ನಕ್ಕಾಂವ ಗೆದ್ದಾಂವ

-ಅಬ್ಬಾಸ್ ಮೇಲಿನಮನಿ

ಪತ್ರಕರ್ತನೊಬ್ಬ ಆ ಕಲಾವಿದನನ್ನು ಸಂದರ್ಶಿಸಲು ಬಂದ.  ರಂಗಭೂಮಿ ಮತ್ತು ಸಿನಿಮಾ ಎರಡರಲ್ಲೂ ತನ್ನ ಹಾಸ್ಯ ನಟನೆಯಿಂದ ಪ್ರಖ್ಯಾತಿ ಪಡೆದ ಕಲಾವಿದನ ಎದುರು ಕುಳಿತು ನೇರವಾಗಿ ಮಾತಿಗಿಳಿದ:

"ನಿಮಗೆ ನಗಿಸುವ ಕಲೆ ಹೇಗೆ ಕರಗತವಾಯಿತು?"

"ದುಃಖದ ಕಡಲಲ್ಲಿ ಮುಳುಮುಳುಗಿ ಎದ್ದಿದ್ದರಿಂದ" ಕಲಾವಿದ ಉತ್ತರಿಸಿದ.

"ನೀವು ಅಳುವ ಪಾತ್ರಗಳನ್ನು ಮಾಡಲೇ ಇಲ್ಲ."

"ಅಳುವವರನ್ನು ಈ ಜಗತ್ತು ಇಷ್ಟ ಪಡುವುದಿಲ್ಲ."

"ನಿಮ್ಮ ನಗೆಯ ಹಿಂದೆ ನೋವು ಅಡಗಿರುವುದೆಂದು ಅನುಮಾನ ನನಗೆ."

"ಆ ನೋವು ನನ್ನದು.  ಅದು ನನ್ನೊಂದಿಗೆ ಕೊನೆಯಾಗುವುದು."

"ದುಃಖವನ್ನು ಪ್ರಪಂಚದೊಂದಿಗೆ ಹಂಚಿಕೊಂಡರೆ ನೆಮ್ಮದಿ ಅನಿಸುವುದು."

"ಜನರು ಯಾವಾಗಲೂ ಸಂತೋಷದ ಸಂಗತಿಗಳನ್ನು ಬಯಸುತ್ತಾರೆ.  ಅವರೆದೆಗೆ ಸಂಕಟದ ಕಣ್ಣೀರು ಬಸಿದು ತಳಮಳಿಸುವ ಇಚ್ಛೆ ಇಲ್ಲ."

"ನಿಮ್ಮ ಮಗನೊಬ್ಬ ಕಾರು ಅಪಘಾತದಲ್ಲಿ ತೀರಿಕೊಂಡನೆಂದು ಕೇಳಿದೆ."

"ವಯಸ್ಸಿಗೆ ಬಂದ ಒಬ್ಬನೇ ಮಗನಿಗೆ ಕಿಚ್ಚು ಇಟ್ಟೆ.  ಒಬ್ಬ ಮಗಳು ಅಳಿಯನಿಂದ ಸುಡಿಸಿಕೊಂಡು ಬೂದಿಯಾದಳು.  ಎರಡನೆಯ ಮಗಳು ಕಾರು ಡ್ರೈವರ್‌ನೊಂದಿಗೆ ಓಡಿಹೋದಳು.  ಮೊದಲ ಹೆಂಡತಿ ಕ್ಯಾನ್ಸರ್‌ನಿಂದ ಸತ್ತಳು.  ನನ್ನನ್ನೇ ಪ್ರೀಮಿಸುವ ನಾಟಕವಾಡಿ ಬಂದ ಸತಿ ಶಿರೋಮಣಿ ನನ್ನ ಸಂಪತ್ತು ದೋಚಿಕೊಂಡು ಪರಾರಿಯಾದಳು.  ಕೆಲವು ನಿರ್ಮಾಪಕರು ನನಗೆ ಹಣ ಕೊಡದೆ ವಂಚಿಸಿದರು.  ಆದರೂ ದೇವರು ನನ್ನನ್ನು ಉಳಿಸಿದ್ದಾನೆ.  ಬಹುಶಃ ಲೋಕದ ದುಃಖಿತರನ್ನು ನಗಿಸಲೆಂದೇ ಇರಬೇಕು" ಪಕಪಕನೆ ನಕ್ಕ ಕಲಾವಿದ.

"ನಿಮ್ಮ ಸಹನೆ ಅದ್ಭುತ"

"ಬದುಕಿನ ಪ್ರೀತಿ ಇದ್ದವರಿಗೆ ಸಮಾಧಾನವೂ ಇರಬೇಕು.  ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ.  ರಂಗಭೂಮಿಯಲ್ಲಿ ದುಡಿದಿದ್ದೇನೆ.  ಜನರು ನನ್ನ ನಗೆಯಿಂದ ಸಂತೋಷ ಪಡುತ್ತಾರೆ.  ಅವರಿಂದ ನನಗೆ ತೃಪ್ತಿಯಿದೆ".

"ಕೊನೆಗೊಂದು ಪ್ರಶ್ನೆ.  ನಾಡಿಗೆ ನಿಮ್ಮ ಸಂದೇಶವೇನು?"

"ನಾನು ಮಹಾತ್ಮನಲ್ಲ, ಪವಾಡಪುರುಷನೂ ಅಲ್ಲ, ದೇವರು ನನಗೆ ನಗಿಸುವ ಕಲೆ ಕೊಟ್ಟಿದ್ದಾನೆ.  ಈ ಜೀವ ಇರುವತನಕ ಅಳುವವರನ್ನು ನಾನು ನಗಿಸುತ್ತಲೇ ಇರುತ್ತೇನೆ.  ಕವಿಯೊಬ್ಬರು ಹೇಳಿದ್ದಾರೆ ನಕ್ಕಾವ ಗೆದ್ದಾಂವ ಅಂತ.  ಅಳುವವರಿಗೆ ಇಲ್ಲಿ ಬದುಕಿಲ್ಲ" ಮತ್ತೆ ನಕ್ಕ ಕಲಾವಿದ.

                                *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ