ಹದಿನಾಲ್ಕು ವರ್ಷಗಳ ನಂತರ

-ರವಿ ಕೋಟಾರಗಸ್ತಿ

ಹದಿನಾಲ್ಕು ವರುಷಗಳ ಮೇಲೆ
ಸವಿನೆನಪುಗಳ ಬುತ್ತಿಯಲಿ
ಏನೇನೊ ಹಲವು ಕನಸನೆ ಹೊತ್ತು
ಮಣ್ಣ ವಾಸನೆ ಅರಸುತ ಹಳ್ಳಿಗೆ ನಡೆದೆ

ಕರಿಮಣ್ಣಿನ ಏರೆಹೊಲದ ದಿಬ್ಬದಿ
ನನ್ನೂರು ಕಾಣುವ ತವಕದಿ
ಹೆಜ್ಜೆಯ ಮೇಲೆ ಹೆಜ್ಜೆಯಿಡುತ ಇಳಿದಾಗ
ಜುಳು... ಜುಳು... ಹರಿಯುತಿಹಳು
ಕಷ್ಣೆಯುದರದೊಳಗಿನ `ಡೋಣಿ'

ಹದಿನಾಲ್ಕು ವರ್ಷಗಳ ಹಿಂದೆ
ಹೇಗಿತ್ತು ಹಾಗೆ ಇಂದಿಗು ಎಲ್ಲೆಲ್ಲೂ
ಪರಿಚಯದ ಮರುಛಾಯೆ
ಕಣ್ಮುಂದೆ ತುಂಬಿ ಮರುಕಳಿಸಿತ್ತು
ಮನದಿ ಇಲ್ಲುಂಡ ಸುಖವೆಲ್ಲ
ಬಾಲ್ಯದ ಬನವ ತವಕದಲಿ
ಹೊಕ್ಕಾಗ ಎಲ್ಲೆಡೆಗೂ ಹದಿನಾಲ್ಕು ವರ್ಷಗಳ
ಮುದುಡಿದ ಮುದಿ ನೆರಳು ಕವಿದಿತ್ತು

ವರುಣ ದುಬಾರಿಯಾಗಿದ್ದು...
ಎಲ್ಲೆಡೆ ಬಣ... ಬಣ
ನೆಲ ಜಲ - ಮನಗಳು
ನಿಂತ ಮರವಾಗಿದ್ದವು ಒಣಗಿ...

ಹೊಟ್ಟೆಪಾಡಿಗಾಗಿ ಗುಳೆ ಎದ್ದು ಹೋಗಿದ್ದ
ನನ್ನೂರಿನ ಅಣ್ಣ-ತಮ್ಮಂದಿರು
ಅಕ್ಕ-ತಂಗಿಯರು ಕಾಣದ
ಓಣೆಲ್ಲಾ ಮೌನ ಆವರಿಸಿತ್ತು

ಓಡಾಡಿ... ಆಡಿದ
ಬೆಚ್ಚಗಿನ ಮನೆಗಳೆಲ್ಲಾ ನೆಲಕೆ
ಕುಸಿದ ಮಣ್ಣಿನ ಗುಡ್ಡೆಗಳೆಲ್ಲ
ಹುಗಿದಿಟ್ಟುಕೊಂಡ ಬಾಲ್ಯದ ನೆನಪುಗಳೆಲ್ಲಾ
ಬಿದ್ದಿದ್ದವು ಮಾಸಿ ತಬ್ಬಲಿಯಾಗಿ

ಅಂದು ಗಿಜಿ-ಗಿಜಿ ತುಂಬಿದ
ಭೇದವೆಣಿಸದ ಮನಗಳು ಓಣಿಗಳು
ನಿರ್ಜೀವ ಸವೆತದ ಮುದುಡಿದ
ಆ ಹಿರಿಜೀವಗಳ ಅಸಹಾಯಕತೆ ಕಾಣುತ

ಕಣ್ಮುಂದೆ ಕಟ್ಟುತಲಿ
ಜೀವ ಮರಮರನೆ ಬಳಲಿತು
ಅವ್ವ-ಅಪ್ಪ- ಹೋದ
ಅಜ್ಜ-ಮುತ್ತಜ್ಜರು ಹೋದ
ಮನೆ-ಮನ-ಬರಿದಾಗಿತ್ತು

ಆ ಹಿರಿಜೀವಗಳ ಸ್ಪರ್ಶದ
ಪ್ರೀತಿ ಉಂಡ ಬಾಲ್ಯವು
ಅವರೊಡನೆ ಈ ಲೋಕವು ಹೋಯ್ತು
ಎಲ್ಲೋ ಮಣ್ಣಲ್ಲಡಗಿದ....
ಈ ಜಗದ ರೀತಿ ನೀತಿಯಿದು

ಹಸಿ ಗಾಯದಿ ಬಸಿವ
ನೆತ್ತರ ತೆರಹದಿ
ಬರಿಯ ವ್ಯಥೆಯೇ ಜೀವ ತುಂಬಿರಲು

ಸುಡು ಬಿಸಿಲಿನ ನಡು ಹಗಲು
ಮುಸ್ಸಂಜೆ ಕವಿದಿತ್ತು...
ಮನಕ್ಕೆಲ್ಲ ತಂಪು ಎರೆದಿತ್ತು
ಅಂದು ಇಂದಿನ ನಡುವೆ ತಿರುಗಿತ್ತು
ಹದಿನಾಲ್ಕು ವರ್ಷಗಳ
ಕಠೋರ ನಿಷ್ಕರುಣ ಕಾಲಚಕ್ರ

         *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ