ಸಾಲೆಯ ನೋಡಿದಿಯಾ ಸರಕಾರದ

-ಶಿಶುನಾಳ ಶರೀಫ್

ಸಾಲೆಯ ನೋಡಿದಿಯಾ ಸರಕಾರದ
ಸಾಲೆಯ ನೋಡಿದಿಯಾ                    ||ಪ||

ಸಾಲಿ ಸದ್ಗುರುವಿನ ಮಾಲು ಮಂಟಪವಿದು
ಮೇಲೆ ಕಾಣಿಸುವದು ಭೂಲೋಕದಲ್ಲಿ        ||ಅ.ಪ.||

ಕುಂಭ ಆರು ಮಧ್ಯದಿ
ತುಂಬಿರುವ ಒಂಭತ್ತು ದ್ವಾರದಲಿ
ಸಾಂಬ ಸದಾಶಿವ ಧ್ಯಾನಕೆ ಇಂಬಾಗಿ
ನಂಬಿಕೊಂಡು ನಿಜ ಅಕ್ಷರ ಕಲಿಸುವ        ||೧||

ಪಶ್ಚಿಮ ಬಾಗಿಲಕೆ
ಗಚ್ಚಿನ ಕೆಲ್ಸಾ ಹೆಚ್ಚಿನ ದೇಗುಲಕೆ
ಸ್ವಚ್ಚ ಪೂರ್ವೋತ್ತರ ದಕ್ಷಿಣ ದ್ವಾರದಿ
ಉಚ್ಚರಿಸುವ ತತ್ವಾಂಕಿತ ಸಾರದ          ||೨||

ಮೋಜಿಲಿಂದಿರುವ ಮಾಸ್ತಾರಾ
ರಾಜಿತಮಾದ ಸಹಜ ಶಿಕ್ಷಣ ವಿಸ್ತಾರಾ
ಸೋಜಿಗವೆನಿಪ ಶ್ರೀ ಗುಡಿಪುರ ಗ್ರಾಮದಿ
ರಾಜ ಶಿಶುನಾಳಧೀಶನ ದಯದಿಂದ     ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ