ಬೇಕುಗಳು ಬೇಕು

-ಹಾರಾಸನ

ಎಲ್ಲ ಬೇಕುಗಳಾಚೆ ನಾನಿರಬೇಕು
ಎಂಬುದೊಂದೇ `ಬೇಕು' ನನಗಿರಬೇಕು
ಮಿಕ್ಕೆಲ್ಲ ಬೇಕುಗಳ ನಾ ತೊರೆಯಬೇಕು
ಒಂದಲ್ಲ ಎರೆಡಲ್ಲ ಕೋಟೀರಬೇಕು

ಅದಕೆ ನಿರಂತರ ಸಾಧನೆಯು ಬೇಕು
ಕಠಿಣ ಪರಿಶ್ರಮದನುಭವವು ಬೇಕು
ಆತ್ಮವಿಶ್ವಾಸವದು ಶತಸ್ಸಿದ್ಧ ಬೇಕು
ಗುರಿಯ ಸಾಧಿಪ ಛಲವು ಮಿಗಿಲಾಗಿ ಬೇಕು

ಬೇಕು-ಬೇಡಗಳ ವಿವೇಕಬೇಕು
ಎಲ್ಲವನು ಬಿಡುವ ವೈರಾಗ್ಯಬೇಕು
ಸಕಲ ಪಾಶವ ಕಳೆವ ಯುಕ್ತಿಯದು ಬೇಕು
ನಿಶ್ಕಲ ತೋಷವ ಪಡೆವ ಮನಶ್ಶಕ್ತಿ ಬೇಕು

ಬೇಕು-ಬೇಕುಗಳಾಚೆಗಿರಲೂ ಬೇಕು,
ಈ ಅಸಂಖ್ಯ ಬೇಕುಗಳು ಬೇಕು
ಇದುವೇ ಸೃಷ್ಟಿಯ ವಿಪರ್ಯಾಸವಿರಬೇಕು
ಅದುವೇ ವ್ಯಷ್ಟಿಯ ಪರಿಹಾಸವಿರಬೇಕು
            *****

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ