ಹಗಲುಗನಸು

- ಮಂಜುನಾಥ ವಿ ಎಂ

ಅವ್ವ ರಾತ್ರೆಯೊಂದು ಗಳಿಗೆ ಎದು  ಹಾಡಿಕೊಳ್ಳುತ್ತಾಳೆ;
ಅವರೆ ಹೊಲದಲ್ಲಿ ಗೇಯುವಾಗ ಬಿದ್ದ ಹಗಲುಗನಸೇ,

ಆ ಕ್ಷಣದ ದುಃಸ್ವಪ್ನವನ್ನು ಶಿಕ್ಷಿಸು,
ದಮನಗೊಳಿಸೂ ಅವನ ಕ್ರಾಂತಿಗೀತೆಯನ್ನು,
ಬೂಟಿನಿಂದ ಚಿಮ್ಮುವ ನೋವಿನ ರಕ್ತವನ್ನು,

ನೆಲದ ನೈದಿಲೆಗಳಲಿ ಕಾವ್ಯ ಅರಳಗೊಟ್ಟವನು,
ಕ್ರಾಂತಿ ಕಂಡವನು ಮಿಂದನವನು.

ಎಲುಬುಮೂಳೆಗಳಿಡಿದು ಬರುವವರಿಗೆ
ತನ್ನದೇ ರಕ್ತ ಮಾಂಸದಲಿ ಹೊದಿಸಿ, ಉಸಿರಾಡಿಸಿ
ತಾನು ಬೆತ್ತಲೆ ಮಲಗುವವನು.

ವಸಂತದಲಿ ಮೂಡಿಬರುವ ಹೆಣ್ಣಿಗೆ ಕನಸುಗಳ ತುಂಬುವವನು;
ನಾಳಿನ ದುಃಖ ದುಮ್ಮಾನಗಳನ್ನು ಇಂದೇ ಗಾಳಿಗೆ ತೂರುವವನು.

ನಾಳೆ ಅವನ ಗೋರಿಗೆ ಸಲ್ಲಬಹುದಾದ
ಆ ಗುಲಾಬಿಗಳನ್ನು ಇಂದೇ ಕಿತ್ತೆಸೆದುಬಿಡೂ
ನನ್ನ ಹೃದಯದಲ್ಲಿ ಬೆಳೆಯಲೀ ಹೆಮ್ಮರವಾಗಿ, ಉದುರಲೀ ಹಣ್ಣಾಗಿ.

ಅವರೆ ಹೊಲದಲ್ಲಿ ಗೇಯುವಾಗ ಬಿದ್ದ
ಹಗಲುಗನಸೇ . . . . . . .

ಬೆರಳಚ್ಚು ಯಂತ್ರದಲ್ಲಿ ಮೂಡಿಬರುತ್ತಿದ್ದ
ಬಿಳಿಹಾಳೆಯ ರಕ್ತ ಘೋಷಣೆಯ ಮೇಲೆ
ಈ ಅವ್ವನ ಚಿತ್ರಗಳು ಸರದಿಯಲ್ಲಿ ಸಾಲುಗಟ್ಟಿ ನಿಂತಿದ್ದವು.

        *****

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ