ಅಗ್ಗದರವಿಯ ತಂದು ಹಿಗ್ಗಿ ಹೊಲೆಸಿದೆನಂಗಿ

-ಶಿಶುನಾಳ ಶರೀಫ್

ಅಗ್ಗದರವಿ ತಂದು
ಹಿಗ್ಗಿ ಹೊಲೆಸಿದೆನಂಗಿ
ಹೆಗ್ಗಣ ವೈತವ್ವ ತಂಗಿ ಈ ಅಂಗೀ                    ||ಪ||

ಅಗಣಿತ ವಿಶಯದ
ಆರು ಗೇಣಿನ ಕವಚ
ಬಗಲು ಬೆವರನು ಕಡಿದು
ಸಿಗದೆ ಹೋಯಿವ್ವ ತಂಗಿ ಈ ಅಂಗೀ                ||೧||

ಬುದ್ಧಿಗೇಡಿಗಳಾಗಿ
ನಿದ್ದಿ ಕೆಡಿಸಿಕೊಂಡು
ಎದ್ದು ನೋಡಲು ಕರ್ಮ
ಗುದ್ದಿನೊಳಡಗಿಕೊಂಡಿತವ್ವ ತಂಗೀ ಈ ಅಂಗೀ   ||೨||

ಕಳನೀಪರಿ ರಾತ್ರಿ
ಬೆಳಗಾಗೋ ಸಮಯದಿ
ಚಲುವ ಶಿಶುನಾಳದೀಶ-
ನುಳುವಿ ಕೊಟ್ಟಾನವ್ವ ತಂಗಿ ಈ ಅಂಗೀ            ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ