- ಕವೀಶ್ ಶ್ರಿಂಗೇರಿ
ಚಿತ್ರ: ರಾಂಗೋಪಾಲ್ ರಾಜಾರಾಮ್ |
ಪ್ರತಿದಿನ ಬೆಳಗಾದ್ರೆ ಆಕೆಯ ದಿನ ಆರಂಭವಾಗುವುದೇ ಇಲ್ಲಿಂದ..! ಮನೆಮುಂದೆ ಗುಡಿಸಿ-ಸಾರಿಸಿ-ರಂಗವಲ್ಲಿ ಇಡೋದೆಂದ್ರೆ ಶಾಂತಿಗೆ ಎಲ್ಲಿಲ್ಲದ ಸಂಭ್ರಮ. ಈ ಸಂಭ್ರಮಕ್ಕೆ ಕಾರಣ ಏನು ಗೊತ್ತಾ? ಇನ್ನೂ ೧೬-೧೭ ರ ಹರೆಯದ ಶಾಂತಿ ಮನೆಮುಂದೆ ರಂಗವಲ್ಲಿ ಇಡುವ ಸಮಯದಲ್ಲಿ ಪ್ರತಿ ದಿನವೂ ಹಾಲು ಮಾರುವ ಹುಡುಗ `ರಾಜೇಶ್' ಶಾಂತಿಯ ಮನೆ ಮುಂದೆ ಹಾದು ಹೋಗುವಾಗ ತನ್ನ ಸೈಕಲ್‌ನ ಬೆಲ್ ಅನ್ನು 'ಟ್ರಿಣ್' ಅನ್ನಿಸಿ ಇತ್ತ ಒಂದು ನಗೆ ಬೀರಿ, ಶಾಂತಿಯ ಉದ್ದನೆಯ ಜಡೆಯನ್ನು ನೋಡಿ ಅವಳ ಮಂದಹಾಸ ನಗೆಯನ್ನು ನಿರೀಕ್ಷಿಸಿ ನಂತರ ಆ ನಗೆಯ ದರುಶನ ಸಿಕ್ಕ ನಂತರವೇ ಅವನ ಹಾಲಿನ ಸೈಕಲ್ ಮುಂದೆ ಹೋಗುತ್ತಿತ್ತು. ಅವನು ನಿರೀಕ್ಷಿಸಿದ ಆ ಮಂದಹಾಸ ನಗೆ ನಿರೀಕ್ಷಿಸಿದಂತೆಯೇ ಅವನಿಗೆ ದೊರೆಯುತ್ತಿತ್ತು ಆಹಾ! ಅದೃಷ್ಟ ಅಂದ್ರೆ ಇದೇ ರೀ...!
ರಾಜೇಶ್ ಹಾಲು ಮಾರಿ ಮತ್ತೆ ವಾಪಾಸ್ ಅವನ ಮನೆಗೆ ಹಿಂತಿರುಗುತ್ತಿರುವಾಗ ಶಾಂತಿ ಮನೆ ಮುಂದೆಯೇ ಹೋಗಬೇಕಾಗಿತ್ತು. ಇದು ಅನಿವಾರ್ಯವಾದರೂ ಒಂಥರಾ ಅದೃಷ್ಟ. ಇರಲಿ ಅದರ ಬಗ್ಗೆ ನಮಗೇಕೆ ಹೊಟ್ಟೆ ಕಿಚ್ಚು...! ಹೀಗೆ ರಾಜೇಶ್ ಶಾಂತಿ ಮನೆಮುಂದೆ ವಾಪಾಸ್ ಹೋಗುವಾಗಲೆಲ್ಲ ಅವನ ಹಾಲಿನ ಸೈಕಲ್ ಬೆಲ್ `ಟ್ರಿಣ್' ಅಂತ ತಪ್ಪದೇ ಹೊಡೆಯುತ್ತಿದ್ದ... ಅದೇ ಸಮಯದಲ್ಲಿ ಶಾಂತಿ ಮನೆಮುಂದೆ ಗಿಡದಿಂದ ಹೂವನ್ನು ಕೊಯುತ್ತಾ ನಿಂತಿರುತ್ತಿದ್ದಳು. ಇಬ್ಬರ ಮುಖದಲ್ಲೂ ಮಂದಹಾಸ.. ಒಂಥರಾ ಖುಷಿ... ಎಲ್ಲಿ ಯಾರಾದ್ರೂ ನೋಡುತ್ತಾರೋ ಎಂಬ ಭಯ ಬೇರೆ...! ಆಗ ಶಾಂತಿ ಮನಸಲ್ಲಿ ಅನಿಸಿದ್ದು ಹೀಗೆ...!
ಸುಮ್ಮನೆ.. ಸುಮ್ಮನೆ.. ಎದೆಯ ಒಳಗೇನೋ ಕಚಗುಳಿ.. ಮೆಲ್ಲನೆ ಹಾಗೇನೆ.. ಹೃದಯದೊಳಗೇನೋ ಚಿಲಿಪಿಲಿ..
ಮನಸು ಬಯಸಿದೆ ಹೊಂಗನಸು...
ಹೊಂಗನಸು ಬಯಸಿದೆ ಪಿಸುಮಾತು..
ಈ ವಯಸ್ಸೇ.. ಹೀಗೇನಾ...!
ಆ ರವಿಮಾಮ ದಿನವೂ ಭೂಮಿಯ ನೋಡಲು ಬಂದೇ ಬರುತ್ತಾನೆ...
ಈ ನನ್ನ ಮಾಮ ದಿನ ಬೆಳಗಾಗೋದನ್ನೇ ಕಾಯ್ತಾ ಇರುತಾನೆ...
ನನ್ನ ನೋಡಲು ಅವನಿಗೆ ಆತುರ....!
ಜೊತೆ ಮಾತಾಡಲು ಅವನಿಗೆ ಕಾತುರ....!
ಅನುರಾಗದ ಕಚಗುಳಿಯು ಹೀಗೇನಾ...!
ಪಾಪ ಆಗತಾನೆ ಒಂದು ಸುಂದರ ಪ್ರಪಂಚವನ್ನು ಹಂಬಲಿಸುತ್ತಾ ಆ ಹಾಡನ್ನು ಗುನುಗುವ ಆ ಶಾಂತಿಯ ಹೃದಯದಲ್ಲಿ `ಲಬ್-ಡಬ್' ಸದ್ದಿನ ಜೊತೆಗೆ `ಅನುರಾಗದ ಆಲಾಪನೆಯೂ' ಕೇಳಿ ಬರುತ್ತಿತ್ತು...
ಮರುದಿನ ಪಕ್ಕದ ಊರಿನ ಚಂದ್ರಣ್ಣ ಮನೆಯಲ್ಲಿ "ಸತ್ಯನಾರಾಯಣ ಪೂಜೆ" ಇತ್ತು. ಶಾಂತಿ ಅಲ್ಲಿಗೆ ಹೋಗಿದ್ದಳು... ರಾಜೇಶನು ಅಲ್ಲಿಗೆ ಬಂದಿದ್ದ.. ಅಲ್ಲಿಗೆ ಬರುವ ವಿಷಯ ಪರಸ್ಪರರಿಗೂ ತಿಳಿದಿರಲಿಲ್ಲ. ಇಷ್ಟಕ್ಕೂ ಇವರಿಬ್ಬರೂ ಇದುವರೆಗೂ ಒಂದು ಮಾತನ್ನು ಆಡಿಲ್ಲ.. !
ಅಲ್ಲಿ ಸತ್ಯನಾರಾಯಣ ಪೂಜೆನೂ ಆಯ್ತು. ನಂತರ ಊಟದ ಸಮಯದಲ್ಲಿ ರಾಜೇಶ್ ಊಟವನ್ನು ಬಡಿಸಲು ತನ್ನ ಗೆಳೆಯರೊಂದಿಗೆ ಮುಂದಾದ. ಅವನಿಗೆ ಎಲ್ಲಿಲ್ಲದ ಖುಷಿ. ಶಾಂತಿಯು ಮೊದಲ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾಳೆ.. ಅವಳ ಜೊತೆಯಲ್ಲಿ ಅವಳ ಗೆಳತಿಯರೂ ಇದ್ದಾರೆ.. ರಾಜೇಶ್ ಊಟ ಬಡಿಸುತ್ತಿದ್ದಾನೆ. ಅಲ್ಲಿ ನೆರೆದವರೆಲ್ಲರ ಕಣ್ಣು ಶಾಂತಿಯ ಮೇಲೆಯೇ. ಕಾರಣ ಶಾಂತಿ ನಕ್ಕರೆ ಅವಳ ಮುಖದಲ್ಲಿ ಎಡಗಡೆ `ಗುಳಿಬೀಳುತ್ತಿತ್ತು'. `ಗುಳಿಬಿದ್ದ' ಕೆನ್ನೆಯ ಹುಡುಗಿ ಶಾಂತಿಯ ನಗುವಿಗಾಗಿ ಹಂಬಲಿಸುತ್ತಿದ್ದವರು ಅದೆಷ್ಟೋ ಜನ...
ಇದೇ ಸಮಯದಲ್ಲಿ ಸಣ್ಣಗೆ ತುಂತುರು ಮಳೆ ಶುರುವಾಯಿತು... ಮಲೆನಾಡಿನ ಆ ಮಣ್ಣ ಕಂಪು... ತಂಗಾಳಿ... ಎಲ್ಲವೂ ಮತ್ತಷ್ಟು ಮೆರಗು ತಂದಂತ್ತಿತ್ತು..! ಶಾಂತಿಗೆ ಮಳೆಯಲ್ಲಿ ನೆನೆಯುವ ಆಸೆ.. ಆ ಮಳೆ ನೀರಿನೊಂದಿಗೆ ಆಟವಾಡುವ ಹಂಬಲ. ರಾಜೇಶ್‌ಗೂ ಆ ತುಂತುರು ಸೋನೆಯ ಮಳೆಯಲ್ಲಿ ನೆನೆಯಬೇಕೆಂಬ ಆಸೆ... ಜೊತೆಗೆ ಕ್ಷಣ ಕ್ಷಣಕ್ಕೂ ಶಾಂತಿನಾ ನೋಡುತ್ತಾ ತನ್ನ ಕೈಯಲ್ಲಿ ತಲೆ ಬಾಚಿಕೊಳ್ಲುತ್ತಿದ್ದ. ಅವನಿಗೆ ಆ ಕ್ಷಣದಲ್ಲಿ ಅವನ ಕಾಲುಗಳು ಭೂಮಿ ಮೇಲೆ ನಿಲ್ಲಲಾರದ ಸ್ಥಿತಿಯಲ್ಲಿ ಇದ್ದವು.... ಅಂದರೆ... ಅವನ ಮನಸಿನ ಭಾವನೆಗೆ ಅವನ ದೇಹವು ತಕಧಿಮಿ ಅನ್ನುತ್ತಿತ್ತು.. ಅದೇ ಅಲ್ವಾ ಪ್ರೇಮ ನಿವೇದನೆ...!
ಆ ಮಳೆಯಲ್ಲೆ ರಾಜೇಶ್ ಶಾಂತಿಯ ನೋಡಲೆಂದೇ ಕೆಲವು ಕೆಲಸಗಳನ್ನು ನೆನೆಯುತ್ತಲೇ ಮಾಡುತ್ತಿದ್ದ. ಶಾಂತಿಗೂ ಅವನ ತಳಮಳ ಅರ್ಥವಾಗುತ್ತಿತ್ತು. ಒಮ್ಮೊಮ್ಮೆ ಮುಗುಳ್ ನಗುತ್ತಿದ್ದಳು.. ಹಾಗೇ ತನ್ನನ್ನು ಯಾರಾದ್ರೂ ನೋಡುತ್ತಿದ್ದಾರಾ ಎಂದು ಒಮ್ಮೆ ಗಮನಿಸುತ್ತಿದ್ದಳು. ಎಷ್ಟಾದ್ರೂ ಮಲೆನಾಡಿನ ಹೆಣ್ಣು ಮಕ್ಕಳಿಗೆ ಅವರ ಸೌಂದರ್ಯ ಪ್ರಜ್ಞೆಯ ಜೊತೆಗೆ ತಮ್ಮ ಇಮೇಜಿಗೆ ಎಲ್ಲಿ ತೊಂದರೆ ಆದೀತೋ ಎಂಬ ಭಯ ಮತ್ತು ಕಾಳಜಿಯೂ ಇರುತ್ತದೆ.
ಮಳೆ ಸ್ವಲ್ಪ ಕಡಿಮೆ ಆಯಿತು.. ಅಲ್ಲಿ ನೆರೆದವರೆಲ್ಲ ಹೊರಟಿದ್ದಾರೆ. ಆದರೆ ರಾಜೇಶ್‌ಗೆ ಶಾಂತಿಯನ್ನು ಬಿಟ್ಟು ಹೊರಡಲು ಮನಸ್ಸೇ ಬರ್ತಿಲ್ಲ..! "ವೈದ್ಯರು ಹೇಳಿದ್ದೂ ಹಾಲು ಅನ್ನ ರೋಗಿ ಬಯಸಿದ್ದೂ ಹಾಲು-ಅನ್ನ" ಎಂಬಂತೆ ಅದೇ ಸಮಯಕ್ಕೆ ಸರಿಯಾಗಿ ಮತ್ತೆ ಮಳೆ ಶುರುವಾಯಿತು. ತಥ್ ತೇರಿಕಿ..! ಅಲ್ಲಿ ಸತ್ಯ ನಾರಾಯಣ ಪೂಜೆಗೆ ಬಂದವರ ಪೈಕಿ ಉಳಿದವರು ಶಾಂತಿ ಮತ್ತು ರಾಜೇಶ್ ಹಾಗೂ ಶಾಂತಿಯ ಗೆಳತಿಯರು... ಇಲ್ಲಿದೆ ನೋಡಿ ತಳಮಳ.. ಕನ್‌ಫ್ಯೂಷನ್.. ಟೆನ್ ಷನ್... ಹಂಬಲ... ಎಲ್ಲ ಮಿಕ್ಸ್ ಆಗಿ ಇವರಿಬ್ಬರ ಅಂತರಂಗದ ಮೃದಂಗ.." ಧೀಂ ತಕಿಟ.. ತಕಿಟ....ಧೀಂ.. ತಕಿಟ ಎಂದಿತು.
ಹಿಂದಿನಿಂದ ಯಾರೋ ಕೂಗಿದರು. "ರಾಜೇಶ್ ಎಲ್ಲರಿಗೂ ಕಾಫಿಕೊಡು ಬಾ" ಅವರ್ಯಾರೋ ಮಾತಿನಂತೆ ರಾಜೇಶ್ ಎಲ್ಲರಿಗೂ ಕಾಫಿ ಕೊಡಲು ಮುಂದಾದ. ಹಾಗೆಯೇ ಶಾಂತಿಯ ಬಳಿ ಹೋದಾಗ ಅವಳು ನಾಚುತ್ತ ಕಾಫಿ ಲೋಟ ತೆಗೆದುಕೊಂಡಳು. ಇವನು ಶಾಂತಿಯ ಕಣ್ಣುಗಳನ್ನು ಅಲ್ಲೇ ಹತ್ತಿರದಿಂದ ಆಗಲೇ ನೋಡಿದ್ದು. ಆಗಲೇ ಅಂದುಕೊಂಡ `ಹೆಣ್ಣೆ ನಿನ್ನ ಕಣ್ಣಿನಲ್ಲಿ ಅನುರಾಗದ ಆಲಾಪನೆ.. ಕಂಡೆನಾ" ಹಾಗಂತ ಆ ಕ್ಷಣದಲ್ಲಿ ತುಂಟತನದಿಂದ ಹಾಡಿದನು...!
ಈ ದಿನ ರಾಜೇಶ್ ಮತ್ತು ಶಾಂತಿ ಒಬ್ಬರನ್ನೊಬ್ಬರು ಪದೇಪದೇ ಕದ್ದು-ಕದ್ದು ನೋಡುತ್ತಿದ್ದುದನ್ನು ಶಾಂತಿಯ ಪಕ್ಕದ ಮನೆಯ ಅಂಕಲ್ ನೋಡಿಯೇ ಬಿಟ್ಟರು. ಶಾಂತಿಯ ಜೊತೆಯಲ್ಲಿ ಆ ಪೂಜೆಗೆ ಬಂದಿದ್ದ ಗೆಳತಿಯರೆಲ್ಲಾ ಹೊರಡುವ ವೇಳೆಗೆ ಶಾಂತಿಯನ್ನು ಕೂಗಿದರು. ಆಗ ಸ್ವಲ್ಪ ಮಳೆ ಕಡಿಮೆ ಆಗುತ್ತಿತ್ತು... ಅವರ ಮಾತಿನಂತೆ ಶಾಂತಿಯು ಅವರ ಜೊತೆಯಲ್ಲಿ ಹೊರಟಳು. ರಾಜೇಶ್ ಅಲ್ಲಿಯೇ ಶಾಂತಿಯನ್ನು ನೋಡುತ್ತ ನಿಂತಿದ್ದಾನೆ.
"ಮಳೆ ನಿಂತರೂ.. ಮರದ ಹನಿ ನಿಂತಿರಲಿಲ್ಲ.." ಇವರಿಬ್ಬರೂ ಒಬ್ಬರನ್ನೊಬ್ಬರು ಅಂದು ಕದ್ದು-ಕದ್ದು ನೋಡಿದ್ದು ..ಊಟ ಬಡಿಸಿದ್ದು, ಕಾಫಿ ಕೊಟ್ಟಿದ್ದು, ಹಾಡು ಹೇಳಿದ್ದು ಎಲ್ಲಾ ಈಗ ರಾಜೇಶ್ ಮತ್ತು ಶಾಂತಿ ಎದೆಯಲ್ಲಿ ತಕಧಿಮಿ ಹಾಡಿ ಕುಣಿಯಲು ಶುರುವಾಯಿತು.
-ಇಂತಿ "ಎಳೆಯ ಹೃದಯಗಳಿಗೆ ಪ್ರೀತಿಯ ಅಮೃತ ಉಣಿಸುವ"
"If you miss one issue of my Bhavayaana
You will lose lots of feelings in your life Bhavayaana"
By Kavish Sringeri
*****
ಕೀಲಿಕರಣ: ಕವೀಶ್ ಶ್ರಿಂಗೇರಿ
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ