ಜೋಗುಳ ಪಾಡಿರಮ್ಮಾ

-ಶಿಶುನಾಳ ಶರೀಫ್

ಜೋಗುಳ ಪಾಡಿರಮ್ಮಾ ಜಲಜಾಕ್ಷಿಯರೆಲ್ಲ
ಜೋಗುಳ ಪಾಡಿರಮ್ಮಾ                   ||ಪ||

ಜೋಗುಳ ಪಾಡಿರಿ ಶ್ರೀ ಗುರುಯೆನುತಲಿ
ಯೊಗಮಂದಿರದೊಳು ತೂಗುತ ಕಂದನ    ||ಅ.ಪ.|| 

ಒಂದು ಹಿಡಿದು ಒಂಭತ್ತು ಬಾಗಿಲ ನಡು-
ಹಂದರದಲಿ ಸಂಧಿಸಿದ ಮಂಟಪದೊಳು
ಕುಂದಣ ಕೆಚ್ಚಿದ ತೊಟ್ಟಿಲೊಳಗೆ ಆ-
ನಂದದಿ ಮಲಗಿರು ಸುಂದರ ಕಂದನ      ||೧||

ತಳಿರಡಿ ವಳದೊಡಿಗಳು ಬಾಳಿಯು ಸಮ ಶಶಿ ನಡು
ಸುಳಿನಾಭಿಯ ಮಗ್ಗಿಯ ಮಲಿ
ಯಳೆವಳಿಸುತ ತೋರುತ ಬಳ್ಕುತ ಬಂದು
ವಳ ಹಿಡಿದಾತ್ಮ ಮೈಯೊಳೊಪ್ಪುವ        ||೨|| 

ಪಟ್ಟೆ ಪೀತಾಂಬರನುಟ್ಟು ಕುಂಚಿಕಿಯ
ತೊಟ್ಟು ಆಭರಣಗಳಿಟ್ಟು ಬರುವರು
ಪಟ್ಟಣದೊಳಗಿನ ದಿಟ್ಟ ಸಖಿಯರೆಲ್ಲ
ನಿಷ್ಠೆ ಹಿಡಿದು ನಿಜ ಆಲಯದೊಳಗೆ          ||೩||

ಶಶಿಮುಖಿಯರು ವಿಲಾಸದಿ ಹಾಡುತ
ಕ್ಲೇಶವಳಿದು ಸಂತೋಷದಿ ಕೂಡುತ
ದೇಶಕಧಿಕ ಶಿಶುನಾಳಧೀಶನ
ಭಾಸುರ ಕಿರಣ ಪ್ರಕಾತನಿಗೆ                   ||೪||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ