ಉತ್ತರಾಧಿಕಾರಿ

- ಅಬ್ಬಾಸ್ ಮೇಲಿನಮನಿ

ಅಮರಪ್ಪನವರು ತಮ್ಮ ಇಡೀ ಆಯುಷ್ಯವನ್ನು ರಾಜಕೀಯದಲ್ಲೇ ಕಳೆದರು.  ಅಧಿಕಾರದ ಸುಖ ಅನುಸರಿಸುವರು.  ಸಾಕಷ್ಟು ಧನ, ಕನಕ, ಸಂಪತ್ತು ವರ್ಧಿಸಿಕೊಂಡರು.  ದೆಹಲಿ, ಬೆಂಗಳೂರು, ಸ್ವಂತ ಊರು ಎಲ್ಲೆಂದರಲ್ಲಿ ಬಂಗ್ಲೆ ಪ್ಲಾಟು ಹೊಂದಿದ್ದರು.

ದೇಶದ ರಾಜಕಾರಣಕ್ಕೆ ಅನಿವಾರ್ಯವೆನ್ನುವಂತಿದ್ದ ಅವರಿಗೆ ಇತ್ತಿತ್ತಲಾಗಿ ಸಕ್ಕೆ ಕಾಯಿಲೆ, ಹೃದಯ ಬೇನೆ, ಬೆನ್ನು ನೋವು, ಮಂಡಿ ಬೇನೆ, ಉಬ್ಬನ, ಗಂಟಲು ಬೇನೆ ಹೀಗೆ ವಿವಿಧ ಕಾಯಿಲೆಗಳು ಒಮ್ಮೆಲೆ ಅಕ್ರಮಿಸಿಕೊಂಡು ಅವರ ಜೀವದ ಸೊಗಸನ್ನೇ ಹಿಂಡಿ ಹಾಕಿದ್ದವು.  ಬೆನ್ನುವ ನೋವು, ಗಂಟಲು ನೋವಿನ ಚಿಕಿತ್ಸೆಗೆಂದು ಅವರು ಸರಕಾರಿ ಖರ್ಚಿನಲ್ಲಿ ವಿದೇಶಕ್ಕೂ ಹೋಗಿ ಬಂದಿದ್ದರು.  ವೈದ್ಯರು ಅವರಿಗೆ ಹಚ್ಚು ಮಾತಾಡದಿರಲು ಎಚ್ಚರಿಸಿದ್ದರು.  ತೆವಲುಗಳಿಂದ ದೂರವಿರಲು, ಆಹಾರದ ಬಗ್ಗೆ ಕಟ್ಟುನಿಟ್ಟು ಪಲಿಸಲು, ಹೇಳಿದ್ದೂ ಅಲ್ಲದೆ ಆವೇಶಕ್ಕೆ ಅವಕಾಶ ನೀಡಬಾರದೆಂದು ಸ್ಪಷ್ಟವಾಗಿ ಹೇಳಿದ್ದರು.  ಅಮರಪ್ಪನವರು ತಮ್ಮ ಹತವೈಭವವನ್ನು ನೆನಪು ಮಾಡಿಕೊಳ್ಳುತ್ತ ಇರಬೇಕಾದ ಪರಿಸ್ಥಿತಿ ಒದಗಿತು.

ಕೊನೆಗೂ ತಮ್ಮ ಅಭಿಮಾನಿಗಳ ಸಮಾವೇಶವನ್ನು ನಡೆಸಿ ತಾವು ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಘೋಷಿಸಿದರು.  ಕೂಡಿದ ಜನ ಬೇಸರದಿಂದ "ನಾವು ಅದಕ್ಕೆ ಅವಕಾಸ ನೀಡುವುದಿಲ್ಲ" ಎಂದರು.  "ನೀವೇ ನಮಗೆ ದಿಕ್ಕು ದೆಸೆ ನಮ್ಮನ್ನು ಅನಾಥರನ್ನಾಗಿ ಮಾಡಬೇಡಿರಿ" ಎಂದು ಗೋಳಾಡಿದರು.  ತಮ್ಮ ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ಮಾರು ಹೋದ ಅಮರಪ್ಪನವರು "ನಾನು ನಿಮ್ಮೊಂದಿಗೆ ಇರುತ್ತೇನೆ.  ನಿಮ್ಮೆಲ್ಲರ ಅನುಕೂಲಕ್ಕಾಗಿ ನನ್ನ ಉತ್ತರಾಧಿಕಾರಿಯೊಬ್ಬ ಇರುತ್ತಾನೆ.  ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ನಿಷ್ಠೆ, ಗೌರವ, ಅಭಿಮಾನದ ಬೆಂಬಲವನ್ನು ನೀವು ಅವನಿಗೂ ಕೊಡಬೇಕು.  ನಾನೆಂದರೆ ಅವನು;  ಅವನೆಂದರೆ ನಾನು ಎಂದು ತಿಳಿಯಬೇಕು" ಎಂದರು.

ಅವರು ಹಾಗೆ ಹೇಳುತ್ತಿರುವಂತೆ ವೇದಿಕೆಯ ಮೆಲಿದ್ದ ಐದಾರು ಯುವಕರ ಮುಖ ಅರಳಿಕೊಂಡವು.  ಅವರೆಲ್ಲ ಅಮರಪ್ಪನವರ ಖಾಸಾ ಆದ್ಮಿಗಳಾಗಿದ್ದರು.  ಹಗಲಿರುಳು ಅವರ ಏಳ್ಗೆಗಾಗಿ, ಪ್ರತಿಷ್ಠೆಗಾಗಿ ರಕ್ತ ಸುಟ್ಟುಕೊಂಡಿದ್ದರು.  ನಿಷ್ಠೆಯಿಂದ ಶ್ರಮಿಸಿದ್ದರು.  ಬದುಕು ಸವೆಸಿದ್ದರು.  ಅನೇಕ ಸಂದರ್ಭಗಳಲ್ಲಿ ಅಮರಪ್ಪ ಆ ತರುಣರ ಬಗ್ಗೆ ಮೆಚ್ಚುಗೆ ಮಾತು ಆಡುತ್ತ ನಾಯಕರನ್ನಾಗಿಸುವ ಆಸೆ ತೋರುತ್ತಲೇ ಬಂದಿದ್ದರು.  ಈಗ ಅಂಥ ಅವಕಶ ಬಂದೀತೆಂದು ತರುಣರು ಹಿಗ್ಗಿಕೊಂಡು ತಮ್ಮ ಗರಿಗರಿ ಅಂಗಿ ತೀಡಿಕೊಂಡು ಮೈಯೆಲ್ಲಾ ಕಿವಿಯಾಗಿ ಕುಳಿತರು.  ಅಮರಪ್ಪ ಅವರತ್ತ ದೃಷ್ಟಿ ಚೆಲ್ಲಿ ತಮ್ಮ ಉತ್ತರಾಧಿಆರಯಿನ್ನು ಸಾರಿಯೇ ಬಿಟ್ಟು "ಮಹಾಜನಗಳೆ, ನಿಮಗೆಲ್ಲರಿಗೂ ಇನ್ನು ಮುಂದೆ ನನ್ನ ಮಗನೆ ನಾಯಕ!"

            *****

ಕೀಲಿಕರಣ: ಕಿಶೋರ್‍ ಚಂದ್ರ

1 ಕಾಮೆಂಟುಗಳು:

ಕಥೆ ಚೆನ್ನಾಗಿದೆ. ಇಂದಿನ ರಾಜಕೀಯ ಚಿತ್ರಣದ ಒಂದು ಮುಖವನ್ನು ಕಥೆ ಅನಾವರಣಗೊಳಿಸಿದೆ.
ರಾಜಕೀಯ ವ್ಯಕ್ತಿಗಳು ಸಾಯುವ ಹಂತದಲ್ಲಿ ಕೂಡ ತನ್ನ ಕುಟುಂಬದ ರಾಜಕೀಯ ಭವಿಷ್ಯದ ಬಗ್ಗೆ ಯೋಚಿಸುತ್ತಾನೆಯೇ ಹೊರತು ದೇಶದ ಬಗ್ಗೆ ಚಿಂತಿಸುವುದಿಲ್ಲ.
ಯಾವುದೇ ವ್ಯಕ್ತಿ, ಸಂಘ ಸಂಸ್ಥೆಗಿಂತ ದೇಶ ಮುಖ್ಯ ಎಂಬುದು ಎಲ್ಲಾ ಕಾಲಕ್ಕೂ ಸತ್ಯ ಎಂಬ ಗಾಂಧೀಜಿ ಅವರ ಮಾತನ್ನು ರಾಜಕೀಯ ಮುಖಂಡರು ಎಂದು ಪಾಲಿಸುತ್ತಾರೋ..?

ಕಾಮೆಂಟ್‌‌ ಪೋಸ್ಟ್‌ ಮಾಡಿ