರೆಯ ಅಂಗಳದಲ್ಲಿ ಮಾತ್ರ ರಾರಾಜಿಸುತ್ತಿದ್ದ ಆಪಿನ ಜೊತೆಗೇ ಇತರ ಮುಳ್ಳುಕಂಟಿಗಳೂ, ಪೊದೆಗಳೂ ಬೆಳೆದ ಕಾರಣ ಕೆರೆಯ ಅಂಗಳವೇ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಗೊಂಡು ಕೆರೆಯ ಏರಿಯ ಮೇಲಿನ ಸೊಗಾಸಾದ ಸಂಜೆಯ ಸುತ್ತಾಟ ಮರಣಾಂತಿಕ ಶಿಕ್ಷೆಯಾಗಿ ಬದಲಾಯಿತು, ಒತ್ತುವರಿ ಮಾಡುವವರಿಗೆ ಸಿಕ್ಕ ನಿಧಿಯೂ ಆಯಿತು. ಕಾಲ ಕಳೆದಂತೆ ನೀರಿನ ಒರತೆಗಳು ಅಕ್ಕಪಕ್ಕದ ಸ್ಥಳಗಳಲ್ಲಿ ತೋಡಿದ ಕೊಳವೆಬಾವಿಗಳಿಂದಾಗಿ ಮಾಯವಾಗಿ ಕೆರೆಯ ಅಂಗಳವೆಂಬುದು ಶೋಭೆಕಳೆದುಕೊಂಡು ಗಲೀಜಿನ ಗ್ಯಾರೇಜಾಯಿತು, ಮುನಿಸಿಪಾಲಿಟಿಯವರು ಕಸತಂದು ಹೊತ್ತು ಹಾಕುವ ತೊಟ್ಟಿಯಾಗಿಯೂ ಬದಲಾಯಿತು. ಕೋಡಿ ಹರಿಯುತ್ತಿದ್ದ ಅಕ್ಕಪಕ್ಕದ ಜಾಗ ವಸತಿಹೀನರ ಆಕ್ರಮಣಕ್ಕೆ ತುತ್ತಾಗಿ ಅಕ್ರಮ ಸಕ್ರಮದ ಅರ್ಜಿಗೆ ವಸ್ತುವಾಗಿ ಬದಲಾಯಿತು. ತಳವಾರ ತೋಟಿಗಳು ಕಾಲವಾಗಿ ಅವರ ಮಕ್ಕಳು ಅವರಿವರ ಬಾಯಿಂದ ಅವರ ಹಿರೀಕರ ಬದುಕನ್ನು ತಿಳಿಯುವ ಮಟ್ಟಿಗೆ ಕಾಲ ಓಡುತ್ತೋಡುತ್ತ ಇವತ್ತಿನ ಮಟ್ಟಿಗೆ ಬಂದು ನಿಂತಿದೆ.

ಈಗ ಯಾವುದೇ ಊರಿಗೆ ಹೋಗಿ ನೋಡಿ. ವರ್ಷದ ಒಂದಲ್ಲ ಒಂದು ಕಾಲದಲ್ಲಿ ಕುಡಿಯುವ ನೀರಿಗೆ ತತ್ವಾರವಿದ್ದೇ ಇರುತ್ತದೆ. ಮಳೆಗಾಲ ಚೆನ್ನಾಗಿ ನಡೆಸಿದರೂ ಬಿದ್ದ ನೀರು ಅಂತರ್ಜಲವಾಗಿ ಬದಲಾಗದೇ ಹರಿದು ಹೋಗಿ ಕೆರೆಕಟ್ಟೆಗಳು ಪೋಷಿಸುವವರಿಲ್ಲದೇ ಒಣಗಿಹೋಗಿ ಎಲ್ಲ ಊರುಗಳವರೂ ಭೂಮಿಯ ಆಳದಾಳದಿಂದ ನೀರನ್ನೆತ್ತುವ ಕೊಳವೆಬಾವಿಗೆ ಶರಣು ಹೋಗಿದ್ದಾರೆ. ಸಹಜವಾಗಿ ನೈಸರ್ಗಿಕವಾಗಿ ಸಿಕ್ಕ ನೀರನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳದ ಕಾರಣ ಕೊಳವೆಬಾವಿಗಳಿಂದ ಹೊರಬರುವ ಸಲ್ಫೇಟ್ ನೀರನ್ನೋ ಅಥವ ಇತರ ವಿಷಕಾರೀ ವಸ್ತುಗಳಿಂದ ಒಡಗೂಡಿದ ನೀರನ್ನೇ ಜನ ಜಾನುವರು ಉಪಯೋಗಿಸಲೇ ಬೇಕಾದ ಅನಿವಾರ್ಯತೆಯೊದಗಿದೆ. ನಮ್ಮನ್ನು ಪೊರೆಯಬೇಕಾದ ಸರ್ಕಾರಗಳೇ ನೆಲದ ಅದಿರನ್ನು ಕದ್ದು ತೆಗೆದು ಮಾರಾಟವಾಡುವವರ ಅಡುಂಬೊಲವಾಗಿರುವಾಗ ಕೆರೆಯ ನೀರಿಗೆ ಯಾವ ದೊಣ್ಣೆನಾಯಕನ ಅಪ್ಪಣೆ ಯಾರಿಗೆ ಬೇಕಾಗಿದೆ?

ಇದೇನು ಕೆರೆಗಳ ಬಗ್ಗೆ ಹೇಳುತ್ತ ಇದ್ದವನು ಗಲೀಜು ರಾಜಕೀಯಕ್ಕೆ ವಿಷಯಾಂತರ ಮಾಡಿದೆ ಅಂತ ಗೊಣಗಿದಿರಾ? ಇವತ್ತು ರಾಜಕೀಯ ಇಲ್ಲದ ಒಂದೇ ಒಂದು ಸಣ್ಣ ಕ್ಷೇತ್ರ ತೋರಿಸಿ. ನಾವೆಲ್ಲರೂ ರಾಜಕೀಯ ಮಾಡಲೇಬೇಕು. ಅಂದರೆ ರಾಜನಿರಲಿ ಬಿಡಲಿ ನಮ್ಮ ಸವಲತ್ತುಗಳನ್ನು ಆಪೋಷನ ತೆಗೆದುಕೊಳ್ಳುವ ಯಾರದೇ ವಿರುದ್ಧವೂ ನಮ್ಮ ಬಂಡುತನ ತೋರಲೇಬೇಕು. ಯಾವ ಕೆರೆ ಅಭಿವೃದ್ಧಿಯ ಹೆಸರಲ್ಲಿ ಎಷ್ಟು ಕೋಟಿಗಳ ಸ್ವಾಹ ಆಗಿದೆ ಅಂತ ಬೇಕಾದರೆ ಆರ್.ಟಿ.ಐನಲ್ಲಿ ಅರ್ಜಿ ಸಲ್ಲಿಸಿ ಬರೇ ಹತ್ತು ರೂಪಾಯಿಯಲ್ಲಿ ಸಮಗ್ರ ವಿವರ ಪಡೀಬಹುದು. ವಿಷಯ ಯಾಕೆ ಎತ್ತಿದೆ ಅಂದರೆ ಇತ್ತೀಚೆಗೆ ಹಿಂದೆಲ್ಲ ತಳವಾರ ತೋಟಿಗಳು ಮಾಡುತ್ತ ಇದ್ದ ಕೆಲಸವನ್ನು ಅಂದರೆ ಕೆರೆ ಬಾವಿ ತೋಡುಗಳನ್ನು ನಿರ್ವಹಿಸಲು ಸರ್ಕಾರದ ಒಂದು ಇಲಾಖೆಯೇ ಇದೆಯಂತೆ. ಕೆರೆ ತೊರೆಗಳ ಹೂಳೆತ್ತಿಸಿ ಅಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಿ, ಅವರಿವರು ಒತ್ತರಿಸದಂತೆ ತಡೆಯಲು, ಶುದ್ಧ ನೀರನ್ನು ಜನ ಜಾನುವಾರಿಗೆ ನೀಡುವ ಸಲುವಾಗಿ ಆ ಇಲಾಖೆಗೆ ವರ್ಷೇ ವರ್ಷೇ ಬಜೆಟ್ಟಿನಲ್ಲಿ ಕೋಟಿಗಳ ಮೊತ್ತ ನಿಗದಿಮಾಡಲಾಗಿರುತ್ತದೆ. ಆದರೆ ಎಲ್ಲ ಊರುಗಳ ಕೆರೆಗಳ ಏರಿಯ ಕಲ್ಲುಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ, ನಗರೀಕರಣದ ಕಾರಣ ಗಮನಿಸುವವರಿಲ್ಲದೇ ಗಲೀಜು ಗುಂಡಿಗಳಾಗುತ್ತಿವೆ.

ಹೊತ್ತುಗೊತ್ತಿಲ್ಲದೇ ಬರುವ ನಲ್ಲಿ ನೀರಿಗೆ ತೆರಿಗೆ ಕಟ್ಟಿಯೂ ಶಬರಿಯೋಪಾದಿಯಲ್ಲಿ ಅದರ ಬರವಿಗೆ ಕಾಯುತ್ತಿರುವ ಜನಸಮುದಾಯದ ಸಾಮಾನ್ಯ ಸದಸ್ಯನಾದ ನನಗೂ ಈ ಸಾರಿಗೆ ಬಸ್ಸುಗಳ ಸಂಚಾರ, ನಗರ ಜೀವನದ ತಲ್ಲಣ-ತವಕಗಳು, ಏರುತ್ತಿರುವ ನಿತ್ಯಬಳಕೆಯ ವಸ್ತುಗಳ ಬೆಲೆ ಕನಿಷ್ಠ ಇಷ್ಟು ಹೊತ್ತಾದರೂ ಅವೆಲ್ಲ ತರಲೆ, ತಾಪತ್ರಯಗಳನ್ನು ಮರೆಸಿ, ಮಾಯವಾದ ಮದಗದಂಥ ಹಲವು ಕೆರೆಗಳ ಕುರಿತು ಆಲೋಚಿಸುವಂತೆ ಮಾಡಿತು. ಜಲದ ಕಣ್ಣುಗಳನ್ನು ತೆರಸುವ ಆ ಮೂಲಕ ಶುದ್ಧವಾದುದನ್ನು ಪಡೆಯುವ ಅವಕಾಶ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮಿಂದ ಸಾಧ್ಯವಿಲ್ಲದಿರುವುದೇ ಈ ಹೊತ್ತಿನ ನಮ್ಮ ಸಮಸ್ಯೆಗಳಿಗೆ ಮೂಲ. ಬಳಸುವ ನೀರಿನ ಮೂಲ ಯಾವುದು ಎಂದು ತಿಳಿಯುವ ಗೋಜಿಗೂ ಹೋಗದೇ ನಲ್ಲಿಯಲ್ಲಿ ಸುರಿಯುವ ನೀರನ್ನು ದಂಢಿಯಾಗಿ ಬಳಸುತ್ತಿರುವ ನಮ್ಮ ಕುರುಡು ಆ ನೀರು ನಿಲ್ಲುವವರೆಗೂ ಅನ್ಯರಿಗಿರಲಿ ನಮಗೇ ಗೊತ್ತಾಗುವುದಿಲ್ಲ ಅನ್ನುವುದು ಸದ್ಯದ ಸತ್ಯ. ಕೆರೆಯ ಶುದ್ಧಿಗೆ ಮೊದಲು ನಮ್ಮೊಳಗಿನ ಕರೆಗೆ ಓಗೊಡೋಣ, ನಂತರ ಕೆರೆ ಕಟ್ಟೆಗಳಿಗೆ ನೀರು ಹಾಯಿಸುವ ಮಾತನಾಡೋಣ. ಏನಂತೀರಿ?
                        *****
ಕೀಲಿಕರಣ: ರಾಮಸ್ವಾಮಿ ಡಿ ಎಸ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ