ಕಕ್ಷೆ

- ಗಿರಿಜಾಪತಿ ಎಂ. ಎನ್

ಹಕ್ಕಿ ಬಳಗ ಮೇಲೇರುತ ಸಾಗಿದೆ
ಹರುಷ-ಹರುಷ ಹೊತ್ತು
ಮಣ್ಣಿನಣುಗ ತಾ ಸೋತು ಸೊರಗುತಿಹ
ಬದುಕಲು ಪಡೆಯಲೊಂದು ತತ್ತು ||

ಜ್ಞಾನ ವಿಜ್ಞಾನದಾಗಸದೆತ್ತರ
ಮಿಂಚು ಹುಳದ ಮಿಣುಕು
ಬಾಳ ಬಾಂದಳಕೆ ತಿಂಗಳ ಬೆಳಕನು
ಕೊಡ ಬಲದೆ, ಯಾವ ಕ್ಷಣಕುಽ ||

ಏರಿ-ಏರುತಲಿ ಹಾರಿ ಸಾಗುತಿರೆ
ಸಿರಿ ವೈಮಾನದ ಯಾನ
ಅಂಬಲಿಗ್ಹವಣಿಸೋ ಕಂದಗಳಿಗೆಂತೋ
ಹಸಿವ್ಹಸಿವಿನ ತೋಂತನನ ||

ಇರುವುದನುಣ್ಣದ ನಿರದನು ಬಯಸೊ
ಸಿರಿಗರ ಬಡಿದು ನಿಂತ ಜನರೊ
ಇರುವಿಕೆಗಾಗಿಯುಽ ಉಣ್ಣಲಿರದೆ
ಹಪ ಹಪಿಸಿ ತಪಿಸೊ ಜನರು ||

ತಂತ್ರ-ತಂತ್ರಗಳು-ಪಾರತಂತ್ರ್‍ಯ
ಬಲೆ ನೇಯುವ ಬಿನ್ನಾಣ
ವಿಭ್ರಾಂತಿ-ಭ್ರಾಂತಿ ಮುಸುಕಿನಲಿ
ಸ್ವಾತಂತ್ರ್‍ಯವಾಗುತಿದೆ ನಿತ್ಯ ಹರಣ ||

ಬಣ್ಣ ಬಣ್ಣದಿ ತೋರಿದರೇನು
ಬೆಳೆ ಬೆಳೆದ ನೀಲ ನಕ್ಷೆ
ಬಣ್ಣಿಪ ಬಾಯ್ಗಳು ತುಂಬಬಹುದೆ
ಹಸಿದೊಡಲ ಚೀಲ ಕಕ್ಷೆ ||

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ