ಬರಕೋ ಪದಾ ಬರಕೋ

-ಶಿಶುನಾಳ ಶರೀಫ್

ಬರಕೋ ಪದಾ ಬರಕೋ
ಇದರನ್ವಯ ತಿಳಿಕೋ                          ||ಪ||

ಸದಮಲಜ್ಞಾನದ ಕುದಿಉಕ್ಕಿ ಬರುವಾಗ
ನದರಿಟ್ಟು ನಿನ್ನೊಳು ಸದಮಲ ತತ್ವದಿ     ||ಅ.ಪ.||

ಅಡಿಗಣ ಪ್ರಾಸಕೆ ನಿಲುಕದ ಪದವು
ನುಡಿಶಬ್ದಕೆ ನಿಲುಕದ ಪದವು
ಎಡತೆರವಿಲ್ಲದೆ ನಡುವಿನಕ್ಷರದಿ
ಕಡುಶೂನ್ಯದ ಗುರುತದ ಗುರು ಪದವು      ||೧||

ಸರಿಗಮ ಸ್ವರ ಬಳೆದ ಅಸಮ ಸುಪದವು
ಹಸನಾಗಿ ನಿನ್ನೊಳು ಎಸೆಯುವ ಪದವು
ಕುಶಲದ ಐದಕ್ಷರವಿಹ ಪದವು
ರಸಿಕ ಸಾಧುಜನ ಹಾಡುವ ಪದವು           ||೨||

ಗುರುಗೋವಿಂದನ ಧ್ಯಾನದ ಪದವು
ವರ ಓಂಕಾರ ಪ್ರಣಮದ ಪದವು
ಧರೆಯೊಳು ಶಿಶುನಾಳಧೀಶನ ಪದವು
ದುರಿತ ದುರ್ಗುಣ ದೂಡುವ ಪದವು           ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ