ಸಿದ್ಧಾಂತ

-ಅಬ್ಬಾಸ್ ಮೇಲಿನಮನಿ

ಉಗ್ರಪ್ಪ ನಾಲ್ಕನೆಯ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ.  ಅಭಿಮಾನಿಗಳು ಅತ್ಯಂತ ವೈಭವದಿಂದ ಅವನ ವಿಜಯೋತ್ಸವ ಆಚರಿಸಿದರು.  ತೆರೆದ ವಾಹನದಲ್ಲಿ ಊರ ತುಂಬ ಮೆರೆಸಿದರು.

ಗೆಲುವಿನಿಂದ ಬೀಗಿಕೊಂಡಿದ್ದ ಉಗ್ರಪ್ಪನ ಬಳಿಗೆ ಬಂದ ಪತ್ರಕರ್ತನೊಬ್ಬ "ನೀವು ಕೂದಲೆಳೆಯಲ್ಲಿ ಸೋಲು ತಪ್ಪಸಿಕೊಂಡಿರಿ" ಎಂದ.

"ನಾನು ಸೋಲಿಲ್ಲದ ಸರದಾರ" ಅತ್ಯುತ್ಸಾಹದಿಂದ ಉದ್ಗರಿಸಿದ ಉಗ್ರಪ್ಪ.

"ನಿಮ್ಮ ಅಧಿಕಾರದ ಅವಧಿಗಳಲ್ಲಿ ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ರಾಜಮಾರ್ಗಗಳನ್ನಾಗಿ ರೂಪಿಸುತ್ತೇನೆ ಎಂದಿದ್ದೀರಿ" ಪರ್ತಕರ್ತ ಹೇಳಿದ.

"ಹೌದು" ಚುಟುಕಾಗಿ ಉಲಿದ ಉಗ್ರಪ್ಪ.

"ಉದ್ದಿಮೆ ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಭವಿಷ್ಯ ನೀಡುತ್ತೇನೆಂದು ಪ್ರಮಾಣ ಮಾಡಿದ್ದೀರಿ".

"ಅದು ನಿಜ"

"ರೈತರಿಗೆ ಉಚಿತ ವಿದ್ಯುತ್, ಪಂಪ್‌ಸೆಟ್ಟು, ಬೀಜ, ಗೊಬ್ಬರ ಪೂರೈಸಿ ಅನ್ನದಾತರನ್ನು ಬದುಕಿಸುತ್ತೇನೆ ಎಂದು ಘೋಷಿಸಿದ್ದೀರಿ".

"ಹೌದು".

"ಕುಡಿಯುವ ನೀರಿಗೆ ತೊಂದರೆ ಬಾರದಂತೆ ನೋಡಿಕೊಳ್ಳುತ್ತೇನೆ.  ಹಸಿವಿನ ಸಂಕಟದಿಂದ ಜನರು ಸಾಯದಂತೆ ಎಚ್ಚರಿಕೆ ವಹಿಸುತ್ತೇನೆ.  ನೂರಕ್ಕೆ ನೂರರಷ್ಟು ಜನರನ್ನು ಸಾಕ್ಷರರನ್ನಾಗಿಸಲು ಹೋರಾಡುತ್ತೇನೆ.  ರೋಗ-ರುಜಿನಗಳಿಂದ ಜನರು ಸತ್ತು ಹೋಗದಂತೆ ಅಮೃತ ಕುಡಿಸುತ್ತೇನೆ ಎಂದು ನೂರಾರು ಸಭೆಗಳಲ್ಲಿ ಹೇಳುತ್ತಿದ್ದಿರಿ."

"ಹೌದು... ಹೌದು... ಹೌದು."

"ಆದರೆ ನೀವು ಏನನ್ನೂ ಮಾಡಲಿಲ್ಲ"  ವಿಷಾದ ವ್ಯಕ್ತಪಡಿಸಿದ ಪತ್ರಕರ್ತ.

"ನನ್ನ ಗೆಲುವಿಗೆ ಅದೇ ಆಧಾರವಲ್ಲವೆ?"  ನಗುತ್ತ ಕೇಳಿದ ಉಗ್ರಪ್ಪ.

ಅವನ ಪ್ರಶ್ನೆಗೆ ದಿಗಿಲುಗೊಂಡ ಪತ್ರಕರ್ತ ತುಸು ಏರುಧ್ವನಿಯಲ್ಲಿ ಹೇಳಿದ "ನೀವು ರಾಜಕಾರಣಿಗಳು ಬರಿ ಸುಳ್ಳು ಹೇಳುತ್ತೀರಿ.  ಭರವಸೆಯ ಗಾಳಿ ಊದಿ ಜನರನ್ನು ರಬ್ಬರಿನ ಬಲೂನ್ ಆಗಿಸುತ್ತೀರಿ."

"ಎಷ್ಟೇ ಆಗಲಿ ನೀವೂ ಪತ್ರಕರ್ತರು.  ರಾಜಕಾರಣದ ಸಿದ್ಧಾಂತವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ"  ಹ್ಹ ಹ್ಹ ಹ್ಹ.... ಎಂದು ಹಗುರಾಗಿ ನಕ್ಕ ಉಗ್ರಪ್ಪ.  ಆ ಲಜ್ಜೆಗೇಡಿ ನಗೆ ಕಂಡು ಕೋಪಿಸಿಕೊಂಡ ಪತ್ರಕರ್ತ "ಇಂಥ ರಾಜಕಾರಣದಿಂದ ದೇಶಕ್ಕೇನು ಲಾಭ?" ಎಂದು ವ್ಯಂಗ್ಯದ ಬಾಣ ಎಸೆದ.

"ದೇಶಕ್ಕೇನೋ ಗೊತ್ತಿಲ್ಲ.  ನನಗಂತೂ ಇದೆ.  ನನ್ನ ನಂಬಿಕೊಂಡವರಿಗೂ ಅನುಕೂಲವಿದೆ" ಯಾವ ಮುಜುಗರವಿಲ್ಲದೆ ಹೇಳಿದ ಉಗ್ರಪ್ಪ.

"ಒಂದಿಲ್ಲ ಒಂದಿನ ಜನ ನಿಮ್ಮ ಸ್ವಾರ್ಥದ ಎದುರು ನಿಂತರೆ?"

"ಬಲೂನಿಗೆ ಗಾಳಿ ತುಂಬುವುದರಲ್ಲಿ ನಾನು ಚಾಣಾಕ್ಷ.  ಹಾಗೆಯೇ ಉಬ್ಬಿದ ಬಲೂನುಗಳ ಗಾಳಿ ತೆಗೆಯುವ ತಂತ್ರದಲ್ಲಿ ನಾನು ಎಕ್ಸ್‌ಪರ್ಟು ಮಾರಾಯರೆ!"  ಆತ್ಮವಿಶ್ವಾಸ ವ್ಯಕ್ತಪಡಿಸಿದ ಉಗ್ರಪ್ಪ.

ಪತ್ರಕರ್ತ ತುಟಿ ಹೊಲಿದುಕೊಂಡಂತೆ ಕುಳಿತ.

            *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ