ಮುಂಗಾರು

- ಹಾರಾಸನ

ಶಾಖಸಿಕ್ತ ಪೃಥ್ವಿಯು ಲೀಲಾನ್ವೇಷಣೆಯಲಿ ನಿರಂತ್ಯ ತಿರುಗಾಟದಲಿ ನಿರತ
ತಾಪತಪ್ತವನಿಂಗಿಪ ಜಲಾವೃತದ ಸುಖಾನುಭವಕ್ಕೆ ಹಾತೊರೆಯುತ್ತಾಽ ವಿರತ
ಸ್ನಿಗ್ಧಶ್ವಾಸದಿಂ ಮೃತ್ಯುಭಾಸವ ಕಾಣ್ಬ ಮೂರ್ಛೆಗೆ ನೀಡುತ್ತಾ ಸ್ವಗತ ಸ್ವಾಗತ
ಹಾಗಿರಲು ತಣಿಸಿ ಸುಖವುಣಿಸಲು ಮತ್ತೆ ಜೀವ ತುಂಬಲು ಬಂತು ಮುಂಗಾರು
                ಮತ್ತೆ ಬಂತು ಮುಂಗಾರು

ನೊಂದ ಹೃದಯವದು ಯುದ್ಧಗೈಯುತ ವ್ಯಥೆಯೇ ಕಥೆಯಾಗಿಹ ಜೀವನ
ಚೆಂದ ಮೃಗಕಂದನು ವನರಾಜನ ಪಿಡಿಗೆ ಹೆದರಿ ಒಡುತ್ತಾ ಕಳೆದಿಹ ಯೌವನ
ಹಾತೊರೆದ ಹೃದಯಕ್ಕೆ ಹಾಯೆನಿಸುವ ಗೆಳೆಯನಪ್ಪುಗೆಯ ಸವಿಮಾತಿನಿಂದ
ಬಾಷ್ಪವಾರಿಯ ಹರಿಸಿ ದುಃಖವೆಲ್ಲವ ಸರಿಸೆನ್ನನೇ ತೋಯ್ದುದುದೆನಗೆ ಮುಂಗಾರು
                ಅದೇ ಎನಗೆ ಮುಂಗಾರು

ವಿಶ್ವವೊಂದು ಮನೆ, ಬಿಸುಟೆಲ್ಲ ಭೇದಗಳ, ಜಾತಿ ಮತ ಪಂಗಡಗಳ, ನಾವೆಲ್ಲ ಒಂದೇ
ತತ್ವಸತ್ಯವ ಸಾರುವುದೊಂದೇ ದಾರಿ ಸರ್ವ ಸ್ವಾತಂತ್ರ್‍ಯಕೆ, ಶಾಶ್ವತ ಪರಿಹಾರವೂ ಒಂದೇ
ಏಕತೆಯೊಂದೇ ನಿಜ, ಬಹುವೆಂಬುದು ಮಾಯೆ, ಕರಗುವುದು ಶೀಘ್ರವೇಕತೆಯಲಿ ಲೀನ
ಸರ್ವಶಕ್ತನೆಂಬುವೆವವನ ಕೃಪೆಯ ಸಾಗರದ ಹನಿಹಲವು ಸಾಕದುವೆ ಆತ್ಮಕ್ಕೆ ಮುಂಗಾರು
                ಅದುವೆ ಆತ್ಮಕ್ಕೆ ಮುಂಗಾರು

           *****

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ