ಕನ್ನಡಕ್ಕಿದೆಯೇ ಕಾಯಕಲ್ಪ?

- ರಾಮಸ್ವಾಮಿ ಡಿ.ಎಸ್

ಕನ್ನಡ ಸಮುದಾಯದ ಬಹುಮುಖೀ ಕನಸಾಗಿದ್ದ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ಸಂಪನ್ನಗೊಂಡು ವಾರ ಕಳೆದಿದೆ. ಆಳುತ್ತಿರುವ ಸರ್ಕಾರವಂತೂ ಇದನ್ನೊಂದು ಅಭೂತ ಪೂರ್ವಸಾಧನೆಯೆಂದು ಬಿಂಬಿಸಲು ಮತ್ತು ಅದನ್ನು ನಂಬಿಸಲು ಮತ್ತೆ ಮತ್ತೆ ಜಾಹೀರಾತು ನೀಡಿ ಜನಸಮುದಾಯಕ್ಕೆ ಸಮ್ಮೇಳನ ನಡೆದುದನ್ನು ನೆನಪಿಸಿದೆ. ಇಪ್ಪತ್ತೈದು ವರ್ಷಗಳ ಅಂತರದಲ್ಲಿ ನಡೆದ ಈ ಸಮ್ಮೇಳನ ಸಾಧಿಸಿದ್ದಾದರೂ ಏನನ್ನು? ಎಷ್ಟೆಲ್ಲ ಪ್ರಚಾರ ಮತ್ತು ಸಂಪನ್ಮೂಲಗಳನ್ನು ಒಳಗೊಂಡಿದ್ದ ಸಮ್ಮೇಳನ ಒಟ್ಟೂ ನಿಟ್ಟಿನಲ್ಲಿ ಕನ್ನಡಕ್ಕೆ ಕೊಟ್ಟುದಾದರೂ ಏನು ಎಂದಿಲ್ಲಿ ಯೋಚಿಸಬೇಕಾದ ಅಗತ್ಯತೆ ಇದೆ.

ಏಕೆಂದರೆ ವಿಶ್ವ ಕನ್ನಡ ಸಮ್ಮೇಳನದ ಕಾರ್ಯಕ್ರಮ ಪಟ್ಟಿಗೂ ಕಳೆದೆರಡು ತಿಂಗಳ ಹಿಂದೆ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಕಾರ್ಯಕ್ರಮ ಪಟ್ಟಿಗೂ ಯಾವ ವ್ಯತ್ಯಾಸಗಳೂ ಇರಲಿಲ್ಲ. ಸಾಹಿತ್ಯಸಮ್ಮೇಳನಕ್ಕೆ ಅಧ್ಯಕ್ಷರೊಬ್ಬರಿದ್ದುದನ್ನು ಬಿಟ್ಟರೆ ಉಳಿದಂತೆ ಎರಡೂ ಸಮ್ಮೇಳನಗಳಲ್ಲಿ ಚರ್ಚಿಸಲ್ಪಟ್ಟ ವಿಚಾರಗಳೂ ಭಾಗವಹಿಸಿದವರ ಹೆಸರುಗಳಲ್ಲೂ ಹೆಚ್ಚಿನ ವ್ಯತ್ಯಾಸಗಳೇನೂ ಇರಲಿಲ್ಲ. ಮತ್ತದೇ ಹಳೆಯ ವಿಚಾರಗಳ ಮೇಲಿನ ಒಣಚರ್ಚೆ, ವಿಚಾರಮಂಡಿಸುವ ಅದೇ ಅದೇ ಹಳೆಯ ಮುಖಗಳು, ವರ್ತಮಾನದ ತವಕ ಮತ್ತು ತಲ್ಲಣಗಳ ಗುಂಗಿರದ ನಿವೃತ್ತರ ಹಳೆ ಹಳೆ ಮಾತುಗಳ ಪುನರುಚ್ಛಾರ. ವರ್ಷಕ್ಕೊಮ್ಮೆ ತಪ್ಪದೇ ನಡೆಯುತ್ತಿರುವ ಸಾಹಿತ್ಯಸಮ್ಮೇಳನದ ಬಗ್ಗೆಯೇ ಸಾಕಷ್ಟು ಮಾತುಗಳಿರುವಾಗ ಅಂಥದೇ ಪರಿಶೆಯ ಮೂಲಕ ಸರಾಸರಿ ವೆಚ್ಚ ಮಾಡಿದ ಮೂವತ್ತು ಕೋಟಿರೂಪಾಯಿಗಳ ಲೆಕ್ಕ ಯಾವ ಪುರುಷಾರ್ಥ ಸಾಧನೆ ಮಾಡಿದೆ ಅಂತ ಕೇಳಿದರೆ ಅದು ಕನ್ನಡದ ದ್ರೋಹವೆಂದು ಆಯೋಜಕರೂ ಭಾಗವಹಿಸಿ ಭತ್ಯೆ ಪಡೆದವರೂ ಕರೆದಾರು.

ಉದ್ಘಾಟಕರ ಕನ್ನಡ ಪ್ರೀತಿ ಎಷ್ಟಿದೆಯೆಂದರೆ ಇನ್ಫೋಸಿಸ್ ಕಂಪನಿಗಿಂತಲೂ ವಿಪ್ರೋದಲ್ಲಿ ಕೆಲಸ ಮಾಡುವ ಕನ್ನಡಿಗರು ಹೆಚ್ಚಿದ್ದಾರೆ. ಬರಹ ಸೃಷ್ಜ್ಟಿಸಿದ ಶೇಷಾದ್ರಿ ವಾಸು ಸೇರಿದಂತೆ ಕನ್ನಡಕ್ಕೆ ತಂತ್ರಾಶವನ್ನು ಅಭಿವೃದ್ಧಿ ಪಡಿಸಲು ಇನ್ನೂ ಶ್ರಮಿಸುತ್ತಿರುವ ಹಲವರನ್ನು ಮರೆತದ್ದು ಏಕೆ? ಕವಿಗೋಷ್ಠಿ, ಸಿನಿಮಾಮಂದಿಯ ಮೆರವಣಿಗೆ, ಸಿನಿಮಾಹಾಡು, ವಿಚಾರ ಸಂಕಿರಣ, ಹಾಸ್ಯ ಇಷ್ಟರಲ್ಲೇ ವಿಶ್ವ ಕನ್ನಡ ಸಮ್ಮೇಳನ ಮುಗಿಯಿತೆಂದರೆ ಇದು ಕನ್ನಡಕ್ಕೆ ಕೊಟ್ಟ ಬಹುಮಾನವಾದರೂ ಏನು? ಈಗಾಗಲೇ ಸವೆದು ಹೋಗಿರುವ ಪ್ಲೇಟನ್ನೇ ಮತ್ತೆ ತಿರುಗಿಸಿ ಬರೋಬ್ಬರಿ ಮೂರುತಾಸುಗಳಷ್ಟು ದೀರ್ಘಕಾಲ ನಡೆದ ಹಾಸ್ಯೋತ್ಸವ ನಡೆಸಲು ವಿಶ್ವ ಕನ್ನಡಸಮ್ಮೇಳದ ಅಂಗಳ ಬೇಕಾಗಿತ್ತೆ? ವಿಶ್ವ ಸಮುದಾಯದಲ್ಲಿ ಕನ್ನಡದ ಬೆಳಕನ್ನು ಹಿಡಿದಿಡಲು ಮತ್ತು ಕನ್ನಡ ನೆಲೆಯಲ್ಲಿ ವಿಶ್ವವನ್ನು ನೋಡಿರುವ ಬಗೆಯನ್ನು ಅರಿಯಲು ಈ ಸಮ್ಮೇಳನ ಯಾವ ಕಿಡಕಿಯನ್ನು ತೆರೆಯಿತು ಅಂತ ಕೇಳಿದರೆ ನಿರಾಸೆಯಾಗುತ್ತದೆ. ಬರಿಯ ಸಾಹಿತಿಗಳ ಬುದ್ಧಿಜೀವಿಗಳ ಮಾಧ್ಯಮದ ದೈತ್ಯರ ಪ್ರದರ್ಶನಕ್ಕಷ್ಟೇ ಅವಕಾಶ ಸಿಕ್ಕಿದ್ದರ ಬಗೆಯಾದರೂ ಏನು?

ಮೂರುವರ್ಷಗಳಷ್ಟು ದೀರ್ಘಕಾಲದ ತಯಾರಿ ಮತ್ತೊಂದು ಜನಜಾತ್ರೆಯನ್ನಷ್ಟೇ ನಡೆಸಿತೆಂದರೆ ಅತಿಶಯ ಅಲ್ಲ. ಮೊದಲ ಸಮ್ಮೇಳನ ನಡೆದ ಕಾಲದ ಸಮಸ್ಯೆಗಳಿಗೂ ಈ ಕಾಲದ ಅವಶ್ಯಕತೆಗಳಿಗೂ ಸಾಕಷ್ಟು ವ್ಯತ್ಯಾಸಗಳಿದ್ದೇ ಇದ್ದುದನ್ನು ಯಾಕೆ ಆಯೋಜಕರು ಗಮನಿಸಲಿಲ್ಲ? ಇವತ್ತು ಕನ್ನಡ ಅನ್ನುವುದು ಬರಿಯ ಭಾಷೆಯಾಗಿ ಮಾತ್ರವಲ್ಲ ಕನ್ನಡತನವೆನ್ನುವುದೇ ಜಾಗತೀಕರಣದ ಮುಂದೆ ಅಬ್ಬೇಪಾರಿಯಾಗಿ ನಿಂತಿದೆ. ಕನ್ನಡ ಶಾಲೆಗಳ ಹಾಜರಾತಿ ಗಮನಿಸಿದವರು ಯಾರಾದರೂ ಈ ಮಾತು ಧಾರಾಳವಾಗಿ ಹೇಳಬಹುದು. ದುಕಿಗೆ ಯಾವ ಭದ್ರತೆಯನ್ನೂ ಒದಗಿಸದ ಇಂಥ ಸಮ್ಮೇಳನಗಳು ಹೊಟ್ಟೆಗಿಲ್ಲದವರ ಜುಟ್ಟಿಗೆ ಕಟ್ಟಿದ ಮಲಿಗೆಯಲ್ಲವೇ? ಗಡಿವಿವಾದ, ಜಲವಿವಾದಗಳ ಬಗ್ಗೆ ಪುಂಖಾನುಪುಂಖ ಭಾಷಣ ಹೊಡೆಯುವವರಿಗೆ ಯುವ ಜನತೆ ಅನುಭವಿಸುತ್ತಿರುವ ಸಮಸ್ಯೆಗಳ ಸ್ವರೂಪವಾದರೂ ಗೊತ್ತೆ? ಕನ್ನಡದ ಹಿತ ಕಾಯದ, ವಿದೇಶದಲ್ಲಿರುವ ಕನ್ನಡಿಗನ ಆತ್ಮಸ್ಥೈರ್ಯ ಹೆಚ್ಚಿಸದ, ಕನ್ನಡಿಗರಿಗೆ ಬದುಕು ಕಟ್ಟಿಕೊಳ್ಳಲು ಹೊಸದೇನನ್ನೂ ಸೂಚಿಸದ ಈ ಸಮ್ಮೇಳನ ಯಶಸ್ವಿ ಅಂತ ಬೊಂಬಡ ಬಜಾಯಿಸುತ್ತಿರುವವರಿಗೆ ತಿಳುವಳಿಕೆ ಕೊಡುವವರಾದರೂ ಯಾರು?

         *****

ಕೀಲಿಕರಣ: ರಾಮಸ್ವಾಮಿ ಡಿ.ಎಸ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ