ಹೊಸ ದಿಗಂತ

- ಗಿರಿಜಾಪತಿ ಎಂ. ಎನ್

ಮತ್ತೆ ಹಾಡುತಲಿರುವೆ ಏಕೆ
ಹಳೆಯ ಪಾಡಿನ ಪಲ್ಲವಿ,
ನಿತ್ಯ ಸಾಗುತಲಿರುವೆ ಗಾನಕೆ
ಬರಲಿ ಸಮದಾ ಜಾಹ್ನವಿ,

ಜ್ಞಾನ-ವಿಜ್ಞಾನದ
ಹಾದಿ ಸಾಗಿದೆ ನೀಲನಭದಾ ಆಚೆಗೆ,
ನಿತ್ಯ ಶೋಧನ ಯಾತ್ರೆ ಹೊರಟಿದೆ ಹುಟ್ಟು-ಸಾವಿನ ಅಂಚಿಗೆ,

ಇನ್ನು ಬಿಡು ನೀ ಹಳೆಯ ಹಾಡಲಿ
ಬಣ್ಣ-ಬಣ್ಣದ ಬಣ್ಣನೆ,
ಮತ್ತೆ-ಮತ್ತೆ ಕಟ್ಟುವೇತಕೆ
ವರ್ಣ-ವರ್ಣದ ಬೆಡಗನೆ,

ನಾಕ ನಂದನ, ನರಕ ಬಂಧನ
ಕಲ್ಬಾಂತರ ಸ್ಥಾಯಿಯೋ,
ನಿಜಾನಂದದ ಸತ್ಯ ಚೇತನ
ಬರೀ ಮೂರ್ತಿವೆಂಬುದೆ ಮಾಯೆಯೋ,

ಗ್ರಹ ಪೂರ್ವಾಗ್ರಹ ತೊರೆದ ಕಣ್ಣಿಗೆ
ಅಣುವಣುವೆ ಶಿವ-ಶಿವೆ ಚೇತನ,
ಮಾತೃ ಮಮತೆಯ ನೇಹದೆದೆಗೆ
ಕಣ-ಕಣವದಮೃತ ಸಿಂಚನ

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ