ಸಂತೆಯಲ್ಲಿ ನಿಂತು ಕನ್ನಡವ ನೆನೆದೇವು

- ರಘುನಾಥ ಚ ಹ

ಬೆಂಗಳೂರಿನ ಹೊಸೂರು ರಸ್ತೆಯ ಕೇಂದ್ರ ರೇಷ್ಮೆ ಮಂಡಳಿಯ ವೃತ್ತದಲ್ಲಿ ಬಸ್ಸಿಗೆ ಕಾಯುತ್ತಾ ನಿಂತು, ಒಂದ ನಂತರ ಒಂದು ಎದುರಾಗುವ ಇನ್ಫೋಸಿಸ್, ಐಟಿಪಿಎಲ್, ವಿಪ್ರೋ ಮುಂತಾದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಬಸ್ಸುಗಳನ್ನು ಕಂಡಾಗಲೆಲ್ಲ ಸಣ್ಣದೊಂದು ರೇಜಿಗೆ ಹುಟ್ಟುತ್ತದೆ.  ದೂರದಿಂದ ನೋಡುವಾಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಂತೆ ಕಾಣುವ ಈ ಬಸ್ಸುಗಳು ಹತ್ತಿರಾದಾಗ ಅವುಗಳ ಹಣೆಯಲ್ಲಿನ ಐಟಿ ಕಂಪನಿಗಳ ಫಲಕಗಳು ಹಾಗೂ ಬಸ್ಸಿನೊಳಗಿನ ಖಾಲಿ ಸೀಟುಗಳು ಅಣಕಿಸಿದಂತಾಗುತ್ತದೆ.  ತುಸು ಮುಂಚೆಯಷ್ಟೇ ಮಡಿಮೈಲಿಗೆಯಿಲ್ಲದೆ ಸಾರ್ವಜನಿಕರನ್ನು ತುಂಬಿಕೊಂಡು ಓಡುತ್ತಿದ್ದ ನಗರ ಸಾರಿಗೆ ಬಸ್ಸುಗಳು, ಸಂಜೆಪಾಳಿಯಲ್ಲಿ ಐಟಿ ಕಂಪನಿಗಳ ಬಾಡಿಗೆ ಬಸ್ಸುಗಳಾಗಿ ಪರಿವರ್ತನೆಗೊಂಡು ನಿಲ್ದಾಣದಲ್ಲಿನ ಪ್ರಯಾಣಿಕರನ್ನು ಅಸೃಶ್ಯರಂತೆ ಕಂಡು ಸೊಕ್ಕಿನಿಂದ ಮುಂದೆ ಹೋಗುವುದನ್ನು ನೋಡುತ್ತ ಮತ್ತೊಂದು ಬಸ್ಸಿಗೆ ಕಾಯತೊಡುತ್ತೇನೆ.  ಮತ್ತೆ ನಿರಾಶೆ.  ಆಸೆ ಹುಟ್ಟಿಸುವ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಬಸ್ಸುಗಳಿಂದ ಉಂಟಾಗುವ ಈ ನಿರಾಶೆ ಕನ್ನಡದ ಕುರಿತ ನಿರಾಶೆಯಾ ಎಂದು ಅನೇಕ ಸಲ ಅನ್ನಿಸಿದ್ದಿದೆ.

ಕನ್ನಡ ನನ್ನ ಪಾಲಿಗೆ ಭಾಷೆ ಮಾತ್ರವಲ್ಲ;  ಅನ್ನ ನೀಡುತ್ತಿರುವ ಸಾಧನವೂ ಹೌದು.  ಆದರೆ ಐಟಿ ಕಂಪನಿಗಳ ಕಣ್ಣುಕುಕ್ಕುವ ಐಷಾರಾಮಿ ಪರಿಸರ ಹಾಗೂ ದೊಡ್ಡ ದೊಡ್ಡ ಅಂಕಿಗಳ ಸಂಬಳದ ಇಂಗ್ಲಿಷು `ಜೀನ್ಸ್'ನ ಜಾಣಜಾಣೆಯರ ಕಂಡಾಗ ನಾನಗೂ ನನ್ನ ಕನ್ನಡ ಕ್ಷುಲ್ಲಕ ಅನ್ನಿಸಿಬಿಡುತ್ತದೆ.  ನನ್ನ ಗೆಳೆಯರನೇಕರು ಇದೇ ರೀತಿಯ ನಿಟ್ಟುಸಿರು ಬಿಡುವುದನ್ನು ಕಂಡಿದ್ದೇನೆ.  ಸಮಾನದುಃಖಿಗಳು ಸೇರಿದಾಗಲೆಲ್ಲ ಕಡಿಮೆ ಸುತ್ತಳತೆಯ ಕನ್ನಡದ ಬಾವಿಯಲ್ಲಿ ಸಿಕ್ಕುಬಿದ್ದ ನಮ್ಮ ಹಣೇಬರಹದ ಬಗ್ಗೆ ಮತ್ತು ಇಂಗ್ಲಿಷ್‌ನ ಸಾಗರಕ್ಕೆ ಜಿಗಿದ ಗೆಳೆಯರ ಅದೃಷ್ಟವನ್ನು ನೆನೆಸಿಕೊಂಡು ಕನ್ನಡದಲ್ಲೇ ಬಿಕ್ಕುತ್ತೇವೆ.  ಈ ದುಃಖದ ನಡುವೆಯೂ, ಕನ್ನಡದ ಬೇರುಗಳಿಗೆ ಅಂಟಿಕೊಂಡು ಹಳ್ಳಿಗಳಲ್ಲೇ ಉಳಿದ ಮಾಸಿದ ಮುಖದ ಗೆಳೆಯರೊಂದಿಗೆ ನಮ್ಮನ್ನು ಹೋಲಿಸಿಕೊಂಡು ಸಮಾಧಾನಗೊಳ್ಳುತ್ತೇವೆ.  ಅಕಸ್ಮಾತ್ ಸಿಗುವ ಚಡ್ಡಿ ಗೆಳೆಯರು ನಮ್ಮೊಂದಿಗೆ ಹಳೆಯ ಸಲುಗೆಯಿಂದ ವರ್ತಿಸಲು ಹಿಂಜರಿಯುವುದೂ ಗಮನಕ್ಕೆ ಬರುತ್ತದೆ.  ಅವರ ಪಾಲಿಗೆ ನಾವು ಇಂಗ್ಲಿಷರಂತೆ ಕಾಣುವುದು ಗೊತ್ತಾದಾಗ ಇನ್ನೂ ಕನ್ನಡಿಗರಾಗಿಯೇ ಉಳಿದ ನಮಗೆ ದಿಗಿಲಾಗುತ್ತದೆ.  ಹೌದು, ನಮ್ಮ ಗೆಳೆಯರ ಗುಂಪನ್ನು ಭಾಷೆ ಮೂರು ಗುಂಪುಗಳಾಗಿ ಒಡೆದಿದೆ.  ಇಂಗ್ಲಿಷು `ಜೀನ್ಸ್‌' ಅರಗಿಸಿಕೊಂಡವರು ಒಂದು ತುದಿಯಲ್ಲಿದ್ದರೆ ಮತ್ತೊಂದು ತುದಿಯಲ್ಲಿ ಇಂಗ್ಲಿಷು ಕೈಗೆಟುಕದೆ ಕನ್ನಡಕ್ಕಂಟಿಕೊಂಡೇ ಉಳಿದವರಿದ್ದಾರೆ.  ನಡುವಿನ ನಾವು ಕನ್ನಡದ ನೆಲದಲ್ಲಿ ನಿಂತು ಇಂಗ್ಲಿಷು ಆಕಾಶವನ್ನು ಎಟುಕಿಸಿಕೊಳ್ಳಲು ಯತ್ನಿಸುವ ಅಂತರಪಿಶಾಚಿಗಳು.

ಕನ್ನಡ ಬಾವಿಯ ಪರಿಧಿಯನ್ನು ಅರ್ಥ ಮಾಡಿಕೊಂಡಿರುವ ಗೆಳೆಯರದೀಗ ಒಂದೇ ಕನಸು, ಕನಿಷ್ಠ ನಮ್ಮ ಮಕ್ಕಳನ್ನಾದರೂ ಇಂಗ್ಲಿಷ್ ದಡ ಮುಟ್ಟಿಸಬೇಕೆನ್ನುವುದು.  ಇದು ಕನಸು ಮಾತ್ರವಲ್ಲ, ಜೀವನದ ಮಹತ್ವಾಕಾಂಕ್ಷೆಯೂ ಹೌದು.  ಹಾಗಾಗಿ ದುಡಿತದ ಬಹುಭಾಗವನ್ನು ಕಾನ್ವೆಂಟ್‌ಗಳಿಗೆ ಸುರಿಯಲು ಕನ್ನಡದ ಅಪ್ಪಮ್ಮಂದಿರು ಹಿಂಜರಿಯುತ್ತಿಲ್ಲ.  ಇಡೀ ಕನ್ನಡದ ಮಧ್ಯಮವರ್ಗವೇ ಇಂದು ಇಂಗ್ಲಿಷ್‌ನ ಹಿಂದೆ ಬಿದ್ದಿದೆ.  ಕನ್ನಡ ಹಿಂದೆ ಬದ್ದಿದೆ.  ನಮಗೆ ಕನ್ನಡ ಯಾಕೆ ಬೇಕು?  ಹೀಗೆಂದು ಆ ಅಪ್ಪಮ್ಮಂದಿರು ಕೇಳುತ್ತಿದ್ದಾರೆ.  ವಾದ ಮಾಡಿ ಗೆಲ್ಲುವುದು ಕಷ್ಟ.  ಏಕೆಂದರೆ ಅವರ ಪಾಲಿಗೆ ಇಂಗ್ಲಿಷು ಹಾಗೂ ಕನ್ನಡದ ಆಯ್ಕೆ ಭವಿಷ್ಯದ ಆಯ್ಕೆಯಾಗಿ ಪರಿಣಮಿಸಿದೆ.  ಕನ್ನಡವನ್ನು ಅಪ್ಪಿಕೊಂಡರೆ ದುರ್ಗತಿ, ಇಂಗ್ಲಿಷ್ ಒಪ್ಪಿಕೊಂಡರೆ ಸದ್ಗತಿ ಎನ್ನುವ ಭಾವನೆ ಬಲಿತುಬಿಟ್ಟಿದೆ.  ಇದಕ್ಕೆ ಸರಿಯಾಗಿ ಐಟಿ-ಬಿಟಿ ಕಂಪನಿಗಳ ಝಣಝಣ ಬಣ್ಣಗಳು ಬೆಂಗಳೂರು ತುಂಬಿ ಉಪನಗರ ಹಳ್ಳಿಗಳಲ್ಲೂ ತುಳುಕುತ್ತಿವೆ.

ಕನ್ನಡಕ್ಕೆ ಒಂದೂವರೆ ಸಾವಿರ ವರ್ಷಗಳ ಸಾಹಿತ್ಯವಿದೆ.  ಪರಂಪರೆ ದೊಡ್ಡದು.  ಜ್ಞಾನಪೀಠಗಳ ಹುಲುಸುಬೆಳೆಯ ನುಡಿ ಕನ್ನಡ.  ಇವೆಲ್ಲವೂ ನಿಜ.  ಹಾಗೆಯೇ ಕನ್ನಡವಿಂದು ಅನ್ನ ಹುಟ್ಟಿಸುವ ಭಾಷೆಯಾಗಿಲ್ಲ ಎನ್ನುವುದೂ ನಿಜ.  ಭಾಷೆ ಅಂದರೆ ಸಂಸ್ಕೃತಿ.  ಭಾಷೆ ಎಂದರೆ ತಾಯಿ ಎಂದು ರೋಮಾಂಚನಗೊಳ್ಳುವ ದಿನಗಳೀಗ ಮುಗಿದುಹೋಗಿವೆ.  ಈಗೇನಿದ್ದರೂ ಭಾಷೆ ಮುಖ್ಯವಾಗುವುದು ಆ ಭಾಷೆಯಿಂದ ಸಾಧ್ಯವಾಗುವ ಉದ್ಯೋಗ ವಾಣಿಜ್ಯ ಅವಕಾಶಗಳಿಂದಾಗಿ ಮಾತ್ರ.  ಈ ಚೌಕಟ್ಟಿನಲ್ಲಿ ಕನ್ನಡವನ್ನು ಕೂರಿಸಿ ನೋಡಿದಾಗ ಕನ್ನಡದ ಮಿತಿಗಳು ಅಗತ್ಯಕ್ಕಿಂಥ ಹೆಚ್ಚು ಕಣ್ಣಿಗೆ ರಾಚುತ್ತವೆ.  ನನ್ನಂಥ ಅಸಂಖ್ಯರಿಗೆ ಅನ್ನ ನೀಡುತ್ತಿರುವ ಕನ್ನಡ ನನ್ನ ಮುಂದಿನ ಪೀಳಿಗೆಯನ್ನೂ ಕೈ ಹಿಡಿದು ನಡೆಸುತ್ತದೆಯಾ?  ಆ ಶಕ್ತಿ ಕನ್ನಡಕ್ಕಿದೆಯಾ?  ಆವರೆಗೂ ಕನ್ನಡ ಉಳಿಯುತ್ತದೆಯಾ?  ಎಂದು ಪ್ರಶ್ನೆಗಳು ಕಾಡುತ್ತವೆ.  ಕನ್ನಡ ಉಳಿಯುತ್ತದಾ ಅನ್ನುವ ಪ್ರಶ್ನೆಯಲ್ಲಿ ಕನ್ನಡ ಉಳಿಯಬೇಕು ಎನ್ನುವ ಆಶಯವೂ ಇದೆ.  ತಾನು ಬೆಳೆದ, ತನ್ನನ್ನು ರೂಪಿಸಿದ ತುಂಬು ಸಂಸಾರವೊಂದು ತನ್ನ ನಂತರವೂ ಒಡೆಯದೆ ಉಳಿಯುತ್ತದೆಯಾ ಎನ್ನುವ ವ್ಯಕ್ತಿಯ ದುಗುಡದಂತೆ ಕನ್ನಡದ ಈ ಯೋಚನೆ ಕಾಣುತ್ತದೆ.

        *    *    *

ಕನ್ನಡ ಏಕೆ ಬೇಕು ಎನ್ನುವ ತರ್ಕಕ್ಕೆ ಪ್ರತಿತರ್ಕ ಹೂಡುವುದರಲ್ಲಿ ಯಾವ ಅರ್ಥವೂ ಇಲ್ಲ.  ಡಾಲರ್‍ ಎದುರಿನ ಮುಖಾಮುಖಿಯಲ್ಲಿ ಇಂಗ್ಲಿಷ್ ಲಕಲಕಿಸುತ್ತ ಕೈಕುಲುಕಿದರೆ ಕನ್ನಡ ಮಂಕುಮುಖದಿಂದ ಪಕ್ಕಕ್ಕೆ ಸರಿದು ನಿಲ್ಲುವ ಸತ್ಯವನ್ನು ನಾವೆಲ್ಲರೂ ಒಪ್ಪಿಕೊಳ್ಳದೆ ವಿಧಿಯಿಲ್ಲ.  ಹಾಗಿದ್ದರೆ ನಮಗೆ ಕನ್ನಡ ಬೇಡವೇ?  ಬೇಕು.  ಕನ್ನಡ ನಮಗೆ ಬೇಕು, ಯಾಕೆಂದರೆ ಅದು ನಮ್ಮನುಡಿ.  ಹಾಗಾಗಿ ಕನ್ನಡ ನಮಗೆ ಬೇಕು.  ಅಮ್ಮಅಪ್ಪ ಸೋದರ ಸೋದರಿಯರು, ಗೆಳೆಯರು, ನೀರುನೆಲದಂತೆ ಕನ್ನಡವೂ ನಮ್ಮದು.  ಇವುಗಳಿಂದಲೇ ರೂಪುಗೊಂಡಿರುವ ದೇಹ-ವ್ಯಕ್ತಿತ್ವ ಪ್ರತ್ಯೇಕತೆಯನ್ನು ಬಯಸುವುದು ಅಥವಾ ಆತ್ಮದ ಬದಲಾವಣೆಯನ್ನು ಬಯಸುವುದು ಪ್ರಕೃತಿ ವಿರುದ್ಧ (ಇಂದಿನ ಬಹುತೇಕ ಸಂಗತಿಗಳು ಪ್ರಕೃತಿ ವಿರುದ್ಧವಾಗಿಯೇ ಇವೆ ಎನ್ನುವುದು ಬೇರೆ ಮಾತು).

ನಮ್ಮನುಡಿ ಎನ್ನುವ ಕಾರಣಕ್ಕಾಗಿ ಕನ್ನಡ ಬೇಕೆನ್ನುವುದು ಕೇವಲ ಭಾವುಕತೆಯ ಪ್ರಶ್ನೆಯಷ್ಟೇ ಅಲ್ಲ;  ಅನುಕೂಲದ ಮಾತೂ ಹೌದು.  ಭಾವುಕತೆಯಿಂದ ಭಾಷೆ ಬದುಕುವುದಿಲ್ಲ.  ಹಾಗೆ ನೋಡಿದರೆ ಭಾವುಕತೆಗಿದು ಕಾಲವೂ ಅಲ್ಲ.  ಉಳಿವಿಗಾಗಿ ಒಂದು ಇನ್ನೊಂದನ್ನು ನುಂಗಿ ನೊಣೆಯುವ ಪ್ರಕೃತಿಸಹಜ ಕ್ರಿಯೆಗೆ ಭಾಷೆಯೂ ಹೊರತಾದುದಲ್ಲ.  ಪ್ರತಿಯೊಂದು ಭಾಷೆಯೂ ಕಾಲಕಾಲಕ್ಕೆ ಅಗ್ನಿದಿವ್ಯ ಪರೀಕ್ಷೆಗೆ ಒಳಪಡಲೇಬೇಕು.  ಆದರೆ ಭಾಷೆಗಳು ಸರಕಾಗಿ ಈಪಾಟಿ ಚಲಾವಣೆಯಾದ ಕಾಲ ಇನ್ನೊಂದಿರಲಿಕ್ಕಿಲ್ಲ.  ಅಶಕ್ತರೆಂದು ಹೆತ್ತವರ ಆಶ್ರಮಗಳಿಗಟ್ಟುವ, ಉತ್ಪನ್ನವಿಲ್ಲವೆಂದು ಜಾನುವಾರುಗಳ ಕಸಾಯಿಖಾನೆಗಟ್ಟುವ ಸಂದರ್ಭವಿದು.  ಈ ಹೊತ್ತಿನಲ್ಲಿ ಭಾಷೆ ಕರೆಯುವ ಹಸುವಾಗಬೇಕು.  ಹಾಗಾದರಷ್ಟೇ ಕನ್ನಡಕ್ಕೆ ಉಳಿಗಾಲ.  ಭಾವುಕತೆ ಇದ್ದೇ ಇರುತ್ತದೆ;  ಅನುಕೂಲದ ಮಾತಿಗೆ ಬರೋಣ.

ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡದ ಅನುಕೂಲಗಳು ತುಂಬಾ ಚಿಕ್ಕವು.  ದುಡ್ಡಿನಿಂದ ಅಳೆಯತೊಡಗಿದರೆ ಈ ಪ್ರಯೋಜನಗಳು ಕ್ಷುಲ್ಲಕವೂ ಹೌದು.  ಹೀಗೆಂದು ನಾವು ನಿರಾಶರಾಗಬೇಕಿಲ್ಲ.  ಇಂಗ್ಲಿಷು ಉಂಟುಮಾಡುತ್ತಿರುವ ಅಡ್ಡ ಪರಿಣಾಮಗಳನ್ನು ಮರೆಯಬಾರದು.  ಒಮ್ಮೆ ನಮ್ಮ ಗ್ರಾಮೀಣ ಹುಡುಗ ಹುಡುಗಿಯರ ಕೀಳರಿಮೆಯನ್ನು ನೆನಪಿಸಿಕೊಂಡರೆ ಇಂಗ್ಲಿಷ್‌ನ ಕ್ರೌರ್ಯ ಅರ್ಥವಾಗುತ್ತದೆ.  ಪಠ್ಯಗಳನ್ನು ಇಂಗ್ಲಿಷಿನಲ್ಲಿರುವ ಕಾರಣದಿಂದಲೇ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳು ಪದವಿ ಪೂರ್ವ ಪರೀಕ್ಷೆಗಳಲ್ಲಿ ವಿಜ್ಞಾನವನ್ನು ಅರಗಿಸಿಕೊಳ್ಳಲಾಗದೆ ಸೋಲುತ್ತಿದ್ದಾರೆ, ನಗರ ಹಾಗೂ ಗ್ರಾಮೀಣರ ನಡುವೆ ಇಂಗ್ಲಿಷು ಅಸಮಾನತೆಯನ್ನು ಉಂಟು ಮಾಡಿದೆ.  ದೊಡ್ಡದೊಂದು ಸಾಮಾಜಿಕ ಕಂದಕವನ್ನು ಸೃಷ್ಟಿಸಿದೆ, ಸೃಷ್ಟಿಸುತ್ತಲೇ ಇದೆ.  ಇಂಥ ಅಸಮಾನತೆಯನ್ನು ಹೋಗಲಾಡಿಸುವ ಸವಾಲನ್ನು ಎದುರಿಗಿಟ್ಟುಕೊಂಡು ನಾವು ಇಂಗ್ಲಿಷು ಅಥವಾ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ಒಂದು ಸಾಧ್ಯತೆಯನ್ನು ಊಹಿಸಿಕೊಳ್ಳೋಣ:  ಕುರುಬನ ನಾಲಗೆಯ ಮೇಲೆ ಓಂಕಾರ ಬರೆದ ಕಾಳಿ ಎಲ್ಲರಿಗೂ ಒಲಿದು, ಇಡೀ ಕನ್ನಡ ಸಮುದಾಯ ಇಂಗ್ಲೀಷ್ ಆಗಿ ಬದಲಾಗಿದೆ.  ಆಗ ಪ್ರತಿಯೊಬ್ಬರಿಗೂ ಐಷಾರಾಮಿ ಸವಲತ್ತುಗಳು ದೊರೆಯುತ್ತವೆಯಾ?  ಸಾಧ್ಯವೇ ಇಲ್ಲ.  ಇಂದಿನ ಅಸಮಾನತೆ ಅಂದಿಗೂ ಉಳಿಯುತ್ತದೆ.  ಎಲ್ಲರೂ ಇಂಗ್ಲಿಷರಾದಾಗ `ಆಧುನಿಕ ಇಂಗ್ಲಿಷ್ ಪ್ರಭೇದ' ಹುಟ್ಟಿಕೊಂಡು ಅಯ್ಕೆಯ ಮಾನದಂಡಗಳು ಬದಲಾಗಿಬಿಡುತ್ತವೆ.  ಈ ಹಿನ್ನೆಲೆಯಲ್ಲಿ `ಇಂಗ್ಲಿಷು ಸುಳ್ಳಾಡುವ ಭಾಷೆ' ಎನ್ನುವ ಯು.ಆರ್‍. ಅನಂತಮೂರ್ತಿ ಅವರ ಮಾತು ಹೆಚ್ಚು ಅರ್ಥಪೂರ್ಣವಾಗಿ ಕೇಳಿಸುತ್ತದೆ.  ಒಂದಂತೂ ನಿಜ, ಎಲ್ಲರೂ ಇಂಗ್ಲಿಷರಾಗುವುದು ಹೇಗೆ ಅಸಂಭವವೋ ಇಂಗ್ಲಿಷ್‌ ಸಮಾನತೆಯನ್ನು ಸೃಷ್ಟಿಸುತ್ತದೆ ಎನ್ನುವ ಮಾತು ಒಂದು ಸುಂದರ ಸುಳ್ಳು ಮಾತ್ರ.  ಹಾಗಾದರೆ ನಾವು ಕನ್ನಡವನ್ನಿಟ್ಟುಕೊಂಡು ಇಂಗ್ಲಿಷಿನಿಂದ ದೂರಿರಬೇಕಾ?  ಇದೂ ಸರಿಯಲ್ಲ.  ಲೋಕ ತಿಳಿಯಲಿಕ್ಕಾಗಿ ಇಂಗ್ಲಿಷು ಸಾಕು;  ಸ್ವಂತಿಕೆಯ ಬದುಕಿಗಾಗಿ ಕನ್ನಡ ಬೇಕು.

ರಕ್ತ ಮಾಂಸದಿಂದಷ್ಟೇ ಬದುಕು ರೂಪುಗೊಳ್ಳುವುದಿಲ್ಲ.  ನೆಲ, ನೀರು, ಗಾಳಿ, ನಂಬಿಕೆಗಳು, ಸಂಸ್ಕೃತಿ, ಇವೆಲ್ಲವುಗಳೂ ಸೇರಿ ಬದುಕನ್ನು ರೂಪಿಸಿ ಹಸನುಗೊಳಿಸುತ್ತವೆ.  ಹಾಗಾಗಿ ಒಂದು ಬದುಕು ಆ ನೆಲದ ಭಾಷೆಯಿಂದಲೇ ರುಚಿಗಟ್ಟಬೇಕು.  ಕನ್ನಡಿಗನ ಭಾವನೆಗಳನ್ನು ಇಂಗ್ಲಿಷ್ ಅಥವಾ ಇನ್ನೊಂದು ಭಾಷೆ ಅಭಿವ್ಯಕ್ತಗೊಳಿಸಲಾರದು.  ಕನ್ನಡದ ತಾಯ್ತನ ಹಾಗೂ ಇಂಗ್ಲಿಷ್‌ನ ಮದರ್‌ಹುಡ್‌ನ ವಾಚ್ಯಾರ್ಥ ಒಂದೇ ಆದರೂ, ಧ್ವನಿವಿಸ್ತಾರಗಳು ಅನುಭವಗಳೇ ಬೇರೆ.  `ಕನ್ನಡಿಗರಿಗೆ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ' ಎನ್ನುವ ಬಿಎಂಶ್ರೀ ಮಾತು, `ಭಾವನೆಗಳು ಪ್ರವಹಿಸುವ ಮತ್ತು ಅಭಿವ್ಯಕ್ತಗೊಳ್ಳುವ ಆತ್ಮದ ರಕ್ತವೇ ಭಾಷೆ' ಎನ್ನುವ ಆಲಿವರ್‍ ವೆಂಡೆಲ್ ಹೋಮ್ಸ್ ಮಾತುಗಳು ಮಾತೃಭಾಷೆಯ ಅಗತ್ಯ ಹಾಗೂ ಅನನ್ಯತೆಯ ಕುರಿತು ಹೇಳುತ್ತವೆ.

ಭಾಷೆಯ ಬಹುಮುಖಿ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕೂಡ ಕನ್ನಡದ ಅನಿವಾರ್ಯತೆಯನ್ನು ತಿಳಿಯಬಹುದು.  ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಾಗಿ ಭಾಷೆ ಅನುವುಗೊಂಡ ಬಗೆ ಅಚ್ಚರಿಹುಟ್ಟಿಸುವಂತದ್ದು.  ಅಲ್ಲಮನಿಗೆ ಜ್ಯೋತಿರ್ಲಿಂಗವಾದ ಕನ್ನಡ ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯನಿಗೂ ಲಿಂಗರೂಪಿಯಾಯಿತು.  ಕಲ್ಯಾಣದ ಸಾಮಾಜಿಕ ಕ್ರಾಂತಿಗೆ ಅನುಭವ ಮಂಟಪದಲ್ಲಿ ತಳಪಾಯ ಸಿದ್ಧಪಡಿಸಿದ್ದೇ ಈ ಲಿಂಗರೂಪಿ ಕನ್ನಡ.  ದಾಸರಿಗೆ ಕೂಡ ಕನ್ನಡ ಇದೇ ರೀತಿಯಲ್ಲಿ ಒಲಿಯಿತು;  ಆದರೆ ಇಂಗ್ಲಿಷಿನ ಮಟ್ಟಿಗೆ ಸಾಮಾಜಿಕ ಸಂಚಲನೆ ಹುಟ್ಟಿಸುವ ಇಂಥ ಸಂಗತಿಗಳನ್ನು ಕಾಣಲಾರೆವು.  ಏಕೆಂದರೆ ಇಂಗ್ಲಿಷು ಸಂವಹನದ ಭಾಷೆಯೇ ಹೊರತು ಸಂವೇದನೆಯ ಭಾಷೆಯಲ್ಲ.  ಕನ್ನಡ ಏಕೆ ಬೇಕು ಎಂದು ಕೇಳುವವರಿಗೆ ಇಷ್ಟು ಉತ್ತರ ಸಾಕು.

        *    *    *

ಲೇಖನದಲ್ಲಿ ಕನ್ನಡವನ್ನು ಇಂಗ್ಲಿಷ್‌ನೊಂದಿಗೆ ಹೋಲಿಸುತ್ತಾ ಬಂದಿರುವುದಕ್ಕೆ ಕಾರಣವಿದೆ.  ಕನ್ನಡದ ರಕ್ಷಣೆಯ ಬಗ್ಗೆ ಮಾತನಾಡುವವರು ತಮಿಳು ಹಾಗು ತೆಲುಗನ್ನು ಕನ್ನಡದ ಎದುರಾಳಿಗಳಂತೆ ಚಿತ್ರಿಸುವುದು ಸಂಪ್ರದಾಯವಾಗಿಯೇ ಹೋಗಿದೆ.  ಆದರೆ ಕನ್ನಡದ ಎರುದಾಳಿ ತಮಿಳಲ್ಲ;  ತೆಲುಗೂ ಅಲ್ಲ.  ಹಿಂದಿಯ ಬಗ್ಗೆಯೂ ಭಯಬೇಕಿಲ್ಲ.  ಕನ್ನಡದ ಬುಡ ಅಲ್ಲಾಡುತ್ತಿರುವ ಹೊತ್ತು ಕೊಂಚ ಬೇರು ಭದ್ರವಿರುವ ತಮಿಳು ತೆಲುಗು ನಮಗೆ ಅಸೂಯೆ ಹುಟ್ಟಿಸುತ್ತಿವೆ ಅಷ್ಟೇ.  ತಮಿಳುನಾಡು, ಆಂಧ್ರಗಳೊಂದಿಗೆ ನಮಗಿರುವ ಕೆಲವು ತಕರಾರುಗಳು ಕೂಡ ಭಾಷಾ ವಿರಸಕ್ಕೆ ಕಾರಣವಾಗಿದ್ದರೂ ಇರಬಹುದು.  ಹಾಗೆ ನೋಡಿದರೆ ಕರ್ನಾಟಕ ಚರಿತ್ರೆಯುದ್ದಕ್ಕೂ ಉರ್ದು ತೆಲುಗು ತಮಿಳು ಮರಾಠಿಗಳು ಕೆಲ ಕನ್ನಡ ಪ್ರದೇಶಗಳಲ್ಲಿ ತಮ್ಮ ದಟ್ಟ ಪ್ರಭಾವ ಬೀರಿದುದನ್ನು ಕಾಣುತ್ತೇವೆ.  ಅದರೆ ಅವುಗಳಿಂದಾಗಿ ಕನ್ನಡದ ಅಸ್ತಿತ್ವದ ಪ್ರಶ್ನೆ ಉಂಟಾಗಿಲ್ಲ.  ಕೃಷ್ಣದೇವರಾಯನನ್ನು ಕನ್ನಡ ಹಾಗೂ ತೆಲುಗು ಭಾಷೆಗಳೆರಡೂ ಇವ ನಮ್ಮವನೆಂದು ಸ್ವೀಕರಿಸಿದ ವಾತ್ಸಲ್ಯದ ಉದಾಹರಣೆಯೂ ಇದೆ.  ಈಗಲೂ ಅಷ್ಟೇ, ಕನ್ನಡದ ರಕ್ಷಣೆಯ ದೃಷ್ಟಿಯಿಂದ ನಾವೇನಿದ್ದರೂ ಇಂಗ್ಲಿಷ್ ಭಾಷೆಯ ಬಗ್ಗೆ ಭಯಬೀಳಬೇಕು.  ಕನ್ನಡಕ್ಕೆ ಹೋಲಿಸಿದರೆ ತೆಲುಗು ಹಾಗೂ ತಮಿಳು ಸದ್ಯದ ಮಟ್ಟಿಗೆ ಹೆಚ್ಚಿನ ಸುರಕ್ಷಿತ ಭಾಷೆಗಳಾಗಿರಬಹುದು.  ಆದರೆ ಮುಂದೊಂದು ದಿನ ಆ ಭಾಷೆಗಳು ಕೂಡ ಅಸ್ತಿತ್ವದ ಪ್ರಶ್ನೆಯನ್ನು ಎದುರಿಸಲೇಬೇಕು.  ಒಂದು ಭಾಷೆಯನ್ನು ನುಂಗಿದ ನಂತರ ಇನ್ನೊಂದು ಭಾಷೆಗೆ ಕೈಚಾಚುವ ಭಸ್ಮಾಸುರನಂತದ್ದು ಇಂಗ್ಲಿಷು.  ಒಂದು ದೇಶದ ನಂತರ ಇನ್ನೊಂದು ದೇಶ್ವನ್ನು ನುಂಗಿ ನೊಣೆಯಲು ಸದಾ ಹೊಂಚುಹಾಕುವ ಅಮೆರಿಕದ ದುಷ್ಟತನ ಇಂಗ್ಲಿಷ್‌ಗೆ ಕೂಡ ಬಂದುಬಿಟ್ಟಿದೆ.  ಇಂಗ್ಲಿಷ್ ಬಗ್ಗೆ ವಾದಿಸುವವರು ಬದಲಾಗುತ್ತಿರು ಇಂಗ್ಲಿಷ್‌ನ ಮುಖಗಳನ್ನು ಗಮನಿಸಬೇಕು.  ಬ್ರಿಟೀಷರ ಮೂಲಕ ಭಾರತಕ್ಕೆ ಕಾಲಿಟ್ಟ ಇಂಗ್ಲಿಷು ಜ್ಞಾನರೂಪಿಯಾಗಿತ್ತು.  ಭಾರತದಲ್ಲಿ ಸ್ವಾತಂತ್ರ್‍ಯದ ಜಾಗೃತಿಗೆ ಆ ಜ್ಞಾನರೂಪಿ ಇಂಗ್ಲಿಷು ಕೂಡ ಕಾರಣವಾಗಿತ್ತು.  ಆದರೆ ಇವತ್ತಿನ ಇಂಗ್ಲಿಷು ಹದಿನಾರಾಣೆ ಧನರೂಪಿ ಭಾಷೆ;  ದಾಳಿಕೋರ ಭಾಷೆ.  ಅಮರಿಕನ್ ಇಂಗ್ಲಿಷು ಎನ್ನುವ ಈ ಬಕಾಸುರನದು ಹಿಂಗದ ಹಸಿವು.  ಇಂದು ಕನ್ನಡ, ನಾಳೆ ತೆಲುಗು, ನಾಳಿದ್ದು ತಮಿಳು, ಗುಜರಾತಿ, ಬಂಗಾಲಿ- ಹೀಗೆ ಪಟ್ಟಿ ಬೆಳೆಯುತ್ತದೆ.  ಆ ಕಾರಣದಿಂದಲೇ ನಮ್ಮ ಯೋಚನೆಗಳು ಇಂಗ್ಲಿಷ್ ಹಾಗೂ ದೇಶೀಯ ಭಾಷೆಗಳನ್ನು ಮುಖಾಮುಖಿಯಾಗಿಸುತ್ತ ಸಾಗಬೇಕು.

ಅತ್ಯಂತ ನೋವಿನ ಸಂಗತಿಯೆಂದರೆ ನಮ್ಮ ಸಾಂಸ್ಕೃತಿಕ ಲೋಕದ ಕೆಲವು ಹಿರಿಯರು ಇಂಗ್ಲಿಷ್ ಮೋಹಿನಿಯ ಸೆರಗಿನಲ್ಲಿ ಮುಖ ಹುದುಗಿಸಿ ಸುಖಿಸುತ್ತಿರುವುದು.  ಇವರ ಚಿಂತನೆಗಳೆಲ್ಲ ಇಂಗ್ಲಿಷ್‌ನಲ್ಲೇ ಹುಟ್ಟುತ್ತಿವೆ.  ಕನ್ನಡ ನೆಲದಲ್ಲಿದ್ದೂ ಇಂಗ್ಲಿಷ್ ಮೂಲಕವೇ ಕನ್ನಡದ ಜಗತ್ತನನ್ನು ಕಾಣುತ್ತಿರುವ ಈ `ಇ-ಚಿಂತಕ'ರ ಮಾತುಗಳು ಹಳ್ಳಿಯ ರಾಮಣ್ಣನಿಗೆ ಅರ್ಥವಾಗುವುದಿಲ್ಲ.  ಬ್ರಾಹ್ಮಣ್ಯದ ವಿರೋಧದ ಭರದಲ್ಲಿ ಕನ್ನಡಕ್ಕೆ ಸಂಸ್ಕೃತ ಪದದ ಎರವಲನ್ನು ವಿರೋದಿಸುವ ಈ ಬುದ್ಧಿಜೀವಿಗಳು ಇಂಗ್ಲಿಷ್ ಪದಗಳ ಆಮದು ಸರಿಯೆನ್ನುತ್ತಾರೆ.  ಇಂಗ್ಲಿಷು ಜನರಿಗೆ ಅರ್ಥವಾಗುವ ಹಾಗು ಬಹುಜನಬಳಕೆಯಲ್ಲಿರುವ ಸರಳ ಭಾಷೆ ಎನ್ನುವ ವಾದ ಅವರದು.  ಅದು ಒಂದರ್ಥದಲ್ಲಿ ನಿಜ ಕೂಡಾ.  ಆದರೆ, ಈಗಾಗಲೇ ಸತ್ತ ಭಾಷೆಗಳ ಪಟ್ಟಿಯಲ್ಲಿ ಮಿಂಚುತ್ತಿರುವ ಸಂಸ್ಕೃತದಿಂದ ಎರವಲು ಪಡೆದರೆ ಕನ್ನಡಕ್ಕೆ ಉಂಟಗುವ ಅಪಾಯ ಎಂತಹುದೆನ್ನುವುದನ್ನು ಪಾಮರರಿಗೆ ಅರ್ಥವಾಗುವಂತೆ ಇವರು ಹೇಳುತ್ತಿಲ್ಲ.  ಒಂದು ಕಾಲದಲ್ಲಿ ಸಂಸ್ಕೃತ ಬ್ರಾಹ್ಮಣ್ಯದ ರೂಪವಾಗಿತ್ತು.  ಆದರಿಂದು ಇಂಗ್ಲಿಷು ಬ್ರಾಹ್ಮಣ್ಯದ ಆಧುನಿಕ ರೂಪವಾಗಿ ಸಂಸ್ಕೃತದ ಸ್ಥಾನವನ್ನು ಆಕ್ರಮಿಸಿಕೊಂಡಿದೆ.  ಇಂಗ್ಲಿಷ್‌ನಿಂದ ಸ್ವೀಕರಣ ಹೆಚ್ಚಿದಷ್ಟೂ ನಮ್ಮ ಕನ್ನಡ ಬಡವಾಗತೊಡಗಿ, ಮುಂದೊಂದು ದಿನ `ಇಂಗ್ಲಿಷ್‌ನಿಂದ ಒಡೆದು ಬಂದ ಭಾಷೆ ಅಥವಾ ಇಂಗ್ಲಿಷ್ ಜನ್ಯ ಭಾಷೆ' ಎನ್ನುವ ಪಟ್ಟ ಕನ್ನಡಕ್ಕೆ ಬಂದರೂ ಅಚ್ಚರಿಯಿಲ್ಲ.  ಹಾಗಾಗಿ ಇಂಗ್ಲಿಷ್‌ಗಿಂತ ಸಂಸ್ಕೃತವೇ ಕನ್ನಡದ ಜಾಯಮಾನಕ್ಕೆ ಹೆಚ್ಚು ಸಹ್ಯವಾದುದು.

        *    *    *

ಕನ್ನಡವನ್ನು ಉಳಿಸಿಕೊಳ್ಳುವುದು ಹೇಗೆ?

ಕನ್ನಡದ ಉಳಿವಿಗಾಗಿ ಮಾಡಬಹುದಾದ ವಿಷಯಗಳನ್ನು ಪಟ್ಟಿ ಮಾಡುತ್ಥಾ ಹೋಗಬಹುದು:

* ಸರ್ಕಾರಿ ಕಛೇರಿಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡುವುದು.

* ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಯವಾಗಿಸುವುದು.

* ನೆರೆಭಾಷಿಕರೊಂದಿಗೆ ಕನ್ನಡದಲ್ಲೇ ಮಾತನಾಡುವ ಮೂಲಕ ಅವರು ಕನ್ನಡ ಕಲಿಯುವಂತೆ ಒತ್ತಡ ಹೇರುವುದು.

* ಕನ್ನಡದ ಪುಸ್ತಕಗಳನ್ನು ಕೊಂಡು ಓದುವುದು.

* ಕನ್ನಡ ಸಿನಿಮಾಗಳನ್ನು ಥಿಯೇಟರ್‌ಗೆ ಹೋಗಿ ನೋಡುವುದು.

* ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡದ ಬಳಕೆಗೆ ಶಾಸನ ರೂಪಿಸುವುದು.

* ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕಲ್ಪಿಸುವುದು.

* ಕನ್ನಡ ಅಂಕಿಗಳನ್ನು ಬಳಸುವುದು ಹಾಗೂ ಕನ್ನಡ ಫಲಕಗಳನ್ನು ಬರೆಸುವುದು.

* ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುವುದು, ರಸ್ತೆ ಓಣಿ ಊರುಗಳನ್ನು ಕನ್ನಡದ ಪ್ರಾತಃಸ್ಮರಣೀಯರ ಹೆಸರುಗಳಿಂದ ಗುರ್ತಿಸುವುದು.

* ನವೆಂಬರ್‌ನಿಂದ ಅಕ್ಟೋಬರ್‌ವರೆಗೆ ರಾಜ್ಯೋತ್ಸವವನ್ನು ಆಚರಿಸುವುದು.

.... ಹೀಗೆ.

ಮೇಲಿನ ಪ್ರತಿಯೊಂದೂ ಕನ್ನಡದ ಏಳಿಗೆಗೆ ಪೂರಕವಾದುದು ಎನ್ನುವುದರಲ್ಲಿ ಅನುಮಾನವಿಲ್ಲ.  ಆದರೆ ಇವುಗಳಿಂದಲೇ ಕನ್ನಡ ಬಲಗೊಳ್ಳುವುದಿಲ್ಲ.  ಬಲವಂತದಿಂದ ಯಾವುದನ್ನೂ ಸಿದ್ಧಿಸಿಕೊಳ್ಳಲಾಗುವುದಿಲ್ಲ;  ಒಂದುವೇಳೆ ಸಾಧ್ಯವಾದರೂ ಅದು ಅಲ್ಪಾಯುಷಿ.  ಆ ಕಾರಣದಿಂದಲೇ ಕನ್ನಡದ ತೇರು ಸಿಂಗರಿಸುವ ಬಾಹ್ಯ ಕೆಲಸಕ್ಕಿಂಥ ಬುನಾದಿಯನ್ನು ಗಟ್ಟಿಗೊಳಿಸುವ ಒಳಕೆಲಸ ನಡೆಯಬೇಕಿದೆ.

ಕನ್ನಡದ ಉಳಿವಿನ ದೃಷ್ಟಿಯಿಂದ ತ್ವರಿತ ಬದಲಾವಣೆ ಕಾಣಬೇಕಾದ ಕ್ಷೇತ್ರ ಶಿಕ್ಷಣ.  ಪ್ರಾಥಮಿಕ ಶಿಕ್ಷಣ ಕನ್ನಡಮುಖಿಯಾಗಬೇಕು.  ನಾಳಿನ ಯುವಜನತೆಯಲ್ಲಿ ಇಂದು ಕನ್ನಡದ ಬೀಜಗಳ ಬಿತ್ತುವುದು ಸಾಧ್ಯವಾದರೆ ಕನ್ನಡದ ಭವಿಷ್ಯ ನಿರಾತಂಕ.  ವಿಜ್ಞಾನ, ಕಾನೂನು ಮುಂತಾದ ಕ್ಷೇತ್ರಗಳನ್ನು ಕನ್ನಡಕ್ಕೆ ಒಗ್ಗಿಸಿಕೊಂಡು, ಕನ್ನಡ ಪಠ್ಯಗಳನ್ನು ರೂಪಿಸಬೇಕಾಗಿದೆ.  ಇದು ಸಾಧ್ಯವಾಗಿ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಕನ್ನಡದಲ್ಲೇ ದೊರಕುವಂತಾದರೆ ಅನೇಕ ಗ್ರಾಮೀಣ ಪ್ರತಿಭೆಗಳು ಬದುಕಿಕೊಂಡಾವು;  ಆ ಮೂಲಕ ಕನ್ನಡವೂ.

ಭಾಷಣ ಮಾಡುವುದು, ಪುಸ್ತಕ ಬರೆಯುವುದರಿಂದ ಮಾತ್ರ ಕನ್ನಡ ಉಳಿಯುವುದಿಲ್ಲ.  ಕನ್ನಡಪರ ಚಟುವಟಿಕೆಗಳನ್ನು ಹೆಚ್ಚಿಸಬೇಕು.  ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಉತ್ಸವಗಳು ಹೆಚ್ಚುಹೆಚ್ಚು ನಡೆಯಬೇಕು.  ರಾಜ್ಯದ ಎಲ್ಲ ಭಾಗಗಳಲ್ಲೂ ಈ ಉತ್ಸವಗಳು ನಡೆಯಬೇಕು.  ಕನ್ನಡ ದೇಸೀ ಕಲಾಪ್ರಕಾರಗಳು ಪುನರುಜ್ಜೀವನಗೊಳ್ಳಬೇಕು.  ದೃಶ್ಯ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.  ಭೂಗತಲೋಕದ ವ್ಯಕ್ತಿಗಳನ್ನು ಚಿತ್ರಿಸುವ ನಮಗೆ ಕುಮಾರ ರಾಮ, ಮದಕರಿ ನಾಯಕ, ಶಿವಪ್ಪ ನಾಯಕರ ಚಿತ್ರಿಸಲು ಸಾಧ್ಯವಾಗದಿರುವ ಬಗ್ಗೆ ಚಿಂತಿಸಬೇಕು.  ಮಿಗಿಲಾಗಿ ಕನ್ನಡಿಗರೆದೆಯಲ್ಲಿ ಕನ್ನಡ ಪ್ರೀತಿಯ ಬಿತ್ತನೆ ನಡೆಯಬೇಕು.

ಮುಕ್ಕಾಲು ಪಾಲು ಪದವೀಧರ ಕನ್ನಡಿಗರಿಗೆ ತಪ್ಪಿಲ್ಲದ ಕನ್ನಡ ಬರವಣಿಗೆ ಸಾಧ್ಯವೇ ಇಲ್ಲ.  ನಗರ ಪ್ರದೇಶದವರಿಗಂತೂ ಕನ್ನಡ ತ್ರಾಸು;  ಇಂಗ್ಲಿಷು ಸಲೀಸು.  ಈ ಬಗ್ಗೆ ಅವರಿಗೆ ನಾಚಿಕೆಯೂ ಇಲ್ಲ.  ಎಲ್ಲಕ್ಕಿಂತ ದುಃಖದ ವಿಷಯವೆಂದರೆ ನಮ್ಮ ಹೆಣ್ಣುಮಕ್ಕಳ ಇಂಗ್ಲಿಷ್ ಮೋಹ.  ತಾಯಿ ಮೊಲೆಹಾಲಿನಿಂದ ಬಂದ ನುಡಿ ಕನ್ನಡ ಎನ್ನುತ್ತಾನೆ ಕವಿ.  ಆದರೆ ಆಧುನಿಕ ಹೆಣ್ಣುಮಕ್ಕಳ ನೋಡಿದರೆ ಅವರ ಚರ್ಮ ಹಾಗೂ ನಾಲಗೆ ಕನ್ನಡದ ಗಂಧಗಾಳಿಯಿಂದ ದೂರವಾಗುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.  ಅಮ್ಮಂದಿರ ಕಾನ್ವೆಂಟ್ ಮೋಹ ಆತಂಕ ಹುಟ್ಟಿಸುವಂತಿದೆ.  ಹಳ್ಳಿಯ ಹೆಣ್ಣುಮಗಳು ಕೂಡ ತನ್ನ ಕಂದಮ್ಮನ ಜೊತೆ ಇಂಗ್ಲಿಷಿನಲ್ಲಿ ತೊದಲಿ ಧನ್ಯತೆ ಅನುಭವಿಸುತ್ತಾಳೆ.  ಈ ಹೆಣ್ಣುಮಕ್ಕಳ ಇಂಗ್ಲಿಷ್ ವ್ಯಾಧಿಗೆ ಜರೂರಾಗಿ ಮದ್ದು ನೀಡಬೇಕಾಗಿದೆ.  ಇಲ್ಲದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ.  ಭಾಷೆಯ ವೈಭವ ವಿದ್ವಜ್ಜನರಿಂದ ಸಾಧ್ಯ.  ಆದರೆ ಭಾಷೆಯ ಉಸಿರು ನಿಂತಿರುವುದು ಮಾತ್ರ ಕೂಸುಕಂದಮ್ಮಗಳಿಗೆ ಮೊಲೆಯುಣಿಸುವ ಹೆಣ್ಣುಗಳ ಬಾಯಲ್ಲಿ, ಜೋಗುಳದಲ್ಲಿ.

ಕನ್ನಡದ ದೀನಸ್ಥಿತಿಯ ಕುರಿತು ಮಾತುಬಂದಾಗಲೆಲ್ಲ ಪ್ರಸ್ತಾಪವಾಗಿವ ವಿಷಯ `ಇಚ್ಫಾಶಕ್ತಿ' ಕುರಿತಾದದ್ದು.  ಕನ್ನಡಿಗರು ನಿರಭಿಮಾನಿಗಳು, ಕನ್ನಡಿಗರು ಪರಭಾಷಾ ಪ್ರಿಯರು ಎನ್ನುವ ಮಾತು ರೇಜಿಗೆ ಹುಟ್ಟಿಸುವಷ್ಟು ಬಳಕೆಯಾಗುತ್ತಿದೆ.  ವೈಯಕ್ತಿಕ ನೆಲೆಯಲ್ಲಿ ಈ ಮಾತು ಪೂರ್ಣ ಸತ್ಯವಲ್ಲದಿದ್ದರೂ ಕನ್ನಡದ ನಾಯಕರ ಮಟ್ಟಿಗೆ ಮಾತ್ರ ಈ ಮಾತು ಬಹುತೇಕ ಸತ್ಯ.  ಪ್ರದೇಶಿಕ ಪಕ್ಷವೊಂದು ರಾಜ್ಯದಲ್ಲಿ ಬಲಗೊಂಡು ಅಡಳಿತದ ಚುಕ್ಕಾಣಿ ಹಿಡಿದರೆ ಕನ್ನಡದ ರಕ್ಷಣೆ ಸಾಧ್ಯವಾದೀತು ಎನ್ನುವ ಮಾತಿದೆ.  ಆದರೆ ಜನತಾದಳದ ಬಣಗಳ ಸ್ವರೂಪ ಪ್ರಾದೇಶಿಕವಾಗಿದ್ದರೂ ಕನ್ನಡದ ಮಟ್ಟಿಗೆ ಅವುಗಳ ನಡವಳಿಕೆ ರಾಷ್ಟ್ರೀಯ ಸ್ವರೂಪದಲ್ಲಿರುವುದನ್ನು ಗಮನಿಸಬೇಕು.  ಅಂದರೆ ದೋಷವಿರುವುದು ಪಕ್ಷಗಳಲ್ಲಲ್ಲ;  ನಾಯಕರ ಧೋರಣೆಗಳಲ್ಲಿ.  ನೆರೆರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಮಂತ್ರಿಗಳು ತಂತಮ್ಮ ಭಾಷೆಗಳಲ್ಲಿ ಸುದ್ದಿಗೋಷ್ಠಿ ನಡೆಸಿದರೆ, ಕನ್ನಡದ ಮಂತ್ರಿಮಹೋದಯರು ತಮ್ಮ ಇಂಗ್ಲಿಷು ಪ್ರಾವೀಣ್ಯ ಮೆರೆಯುತ್ತಾರೆ.  ರಾಜ್ಯದೊಳಗಿನ ಸುದ್ದಿಗೋಷ್ಠಿಗಳಲ್ಲೂ ಇಂಗ್ಲಿಷು ಬಳಕೆಯಾಗುತ್ತದೆ.  ಪ್ರಧಾನಿ ಸ್ಥಾನಕ್ಕೇರುವ ಮಣ್ಣಿನ ಮಗ ತನ್ನ ಮಣ್ಣಿನ ಭಾಷೆಯನ್ನು ಮೆರೆಸುವ ಬದಲು, ಪ್ರಧಾನಿ ಆದುದರಿಂದ ದೇವೇಗೌಡರು ಹಿಂದಿ ಕಲಿತದ್ದು ಅವರ ಇಂಗ್ಲಿಷ್ ಸುಧಾರಣೆಯಾದದ್ದು ನಿಜ;  ಕನ್ನಡದ ಸುಧಾರಣೆಯಂತೂ ಚಿಕ್ಕಾಸಿನಷ್ಟೂ ಆಗಲಿಲ್ಲ.  ಕನ್ನಡಗರ ಇಚ್ಫಾಶಕ್ತಿಯ ಕೊರತೆಗೆ ದೇವೇಗೌಡರೊಂದು ಉದಾಹರಣೆ ಮಾತ್ರ.  ಯಾಕಾಗಿ ಹೀಗೆ?  ಒಮ್ಮೆ ಡಾ. ಎಂ. ಚಿದಾನಂದ ಮೂರ್ತಿ ಹೇಳಿದ ಮಾತಿದು:  `ರಕ್ಕಸತಂಗಡಿ ಯುದ್ಧದಲ್ಲಿ ಪೆಟ್ಟುಬಿದ್ದುದು ವಿಜಯನಗರ ಸಾಮ್ರಾಜ್ಯದ ಅಸ್ತಿತ್ವಕ್ಕೆ ಮಾತ್ರವಲ್ಲ, ಕನ್ನಡದ ಮನಸ್ಸುಗಳ ಮೇಲೂ ಆ ಪಟ್ಟು ಬಿದ್ದಿದೆ.  ಆ ನೋವು ಕನ್ನಡಿಗರ ಮನಸ್ಸಿನ ಯಾವುದೋ ಮೂಲೆಯಲ್ಲಿ ನೂರಾರು ವರ್ಷಗಳಿಂದಲೂ ಅಚ್ಚಳಿಯದೆ ಉಳಿದುಬಂದುಬಿಟ್ಟಿದೆ.  ಕನ್ನಡಿಗರ ಇಚ್ಛಾಶಕ್ತಿಯ ಕೊರತೆಗೆ ಇದೂ ಒಂದು ಕಾರಣವಿರಬಹುದು'.  ಚಿದಾನಂದಮೂರ್ತಿಯವರ ಮಾತು ನಿಜ.  ಮನಸ್ಸಿನ ಗಾಯ ಮಾಯಲು ಮದ್ದು ಬೇಕಾಗಿದೆ.  ಆ ಮದ್ದು ಕನ್ನಡದ ಮೂಲಕ ಕನ್ನಡ ಮನಸ್ಸುಗಳಲ್ಲೇ ಮೂಡಬೇಕಿದೆ.  ಇಂಗ್ಲಿಷು ಎಂಬ ರಕ್ಕಸನ ವಿರುದ್ಧ ಬಲಗೊಳ್ಳಲು `ಅಮೃತ ಮಥನ' ನಡೆಸುವ ಕಾಲ ಸನ್ನಿಹಿತವಾಗಿದೆ.  ಈ ಯತ್ನದ ಜೊತೆಗಾರರಾಗಿ ಕಡೆಗೋಲುಗಳಾಗಿ ನಿಲ್ಲುವಂತೆ ದೇಸೀಭಾಷೆಗಳ ಮನ ಒಲಿಸಬೇಕು.

ಉಳಿವಿನ ದೃಷ್ಟಿಯಿಂದ ಕನ್ನಡವನ್ನು ಆಧುನಿಕಗೊಳಿಸಬೇಕು ಎನ್ನುವ ಮಾತು ಆಗಾಗ ಕೇಳಿಬುರತ್ತದೆ.  ಕನ್ನಡಕ್ಕೆ ಮಡಿವಂತಿಕೆ ಬೇಡ;  ಭಾಷೆಗೆ ಬೊಜ್ಜು ಬೇಡ ಎಂದು ಅನೇಕ ಭಾಷಾ ಚಿಂತಕರು ಹೇಳುತ್ತಲೇ ಇದ್ದಾರೆ.  ಸರಳವಾದಷ್ಟೂ ಭಾಷೆ ಹೆಚ್ಚು ಜನರನ್ನು ತಲುಪುತ್ತದೆ.  ಆ ಮೂಲಕ ಬಾಳಿಕೆ ಹೆಚ್ಚುತ್ತದೆ ಎನ್ನುವುದು ಅವರುಗಳ ಮಾತಿನ ಇಂಗಿತ.  ಅದರೆ ಭಾಷೆಯನ್ನು ಸರಳಗೊಳಿಸುವುದು ಎಂದರೆ ಏನು?  ಸರಳಗೊಳಿಸುವುದಾದರೆ ಅದರ ಪ್ರಮಾಣವೆಷ್ಟು?  ಎನ್ನುವ ಕುರಿತು ಚಿಂತನೆ ನೆಡಯಬೇಕಾಗಿದೆ.  ಭಾಷೆ ಸುಲಭಗ್ರಹ್ಯವಾಗಿರಬೇಕು ಎನ್ನುವ ಮಾತಿಗೆ ತಕರಾರಿಲ್ಲ.  ಆದರೆ ಸರಳತೆಯ ಹೆಸರಿನಲ್ಲಿ ಕನ್ನಡ ಬಡವಾಗಬಾರದು.  ಈ ಬಡವಾಗಿಸುವ ಕೆಲಸ ಅಲ್ಲಲ್ಲಿ ನಡೆಯುತ್ತಿದೆ.  ಈ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ದೊಡ್ಡದು.  ಓದುಗರನ್ನು ಮಂಕುದಿನ್ನೆಗಳೆಂದು ಭಾವಿಸಿರುವ ಕೆಲ ಪತ್ರಕರ್ತರು ಸರಳತೆಯ ಹೆಸರಿನಲ್ಲಿ ಭಾಷೆಯನ್ನು ಬತ್ತಲಾಗಿಸುತ್ತಿದ್ದಾರೆ.  ಕಠಿಣ ಎನ್ನುವ ಪದಗಳನ್ನು ಬಳಸದೇ ಇರುವುದು ಹಾಗೂ ನಾಲಗೆಗೆ ಒಗ್ಗಿಕೊಂಡಿರುವ ಇಂಗ್ಲಿಷು ಪದಗಳನ್ನು ಕನ್ನಡದ ನಡುವೆ ಬಳಸುವ ಪರಿಪಾಠ ಹೆಚ್ಚುತ್ತಿದೆ.  ಇದರಿಂದಾಗಿ ಕನ್ನಡದ ಸೊಗಡು ಕ್ಷೀಣವಾಗುತ್ತದೆ.  ಕನ್ನಡ ಪ್ರಾಥಮಿಕ ಮಟ್ಟದಲ್ಲೇ ಉಳಿಯುತ್ತದೆ.  ಭಾಷಿಗರ ಪದಸಂಪತ್ತು ಸೊರಗತೊಡಗುತ್ತದೆ.  ಕಲಿಕೆಯ ಅವಕಾಶಗಳು ಕಡಿಮೆಯಾಗುತ್ತವೆ.  ಕೆಲವೊಂದು ಪದಗಳು ಬಳಕೆಯ ಬೆಳಕಿನಿಂದ ದಿನೇದಿನೇ ದೂರವಾಗಿಬಿಡುತ್ತವೆ.  ಈ ಪರಿಸ್ಥಿತಿ ಮುಂದುವರಿದಲ್ಲಿ, ಪ್ರೊ. ಜಿ. ವೆಂಕಟಸುಬ್ಬಯ್ಯನವರಂಥ ಹಿರೀಕರ ನಂತರ ಕನ್ನಡ ಶಬ್ದಗಳು ನಿಘಂಟಿನಿಂದಲೂ ಕಣ್ಮರೆಯಾಗಿಬಿಡುತ್ತದೆ.  ಈ ಅಪಾಯವನ್ನು `ಭಾಷಾ ಉದಾರವಾದಿಗಳು' ಗಮನಿಸಬೇಕು.  ಶೈಲಿ ಹಾಗೂ ಹೂರಣ ಸಮರ್ಥವಾಗಿದ್ದಲ್ಲಿ ಸರಳ ಅಥವಾ ಸಂಕೀರ್ಣ ಎನ್ನುವ ವಿಷಯಗಳು ಭಾಷೆಗೆ ಮುಖ್ಯವೇ ಅಲ್ಲ.  ಹಾಗೆ ನೋಡಿದರೆ `ಸರಳತೆ'ಯ ಅರ್ಥ ಭಾಷೆಯ ಮಟ್ಟಿಗೆ ನಮ್ಮ ಉದಾರವಾದಿಗಳು ತಿಳಿದಷ್ಟು ಸಂಕುಚಿತವಾದುದಲ್ಲ.  ಭಾಷೆ ಒಂದೇ ಆಗಿರುವಾಗಲೂ, ಒಂದು ಪ್ರದೇಶದ ಜನತೆಗೆ ಸರಳವಾದ ನುಡಿಗಟ್ಟು ಮತ್ತೊಂದು ಪ್ರದೇಶದ ಜನತೆಗೆ ಕಬ್ಬಿಣದ ಕಡಲೆಯಾಗಬಹುದು.  ಭಾಷೆಯ ಶೈಲಿ ಹಾಗೂ ಪದಸಂಪತ್ತು ಕನ್ನಡದ ಜಾಯಮಾನಕ್ಕೆ ಪರಿಸರದಿಂದ ಪರಿಸರಕ್ಕೆ ಬದಲಾಗುತ್ತಲೇ ಇರುತ್ತದೆ.  ಹಾಗಾಗಿ ಸರಳತೆ ಎನ್ನುವುದಕ್ಕೆ ಚೌಕಟ್ಟು ಹಾಕುವುದು ಕಷ್ಟ.
            *    *    *

ಕನ್ನಡದ ಸಮಸ್ಯೆಗಳು ಕೇವಲ ಭಾಷೆಗಷ್ಟೇ ಸೀಮಿತವಲ್ಲ.  ನೀರು, ನೆಲ, ಉದ್ಯೋಗ, ಕೈಗಾರಿಕೆ, ಇತ್ಯಾದಿ ರೂಪಗಳಲ್ಲೂ ಕನ್ನಡ ಹಾಗೂ ಕನ್ನಡಿಗ ಅವಜ್ಞೆಗೆ ಗುರಿಯಾಗುತ್ತಲೇ ಇದ್ದಾನೆ.  ಆದರೆ ಇವುಗಳಲ್ಲಿ ಬಹುತೇಕ ಸಮಸ್ಯೆಗಳು ರಾಜಕೀಯ ಕಲ್ಪಿತವಾದವು ಹಾಗೂ ಬೇರೆಬೇರೆ ರೂಪನಾಮಗಳಲ್ಲಿ ಯಾವಕಾಲಕ್ಕೂ ಇರುವಂತವು.  ಹಾಗಾಗಿ ನಮ್ಮ ನಿಜವಾದ ಪ್ರಯತ್ನ ನುಡಿಯ ಉಳಿವಿನತ್ತ ಕೇಂದ್ರೀಕೃತಗೊಳ್ಳಬೇಕು.

ಒಂದು ಭಾಷೆಗೆ `ಗರ್ವ' ತುಂಬುವವರು, ಭಾಷೆಯ ಊರುಭಂಗ ಮಡುವವರೂ ಆಯಾ ಭಾಷಿಗರೇ.  ನುಡಿಯಲ್ಲಾಗಲೀ ನಡೆಯಲ್ಲಾಗಲೀ ಬರಹದಲ್ಲಾಗಲೀ ಕನ್ನಡವನ್ನು ಪ್ರೀತಿಯಿಂದ ಬಳಸುವುದನ್ನು ಹಾಗೂ ಈ ಬಳಕೆಯ ಬಗ್ಗೆ ಹೆಮ್ಮೆ ಪಡುವುದನ್ನು ರೂಢಿಸಿಕೊಳ್ಳಬೇಕಾಗಿದೆ.  ಆ ಪ್ರೀತಿ ಕನ್ನಡವನ್ನು ಕಾಯುತ್ತದೆ.  ಕನ್ನಡ ತನ್ನ ಒಕ್ಕಲನ್ನು ಪೋಷಿಸಿ ಉಳಿಸುತ್ತದೆ.

            *****

ಕೀಲಿಕರಣ: ಕಿಶೋರ್‍ ಚಂದ್ರ

1 ಕಾಮೆಂಟುಗಳು:

ರಘುನಾಥ್ ರವರೇ, ಹಲವಾರು ಆಯಾಮಗಳ ಮತ್ತು ಒಳಿತು - ಸೀಮೆಗಳ ಮಧ್ಯೆ ಕನ್ನಡವನ್ನು ಅಳೆದು ತೂಗಿ ಇಂಗ್ಲೀಷ್ ಬೇಕೇ..ಬೇಕಾಗ್ರೆ ಎಷ್ಟು? ಕನ್ನಡ ಎಲ್ಲಿ ಎಡವಿದೆ ಎಡವುತ್ತಿದೆ ? ಕನ್ನಡಿಗರ ನಿಜ ಕಾಳಜಿ ಏನು...ಭಾಷಾ ಅಂಧಾಭಿಮಾನ ಬಿಟ್ತು ವಾಸ್ತವಗಳ ಹಿನ್ನೆಲೆಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಏಕೆ ಸಾಧ್ಯವಿಲ್ಲ ..ನಮ್ಮ ಇಚ್ಛ್ಛಶಕ್ತಿಯಲ್ಲಿನ ಲೋಪವೇ, ರಾಜಕಾರಣಿಗಳ ಇಂಗ್ಲೀಷ್ ಗುಲಾಮಗಿರಿಯೇ? ಎಲ್ಲಾ ತಲೆಯಲ್ಲಿ ಹುಟ್ಟಿ ಗೊಂದಲದ ಗೂಡಾಗುತ್ತೆ ಬುದ್ಧಿಮತ್ತೆ.
ನಮ್ಮ ಭಾಷೆ ಬೆಳೆಯಲು ಕಾರಣ ಅದರ ಬಳಕೆ..ಕಾವ್ಯಗಳ, ಛಂಧಸ್ಸು, ರಗಳೆ, ವಚನ, ಭಜನೆ, ತ್ರಿಪದಿ, ಅಲ್ಲದೇ ನವ್ಯ ಸಾಹಿತ್ಯ ಹೀಗೆ..ಇಂದಿನ ಬೇಕುಗಳ ಪ್ರಮುಖ ಭಾಗವಾದ ಜ್ಞಾನಶಾಖೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಬರೀ ಸಾಹಿತ್ಯಕ ಹಿನ್ನೆಲೆಯ ಕನ್ನಡದಿಂದ ಇಂದಿನ ಪೀಳಿಗೆ ಭ್ರಮನಿರಸನಗೊಂಡಿದೆಯಾ ಎನ್ನುವ ಸಂದೇಹ ಸಹಾ ಮೂಡುತ್ತೆ..ಕನ್ನಡ ತಂತ್ರಾಂಶ ಬೆಳವಣಿಗೆ ನಮ್ಮ ಮುಂದಿನ ಮಾರ್ಗಗಳಲ್ಲಿ ಒಂದು. ಒಂದೆಡೆ ಕನ್ನಡಿಗರಲೇ ಕನ್ನಡದ ಬಗ್ಗೆ ಉದಾಸೀನತೆ ಕಾಣುತ್ತಿರುವುದು ಅಂತಹ ಪ್ರೋತ್ಸಾಹಕ ಬೆಳವಣಿಗೆ ಅಲ್ಲ.
ಹಲವಾರು ವಿಷಯಗಳನ್ನು ಕೂಲಂಕುಶವಾಗಿ ಚರ್ಚಿಸಿದ್ದೀರಿ... ಜನ ಜಾಗೃತಿಯನ್ನು ಮೂಡಿಸಿ ಕನ್ನಡ ಬೆಳವಣಿಗೆಯತ್ತ ಎಲ್ಲರ ಪ್ರಯತ್ನವಾದರೆ ಎಷ್ಟು ಚನ್ನ ಅಲ್ಲವೇ..?
ಧನ್ಯವಾದ..ಈ ವೈಚಾರಿಕ ಲೇಖನಕ್ಕೆ

ಕಾಮೆಂಟ್‌‌ ಪೋಸ್ಟ್‌ ಮಾಡಿ