ಪದವ ಬ್ಯಾಗನೆ ಕಲಿ

-ಶಿಶುನಾಳ ಶರೀಫ್

ಪದವ ಬ್ಯಾಗನೆ ಕಲಿ
ಶಿವ ಶರಣರ ಹೃದಯ ಕೀಲಿ                    ||ಪ||

ಅಡಿಗಣ ಪ್ರಾಸಕೆ ದೊರಕದ ಪದವು
ನುಡಿಶಬ್ದಕೆ ನಿಜ ನಿಲುಕದ ಪದವು
ಕುಡುಬಟ್ಟಿನ ಕೈತಾಳ ಮಾತ್ರ್ರೆಯ
ಬಡಿವಾರಕೆ ಬೈಲಾಗದ ಬ್ರಹ್ಮನ               ||೧||

ಗಣ ನೇಮದ ಗುಣಗೆಡಿಸುವ ಪದವು
ತುಣುಕುಶಾಸ್ತ್ರಕೆ ಮಣಿಯದ ಪದವು
ಗುಣಿಸಿಕೊಂಡು ಸಂಗೀತ ಸ್ವರಂಗಳ
ಎಣಿಸಿ ಏಣಿಸಿ ಕುಣಿಶ್ಯಾಡುತ ಪದವು          ||೨||

ಲಯ ಪ್ರಳಯಕೆ ಒಳಗಾಗದ ಪದವು
ನಿಲಯದೊಳು ನಿಜ ನಿಲಿಸುವ ಪದವು
ಒಲಿಸಿಕೊಂಡು ಶಿಶುನಾಳೇಶನು
ಸುಲಭದಿಂದ ಎನಗ್ಹೇಲಿದ ಪದವು              ||೩||
****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ