ಹಬ್ಬಗಳ ಸುಗ್ಗಿ

- ಹಾರಾಸನಾ

ಬೆಳಕಗಣಿಗೆ ದಿಶೆಯ ಬದಲಿಕೆ ಒದಗಿ ಬರಲು
ಬೆಳೆದ ಮಾಣಿಗೆ ಬೆಳೆಯ ಸುಗ್ಗಿಯು ಹರ್ಷ ತರಲು
ಬೆಲ್ಲ ಕಬ್ಬು ಎಳ್ಳು ಬೆರೆಸಿ ಮನೆಮನೆಯಲು ಬೀರಲು
ಎಲ್ಲ ಸೇರಿ ದನಕು ಸಿರಿಯು ಒಮ್ಮತವನೆ ತಾರಲು
                ಬಂತು ಸಂಕ್ರಾಂತಿ |

ಈ ವತ್ಸರವು ಪೂರ್ಣವಾಗಿಸೆ ರವಿಗೆ ತಿರುಗು
ಸಂವತ್ಸರಕೆ ಹೊಸನಾಮದ ದೀವಿಗೆ ಮೆರುಗು
ಕೊನೆಯಿಲ್ಲ ಬರಿಯಾದಿ ಬೇವು ಬೆಲ್ಲದ ನಂಟು
ಮನೆಮಂದಿಗೆಲ್ಲ ಒಬ್ಬಟ್ಟಿನ ಸಿಹಿಯಂತು ಉಂಟು
                ತಂತು ಯುಗಾದಿ |

ಮಿನಾದಲ್ಲಿ ವ್ರತವ ಪಾಲಿಸಿ ಹರಕೆ ಸಲ್ಲಿಪ ಭಕ್ತರು
ಮೆಕ್ಕಾದಲ್ಲಿ ಕಾಬಾವನ್ನು ದೇವಲಾಂಚನವೆಂಬರು
ಬಕ್ರೀದ್‌ದಲ್ಲಿ ರಂಜ್ಹಾನಲ್ಲಿ ಎಲ್ಲ ಸೇರಿ ನಲಿವರು
ಹಸಿದವನಿಗೆ ಭಿಕ್ಷೆ ನೀಡಿ ದೈವರಕ್ಷೆ ಹೊಂದುವರು
                ಈದ್ ಮಿಲಾದ್ |

ತನಯನೊಡನೆ ತಾಯಿ ಬರುವಳು ಭಾಗ್ಯ ತರುವಳು
ವಿನಯದಿಂ ಜನ ಪೂಜೆ ಗೈಯ್ವರು ವೃದ್ಧಿ ಪಡೆವರು
ವರಗಳೊಡನೆ ಹರಸಿ ಪೊರೆವರು ಸದಾ ಕಾಯ್ವರು
ಕರದಂಟು ಕಡಬುಗಳ ಮಾಡುವರು ಹಂಚುವರು
                ಬಂದರೇ ಗೌರಿ ಗಣೇಶ |

ದಂಡಿಪಳು ದುರ್ಜನರ ದುರ್ಗಾ ದೇವಿಗೆ ನಮನ
ದಂಡಾದಿ ಆಯುಧಕೂ ಹರಿದ್ರಾವಣದಿ ಸಿಂಚನ
ಹೊತ್ತು ತರುವಳು ವಿಜಯವೆಲ್ಲರಿಗು ದಶಮಿದಿನ
ಹತ್ತುದಿನಗಳ ನಾಡಹಬ್ಬಕೆ ಮಿಡಿವುದು ಜನಮನ
                ಬರಲಿ ದಸರಾ |

ಜೀವ ಜೀವವೂ ಬೆಳಕಕಿಡಿಗಳೇಂಬ ಸತ್ಯವ ಸಾರುತ
ಸೂರ್ಯನಿರದಿರೆ ಹಣತೆಯೇ ಭಾಸನೀಡ್ವುದು ಸಂತತ
ನರಕಫಲಿಸುವ ಗುಣಗಳನ್ನು ಕಳೆವ ಕೃಷ್ಣನ ನೆನೆಯುತ
ವರದ ಬಲಿಯ ಮನೆಯ ಕಾಯ್ದ ದೇವನನ್ನು ಸ್ಮರಿಸುತ
                ಆಚರಿಸುವ ದೀಪಾವಳಿ |

ದೇವ ದೇವನ ನಿಜವನರಿತ ದೇವದೂತನ ಜನನದ
ದಿವ್ಯದಿನದಿ ಅವನ ಮಹಿಮೆಯ ಇಗರ್ಜಿಯಲಿ ಪಾಡುತ
ಇಷ್ಟ ಬಂಧು ಜನರ ಕೂಡುತ ಪೇಯಪಿಷ್ಟವ ನೀಡುತ
ಕಷ್ಟ ಮರೆತು ಸರ್ವಜೀವಕು ಮುದವನೇ ತಾ ತಾರುತ
                ಖುಷಿಯ ಕ್ರಿಸ್ಮಸ್ |

ಸಮನ್ವಯ ಜೀವನವೇ ರಾಷ್ಟಕ್ಕೊಂದು ಹಬ್ಬ
ಸಮರಸ ಸಂಸಾರವೇ ಕುಟುಂಬಕ್ಕೊಂದು ಹಬ್ಬ
ಸಮತೂಲಿತ ಮಾನಸವೇ ವ್ಯಕ್ತಿಗೊಂದು ಹಬ್ಬ
ಸಮಭಾವಿತ ಸಜ್ಜನಿಕೆಯೇ ಸರ್ವರಿಗು ನಿಜಹಬ್ಬ
                ದೇಶದ ನಿಜಹಬ್ಬ |
           *****

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ