ಧನಿಗಳು ದೊಂಬಿಗೆ ಹೋಗಿದ್ದಾರೆ

- ಡಾ || ಬಿ ಪ್ರಭಾಕರ ಶಿಶಿಲ

ಕಪಿಲಳ್ಳಿಗೆ ಆ ಹೆಸರು ಬರಲು ಪುರಾಣದ ಮಹಾಮುನಿ ಕಪಿಲನೇ ಕಾರಣನೆಂದೂ, ಅವನು ಕಪಿಲಳ್ಳಿಯ ಉತ್ತರ ಮತ್ತು ಪೂರ್ವಕ್ಕೆ ಎತ್ತರದ ಗೋಡೆ ನಿರ್ಮಿಸಿರುವ ಪಶ್ಚಿಮ ಘಟ್ಟಗಳ ಸೆರಗಿನ ಅಸಂಖ್ಯಾತ ಗುಹೆಗಳಲ್ಲಿ ಲೋಕಶಾಂತಿಗಾಗಿ ತಪಸ್ಸು ಮಾಡುತ್ತಾ, ಮನೋ ನಿಗ್ರಹ ಕದಡಿದಾಗ ಅಲ್ಲೇ ದಕ್ಷಿಣದಲ್ಲಿ ವೈಯ್ಯಾರದಿಂದ ಬಳಕುತ್ತಾ ಮಂದಗಮನೆಯಾಗಿ ಪ್ರವಹಿಸಿ ಪಶ್ಚಿಮದ ಅರಬಿ ಕಡಲನ್ನು ಸೇರುವ ತಪಸ್ವಿನಿಯ ಶುಭ್ರ ಸ್ಪಟಿಕ ಸಲಿಲದಲ್ಲಿ ಮಿಂದು ಸಂತೃಪ್ತನಾಗಿ ಮತ್ತೆ ಎತ್ತರದ ಪರ್ವತಗಳತ್ತ ಹೋಗಿ ತಪಸ್ಸು ಮುಂದುವರಿಸಿ ಸಮಾದಿಸ್ಥನಾಗಿ ಹೆಸರೇ ಇಲ್ಲದ ಹಳ್ಳಿಗೊಂದು ಪೌರಾಣಿಕ ಸ್ಥಾನಮಾನ ಕಲ್ಪಿಸಿದನೆಂದೂ ಊರ ವಿಪ್ರರು ಮತ್ತು ವಿಪ್ರಾತಿವಿಪ್ರರು ಸ್ಥಳ ಪುರಾಣವನ್ನು ಹೇಳುವುದುಂಟು.  ತಪಸ್ವಿನಿ ಕಪಿಲ ಮುನಿಯ ಮಡದಿಯೆಂದೂ, ಅವಳೊಮ್ಮೆ ಉಗ್ರ ತಪಸ್ಸಲ್ಲಿ ಮುಳುಗಿದ್ದಾಗ, ಮನೋನಿಗ್ರಹ ಕಳೆದುಕೊಂಡಿದ್ದ ಕಪಿಲಮುನಿಯ ಯಾಚನೆಯನ್ನು ಧಿಕ್ಕರಿಸಿ ಲೋಕ ಕಲ್ಯಾಣಾರ್ಥವಾಗಿ ನದಿಯಾಗಿ ಹರಿದಳೆಂದೂ, ಪತ್ನೀ ವಿರಹಪೀಡಿತ ಕಪಿಲ ಮುನಿಯ ಉಗ್ರ ತಪಸ್ಸಿನ ತಾಪದಿಂದ ಮೂರು ಲೋಕಗಳು ಕಂಗೆಟ್ಟು ದಾರಿ ಕಾಣದಾದಾಗ ಹಿಮವತ್ ಪರ್ವತದಿಂದ ಸಾಕ್ಷಾತ್ ಪರಮೇಶ್ವರನೇ ಕಪಿಲಳ್ಳಿಗೆ ಇಳಿದು ಬಂದು ಕಪಿಲ ಮುನಿಯನ್ನು ಸಂತೈಸಿ ಅವನ ಇಷ್ಟದ ಪ್ರಕಾರ ತಪಸ್ವನಿಯ ಬಲದಂಡೆಯಲ್ಲಿ ನೆಲಸಿ ಕಪಿಲೇಶ್ವರನಾದಲ್ಲಿಯವರೆಗೆ ಕತೆ ಮುಂದುವರೆಯುತ್ತದೆ.

ಕಪಿಲಳ್ಳಿ ಎಂಬ ಹೆಸರಿನ ಬಗ್ಗೆ ಒಂದು ಐತಿಹ್ಯವೂ ಇದೆ.  ಬಹಳ ಬಹಳ ವರ್ಷಗಳ ಹಿಂದೆ ಚುಮ್ಮುಣ್ಣಿ ಕೊರಪ್ಪೊಳು ಎಂಬ ಶೂದ್ರಾತಿಶೂದ್ರಳೊಬ್ಬಳು ಕಾಣೆಯಾದ ತನ್ನ ಗಬ್ಬದ ದನ ಕಪಿಲೆಯನ್ನು ಹುಡುಕುತ್ತಾ ಹುಡುಕುತ್ತಾ ನದಿ ದಾಟಿ, ಗುಡ್ಡವೊಂದರಲ್ಲಿ ಮೇಯುತ್ತಿದ್ದ ದನವನ್ನು ಕಂಡು ಹೇಗೋ ಪುಸಲಾಯಿಸಿ ಹೊರಡಿಸುವಾಗ ಎತ್ತರದ ಸ್ಥಳವೊಂದರಲ್ಲಿದ್ದ ವಿಚಿತ್ರ ಕಲ್ಲೊಂದು ಕಣ್ಣಿಗೆ ಬಿತ್ತು.  ಕೆಳಗಡೆ ಚಪ್ಪಟೆ ಮತ್ತು ಮೇಲೆ ದುಂಡಗಾಗಿದ್ದ ಆ ಕಲ್ಲು ಅವಳಿಗೆ ಇಷ್ಟವಾಗಿ ಮಕ್ಕಳಿಗೆ ಆಟಕ್ಕಿರಲೆಂದು ಭಾರವಾದರೂ ಕಷ್ಟಪಟ್ಟು ಎತ್ತಿಕೊಂಡು ದನವನ್ನು ಅಟ್ಟಿಕೊಂಡು ನದಿ ದಂಡೆಗೆ ಬರುವಾಗ ಎಲ್ಲಿತ್ತೋ ಪಟ್ಟೆ ಹುಲಿ, ದನದ ಕುತ್ತಿಗೆಗೇ ನೇರವಾಗಿ ಹಾರಿ ಆಕ್ರಮಣ ಮಾಡಿತ್ತು.  ಪ್ರಾಣಭೀತಿಯಿಂದ ಚುಮ್ಮಣ್ಣಿ ಕೊರಪ್ಪೊಳು ಕೈಯಲ್ಲಿದ್ದ ಕಲ್ಲನ್ನು ಅಲ್ಲೇ ಹಾಕಿ ನದಿಗೆ ಧುಮುಕಿ ಈಜಿ ಪಾರಾಗಿ ಬಂದವಳು ಈಚೆ ದಡದಿಂದ ಜನರನ್ನು ಸೇರಿಸಿ ನದಿ ದಾಟಿ ಆಚೆ ದಡಕ್ಕೆ ಹೋದಾಗ ಕಪಿಲೆ ಗತಪ್ರಾಣವಾಗಿ ಹುಲಿರಾಯ ಹೊಟ್ಟೆ ತುಂಬಾ ತಿಂದು ಹೋಗಿದ್ದ.  ಅಳಿದುಳಿದ ಭಾಗಗಳನ್ನು ಅಲ್ಲೇ ಗುಂಡಿ ತೆಗೆದು ಹೂತ ಮೇಲೆ ಕಲ್ಲಿನ ಸಂಗತಿ ನೆನಪಾಗಿ ಸ್ವಲ್ಪ ದೂರದಲ್ಲಿ ಬಿದ್ದಿದ್ದ ಅದನ್ನು ಕಂಡು ಎತ್ತಿಕೊಳ್ಳಲೆಂದು ಅತ್ತ ಧಾವಿಸಿದಾಗ ಅದಾಗಲೇ ಅದನ್ನು ಗಮನಿಸಿದ್ದ ವಿಪ್ರಾತಿವಿಪ್ರರು "ಮುಟ್ಟಬೇಡ" ಎಂದು ಗರ್ಜಿಸಿದ್ದಕ್ಕೆ ಅವಳು ಶಿಲೆಯಂತೆ ನಿತುಬಿಟ್ಟಳು.  ಅವರದನ್ನು ಚೆನ್ನಾಗಿ ನೋಡಿ ಸರಿಯಾಗಿ ನಿಲ್ಲಿಸಿ, "ಇದು ಪಾಣಿಪೀಠ ಸಹಿತದ ಶಿವಲಿಂಗ.  ಇದನ್ನು ಇಲ್ಲೇ ಪ್ರತಿಷ್ಠಾಪಿಸ ಬೇಕು" ಎಂದು ಹೇಳಿ, ದಿನ ನಿಶ್ಚಯ ಮಾಡಿ ಗುಡಿಕಟ್ಟಿ ಬ್ರಹ್ಮಕಲಶವಾಗಿ ದೇವರಿಲ್ಲದ ಹಳ್ಳಿಗೊಂದು ದಿಕ್ಕು ತೋರಿದ್ದರು.  ಹುಲಿಯ ಬಾಯಿಗಾಹುತಿಯಾದ ಕಪಿಲೆ ದನದಿಂದಾಗಿ ಉರು ಕಪಿಲಳ್ಳಿಯಾಗಿ, ದೇವರು ಕಪಿಲೇಶ್ವರನಾದನೆಂದೂ, ತಪಸ್ವಿನಿಗೆ ಚುಮ್ಮುಣ್ಣಿ ನದಿ ಎಂಬ ಹೆಸರಿತ್ತೆಂದೂ ಶೂದ್ರಾತಿಶೂದ್ರರು ಹೇಳುತ್ತಾರೆ.  ಊರಿನಲ್ಲಿರುವ ಧರ್ಮ ಸಂರಕ್ಷಣಾ ಪರಿಷತ್ತು ಪುರಾಣ ಕತೆಯನ್ನಷ್ಟೇ ಕಪಿಲೇಶ್ವರ ಸ್ಥಳ ಪುರಾಣ ಕೃತಿಯ ಮೂಲಕ ಪ್ರಚುರಪಡಿಸುತ್ತಿರುವುದರಿಂದ ಐತಿಹ್ಯ ಕತೆ ಶೂದ್ರಾತಿಶೂದ್ರರ ಮಾನಸದಿಂದಲೂ ಮರೆಯಾಗುತ್ತಾ ಹೋಗುತ್ತಿದೆ.

ಕಪಿಲಳ್ಳಿಯ ರುದ್ರರಮಣೀಯ ಪ್ರಶಾಂತತೆ ಮತ್ತು ಏಕತಾನತೆ ಕದಡಬೇಕಾದರೆ ಊರಿಗೆ ಊರೇ ಸಂಭ್ರಮದಿಂದ ಕಾಯುವ ಕಪಿಲೇಶ್ವರನ ಏಳು ದಿನಗಳ ಜಾತ್ರಾ ಮಹೋತ್ಸವ ಆರಂಭವಾಗಬೇಕು.  ದೂರದ ಮಲೆಯಾಳ ದೇಶದ ತಂತ್ರಿಗಳ ಮಂತ್ರ-ತಂತ್ರ, ದೇವರನ್ನು ಹೊತ್ತು ಪ್ರದಕ್ಷಿಣೆ ಬರುವ ಅಡಿಗಳ ಅಂಗಕಾಭಿನಯ, ಮಲೆಯಾಳೀ ಮಾರಾರುಗಳ ಚೆಂಡೆಗಳ ಅಬ್ಬರ, ಗೋಪುರ ಬಾಗಿಲಲ್ಲಿ ನೂರಾಎಂಟು ಭೂತಗಳ ಕೋಲ, ಗುಡ್ಡದ ಬುಡದಲ್ಲಿ ಕುಕ್ಕುಟ ಪಂಚಾಂಗ ಶಾಸ್ತ್ರಾನುಸಾರ ಕುಕ್ಕುಟ ಕದನದ ಕರೆಯೋಲೆ ಅಚ್ಚುಹಾಕಿಸಿ ನಡೆಯುವ ಕೋಳಿ ಅಂಕ, ಯಾವ್ಯಾವುದೋ ಉರುಗಳಿಂದ ಬರುವ ಬಳೆ, ಪೀಪಿ, ಪುಗ್ಗೆ, ಪಾತ್ರೆ-ಪಗಡಿ, ಮಣಿ ಸಾಮಾನು, ಬಟ್ಟೆಬರೆ, ಗೊಂಬೆ ಮಾರುವವರೊಂದಿಗೆ ಸ್ಥಳೀಯ ಚಾ-ಕಾಫಿ, ಸೋಜಿ, ಕಲ್ತಪ್ಪ, ಗೆಣಸಿನಂಗಡಿಗಳು ಸ್ಪರ್ಧಿಸಿ, ಮರದ ತೊಟ್ಟಿಲುಗಳು ಕಿರ್‍ರೋಂ ಎಂದು ಹೊಸ ಲೋಕವನ್ನು ನಿರ್ಮಿಸಿ ಬಿಡುತ್ತವೆ.  ಆಗೆಲ್ಲಾ ಕಪಿಲಳ್ಳಿಯ ಶೂದ್ರ, ಅತಿಶೂದ್ರ, ವಿಪ್ರ, ಅತಿವಿಪ್ರರೆಂಬ ಚಾತುರ್ವರ್ಣದೊಡನೆ ಮ್ಲೇಂಚ್ಫರ ಮಿಶ್ರಣವಾಗಿಬಿಡುತ್ತದೆ.

ಏಳು ದಿನಗಳ ಜಾತ್ರೆ, ಕೋಲ, ಕುಕ್ಕುಟ ಕದನ ಮುಗಿಯುತ್ತಿದ್ದಂತೆ ಆಕಾಶವೆಲ್ಲಾ ಥಳಥಳಿಸಿ, ಗುಡುಗುಗಳು ಆರ್ಭಟಿಸಿ ಸಿಡಿಲು ಅಪ್ಪಳಿಸುವುದರೊಂದಿಗೆ ಧೋ ಎಂದು ಮಳೆ ಸುರಿದು, ಹಳೆಯದೆಲ್ಲವೂ ಕೊಚ್ಚಿಕೊಂಡು ಹೋಗಿ ತಪಸ್ವಿನಿ ಸೊಕ್ಕಿ ಹರಿಯತೊಡಗುತ್ತಾಳೆ.  ಮಿಂಚು ಬಡಿದು, ಸಿಡಿಲಪ್ಪಳಿಸಿ ಸಾವು ಸಂಭವಿಸದಿದ್ದರೆ ಊರವರ ಭಕ್ತಿಯಿಂದ ಕಪಿಲೇಶ್ವರ ಸಂತುಷ್ಟನಾಗಿದ್ದಾನೆಂದೂ, ಯಾರಾದರೂ ಸತ್ತುಹೋದರೆ ಎಲ್ಲೋ ಮಡಿಕೆಟ್ಟು ಹೋಗಿ ಅಶುದ್ಧವಾಗಿ ಕಪಿಲೇಶ್ವರನಿಗೆ ಸಿಟ್ಟು ಬಂದಿದೆಯೆಂದೂ ಜನರು ಆಡಿಕೊಳ್ಳುವುದುಂಟು.

ಕಪಿಲಳ್ಳಿಯಿಂದ ಹೊರಗಿನ ವಿಶ್ವಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಪಶ್ಚಿಮಾಭಿಮುಖ ಮಣ್ಣ ರಸ್ತೆಯಲ್ಲಿ ಮಳೆಗಾಲದಲ್ಲಿ ಮನುಷ್ಯರು ಸಂಚರಿಸಲು ಅಸಾಧ್ಯವಾಗಿಬಿಡುತ್ತದೆ.  ಬೇಸಿಗೆಯಲ್ಲಿ `ಓಂ ಕಪಿಲೇಶ್ವರಾಯ ನಮಃ ಕಪಿಲಳ್ಳಿ' ಎಂಬ ಹಣೆಬರಹ ಹೊತ್ತು ಕಪಿಲಳ್ಳಿ ಧನಿಗಳ ಜೀಪು ಅದರಲ್ಲಿ ಓಡಾಡುತ್ತದೆ.  ಅದು ಬಿಟ್ಟರೆ ಊರಿಗೆ ಬರುವ ವಾಹನವೆಂದರೆ ಘಟ್ಟದಿಂದ ಬೆಲ್ಲ, ಚಾ ಹುಡಿ, ಕಾಫಿ ಹುಡಿ, ಹುಳಿ, ಕೊತ್ತಂಬರಿ, ಉದ್ದು, ಕಡಲೆ, ಸಾಸಿವೆ, ಜೀರಿಗೆ ಇತ್ಯಾದಿ ಇತ್ಯಾದಿ ಸಾಮಾನುಗಳನ್ನು ತುಂಬಿಕೊಂಡು ಬರುವ ಎತ್ತಿನ ಗಾಡಿಗಳು.  ಹಾಗೆ ಬಂದ ಸಾಮಾನುಗಳು ಕಪಿಲಳ್ಳಿಯ ಅಡಿಕೆ, ತೆಂಗು, ಭತ್ತ, ಗೆಣಸು, ಬಾಳೆಕಾಯಿ, ಸೀಗೆಕಾಯಿ, ಕರಿಮೆಣಸು, ಗೇರುಬೀಜಗಳಿಗೆ ಸಾಟಿ ವಿನಿಮಯವಾಗಿ ಬಿಡುತ್ತಿದ್ದವು.  ಇರುವೊಂದು ಸರಕಾರೀ ಕಿರಿಯ ಪ್ರಾಥಮಿಕ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರು ಸರಕಾರೀ ಕಾಗದ ಪತ್ರಗಳ ವಿಶ್ಲೇಷಣೆ ಮಾಡಿ ಊರಿನ ಜನರಿಗೆ ಸಹಕರಿಸುತ್ತಾರಾದರೂ ತಳ್ಳಿ ಅರ್ಜಿ ಬರೆಯಲು ಅವರು ಒಪ್ಪುವುದಿಲ್ಲವೆಂಬ ಗಂಭೀರ ಆಪಾದನೆಯನ್ನೂ ಹೊತ್ತಿದ್ದಾರೆ.

ಕಪಿಲಳ್ಳಿ ಧನಿಗಳಿಗೆ ಹತ್ತೆಕರೆ ಅಡಿಕೆ ತೋಟ, ಇಪ್ಪತ್ತು ಮುಡಿ ಗದ್ದೆ, ಹದಿನೈದೆಕರೆ ಕಾನಬಾಣೆ, ಐದೆಕರೆ ಪೊರಂಬೋಕು ಜಾಗ, ಅದರ ಮೇಲೆ ಕಪಿಲಳ್ಳಿಯ ಏಕೈಕ ವಾಹನದ ಚಕ್ರವರ್ತಿ ಎಂಬ ಸ್ತುತಿ, ಸೊಂಟದಲ್ಲಿ ಸದಾ ನೇತಾಡುವ ಕಪ್ಪು ಮಿರಿಮಿರಿ ಕಂತ್ರಿ ಪಿಸ್ತೂಲೆಂಬ ಭಯಾನಕ ಆಯುಧದಿಂದಾಗಿ ಕಪಿಲಳ್ಳಿಯಲ್ಲಿ ಅವರೆದುರು ನಿಲ್ಲುವವರೇ ಇರಲಿಲ್ಲ.  ಕಪಿಲೇಶ್ವರನ ದೇವಾಲಯದ ಆನುವಂಶಿಕ ಮೊಕ್ತೇಸರನೇ ಕಪಿಲಳ್ಳಿ ಧನಿಗಳ ಮಾತಿಗೆ ಕೋಲೆ ಬಸವನಂತೆ ತಲೆಯಾಡಿಸಿ ಬಿಡುತ್ತಾನೆಂದರೆ ಇನ್ನುಳಿದ ಹುಲುಮಾನವರ ಪಾಡೇನು?  ಮೂಲೆಮನೆ ಪರಮೇಶ್ವರಯ್ಯ ಎಂಬ ಅವರ ಪರಮ ಪಾವನ ನಿಜನಾಮಧೇಯವು ಜನಮಾನಸದಲ್ಲಿ ನೆಲೆಗೊಳ್ಳದೆ ಹೋದರೂ, ಕಪಿಲಳ್ಳಿ ಧನಿ ಎಂಬ ಪರಮೋಚ್ಫ ಬಿರುದು ಅವರನ್ನು ಆತ್ಮ ಸಂತೃಪ್ತಿಯಿಂದ ಬೀಗುವಂಥೆ ಮಾಡಿತ್ತು.  ಮಳೆಗಾಲದಲ್ಲಿ ತಪಸ್ವಿನಿ ಸೊಕ್ಕಿ ಹರಿಯುವಾಗ ಒಮ್ಮೊಮ್ಮೆ ತೇಲಿಹೋಗುವ ಹೆಣಗಳು ಕಪಿಲಳ್ಳಿಯ ಧನಿಗಳ ಬಹುಮುಖ ಸಾಧನೆಗಳ ಒಂದಂಗವೆಂದು ಜನರು ಒಮ್ಮೊಮ್ಮೆ ಮಾತಾಡುವುದುಂಟು.

ಮಳೆಗಾಲದ ಆರಂಭದ ದಿನಗಳಲ್ಲೊಂದರಂದು ಕಪಿಲಳ್ಳಿ ಧನಿಗಳು ಎಳೆಹೆಣ್ಣು ದೊಂಬಿಯ ಮನೆಯ ಎದುರು ಬಾಗಿಲಿನ ಚಿಲಕ ತೆಗೆದು ಸಂತೃಪ್ತವದನರಾಗಿ ಹೊರಬರುತ್ತಿರುವಂತೆ ದೇಸುಲುನ ಮಗ ಪೀಂಟೆಲು ಗುರುವಪ್ಪನು ಆ ದಾರಿಯಲ್ಲಿ ಅಡ್ಡ ಹಾದು ಬಿಟ್ಟು.  ಕಪಿಲಳ್ಳಿ ಧನಿಗಳನ್ನು ಕಂಡ ಮೇಲೆ ಮುಜುರೆ ಸಲ್ಲಿಸದೆ ಹೋಗುವುದು ತಪ್ಪಾಗುತ್ತದೆಂದು ನಡುಗುತ್ತಾ ದಂತ ಪಂಕ್ತಿಗಳನ್ನು ಪ್ರದರ್ಶಿಸಿ ಅಳು ನಗುಗಳ ಜಂಟಿ ವರಸೆಯಲ್ಲಿ, "ಅಡ್ಡ ಬಿದ್ದೆ ಉಳ್ಳಯಾ" ಎಂದ.  ಈ ಅಪರ ಹೊತ್ತಲ್ಲಿ ಎಳೆಹೆಣ್ಣು ದೊಂಬಿಯ ಮನೆಯ ಕಡೆ ಬಂದದ್ದೇ ಇವ ಪತ್ತೇದಾರಿಕೆ ಮಾಡಿ ತನ್ನನ್ನು ಹಿಡಿಯುವುದಕ್ಕೇ ಇರಬೇಕೆಂದು ಖಚಿತವಾಗಿ ನಖಶಿಖಾಂತ ಉರಿ ಎದ್ದ ಕಪಿಲಳ್ಳಿ ಧನಿಗಳು ಅಲ್ಲೇ ಬಿದ್ದಿದ್ದ ತೆಂಗಿನ ಕೊತ್ತಳಿಂಗೆ ಎತ್ತಿ ಬೀಸಿಬಿಟ್ಟರು.  ಎಡ ಕಿವಿಯ ಹತ್ತಿರ ಬಿದ್ದ ಬಲವಾದ ಪೆಟ್ಟಿಗೆ ತತ್ತರಿಸಿದ ಪೀಂಟೆಲು ಗುರುವುವಪ್ಪನ "ಸತ್ತೆ ಉಳ್ಳಯಾ" ಎಂಬ ಮರಣಾಕ್ರಂದನ ಕೇಳಿ ಕಂಗಾಲಾಗಿ ಮೆನಯೊಳಗಿನಿಂದ ಹೊರಬಂದ ದೊಂಬಿಯ ಕಣ್ಣೆದುರೇ ಪೀಂಟೆಲು ಗುರುವಪ್ಪನು ದಢಾರೆಂದು ಕೆಳಗೆ ಬಿದ್ದು ಸ್ವಲ್ಪ ಹೊತ್ತು ಕೈಕಾಲು ಬಡಿದು ತಣ್ಣಗಾಗಿ ಬಿಟ್ಟನು.

ಅನುದ್ದೇಶಿತವಾಗಿ ನಡೆದು ಹೋದ ಘಟನೆಯಿಂದ ಕಪಿಲಳ್ಳಿ ಧನಿಗಳು ಗಾಬರಿಯಾಗಿ ಎಳೆಹೆಣ್ಣು ದೊಂಬಿಯನ್ನು ನೋಡಿದರೆ ಅವಳು ಮುಖದ ರಕ್ತವೆಲ್ಲಾ ಆರಿಹೋಗಿ ಬಿಳಿಚಿ ನಿಂತಿದ್ದಳು.  ಆಷಾಢಪೂರ್ವದ ಈ ಜಡಿಮಳೆಯಲ್ಲಿ ಮನೆಯಿಂದ ಯಾರೂ ಹೊರಬೀಳಲಾಗದ ಈ ಮುಸ್ಸಂಜೆಯಲ್ಲಿ ಆ ಆಯುಸ್ಸು ತೀರಿದ ಶನಿ ಸಾಯಲೆಂದೇ ಇಲ್ಲಿಗೆ ಬರಬೇಕೆ?  ಎಳೆಹೆಣ್ಣು ದೊಂಬಿ ಹೆಣಗಳನ್ನು ಕಂಡಿದ್ದರೂ ತನ್ನ ಕಣ್ಣೆದುರೇ ಹಸಿ ಹಸೀ ಜೀವವೊಂದು ಹೀಗೆ ಒದ್ದಾಡಿ ಶವವಾಗುವುದನ್ನು ಈವರೆಗೆ ಕಂಡವಳಲ್ಲ.  ಅವಳ ಮುಖ ಭೀಭತ್ಸವಾಗಿ ಕಣ್ಣಲ್ಲಿ ಭಯ ಮೂಡಿ ಇನ್ನೇನು ಭೀತಿಯ ವಿಕಾರ ಚೀತ್ಕಾರ ಹೊರಬೀಳಬೇಕು ಅನ್ನುವಷ್ಟರಲ್ಲಿ ಕಪಿಲಳ್ಳಿಯ ಧನಿಗಳು ತಮ್ಮ ಹೆಗಲ ಉತ್ತರೀಯದಿಂದ ಅವಳ ಬಾಯನ್ನು ಬಲವಾಗಿ ಮುಚ್ಚಿ, "ಸುಮ್ಮನಿರು.  ಈಗ ಬಿದ್ದಿರೋದು ಒಂದೇ ಹೆಣ.  ಶಬ್ದ ಹೊರಟರೆ ಸಾಕ್ಷಿಯ ಹೆಣವೂ ಬೀಳುತ್ತದೆ" ಎಂದು ಗುಡುಗಿದರು.

ಬಡಪಾಯಿ ಎಳೆಹೆಣ್ಣು ದೊಂಬಿಯ ಚೀತ್ಕಾರ ಗಂಟಲಲ್ಲೇ ಉಳಿದು ಕಪಿಲಳ್ಳಿ ಧನಿಗಳಿಗೆ ಕೈ ಮುಗಿದಾಗ ಅವರು ತಮ್ಮ ಕೈ ಹಿಂದಕ್ಕೆ ತೆಗೆದುಕೊಂಡರು.  ಎಳೆಹೆಣ್ಣು ದೊಂಬಿ ಪೀಂಟೆಲು ಗುರುವಪ್ಪನ ನಿಶ್ಶಬ್ದ ದೇಹ, ಅತಿ ವಿಕಾರ ಮುಖ ನೋಡಿ ಕುಕ್ಕರು ಕುಳಿತು, ಗದಗುಟ್ಟುವ ತೊಡೆಗಳಲ್ಲಿ ಮುಖ ಮುಚ್ಚಿಕೊಂಡು ನಿಶ್ಶಬ್ದವಾಗಿ ಅತ್ತು ಧೈರ್ಯ ತಂದುಕೊಳ್ಳಲು ಯತ್ನಿಸಿದಳು.  ಹಿಂದೊಮ್ಮೆ ಸರಿಸುಮಾರು ಇದೇ ಹೊತ್ತಲ್ಲಿ ತನ್ನ ಮನೆಯಿಂದ ಕಳ್ಳಹೆಜ್ಜೆಯಲ್ಲಿ ಹೊರಬಿದ್ದಿದ್ದ ಕಪಿಲಳ್ಳಿ ಧನಿಗಳನ್ನು ಇಲ್ಲೇ, ಹೀಗೇ ನೋಡಿದ್ದ ಗುರುವಪ್ಪನು ಹಲ್ಲುಕಿಸಿದು, "ಎಲ್ಲಿಗೆ ಹೋಗಿದ್ರಿ ಉಳ್ಳಯಾ?" ಎಂಬ ಪರಮ ಅಧಿಕ ಪ್ರಸಂಗದ ಪ್ರಶ್ನೆ ಕೇಳಿದ್ದಕ್ಕೆ ತನ್ನನ್ನಿವನು ಅಣಕಿಸುತ್ತಿದ್ದಾನೆಂದು ಕೋಪದಿಂದ ಕಪಿಲಳ್ಳಿ ಧನಿಗಳು ಬಲವಾಗಿ ಗುರುವಪ್ಪನ ಮುಸುಡಿಗೆ ಇಟ್ಟದ್ದು, ಆ ಏಟಿನ ರಭಸಕ್ಕೆ ಅವನ ಮುಸುಡು ಶಾಶ್ವತವಾಗಿ ಈಶಾನ್ಯ ಭಾಗಕ್ಕೆ ತಿರುಗಿ ಹೋದದ್ದು ಅಲ್ಲಿಯವರೆಗೆ ಮೇಪತ ಗುರುವಪ್ಪನಾಗಿದ್ದವ ಪೀಂಟೆಲು ಗುರುವಪ್ಪಾನಾಗಿ ಕಪಿಲಳ್ಳಿಯ ಇತಿಹಾಸದಲ್ಲಿ ದಾಖಲಾದದ್ದು ಅವಳಿಗೆ ನೆನಪಾಯಿತು.  ಆ ವರೆಗೆ ಗುಟ್ಟಾಗಿಯೇ ಇದ್ದ ತನ್ನ ಮತ್ತು ಕಪಿಲಳ್ಳಿ ಧನಿಗಳ ಸಂಬಂಧ ಊರಿಡೀ ಪ್ರಚಾರವಾಗಿ, `ಧನಿಗಳು ದೊಂಬಿಗೆ ಹೋದರೆ ಗುರುವಪ್ಪನ ಮುಸುಡು ಈಶಾನ್ಯಕ್ಕೆ ತಿರುಗುತ್ತದೆ' ಎಂಬುದು ಒಂದು ಜಾನಪದೀಯ ಒಗಟಾಗಿ ಕಪಿಲಳ್ಳಿಯ ಮೌಖಿಕ ಪರಂಪರೆಗೆ ಹೊಸ ಸೇರ್ಪಡೆಯಾಗಿ ಹೋಗಿತ್ತು.

ಮದುವೆಯಾಗಿ ಕಪಿಲಳ್ಳಿಗೆ ಬಂದ ಎರಡನೇ ವರ್ಷ ತನ್ನ ಕೈ ಹಿಡಿದವ ಹೊಟ್ಟೆಗೊಂದು ಪ್ರೇಮಫಲವನ್ನೂ ನೀಡದೆ ಮಳೆಗಾಲದಲ್ಲಿ ತಪಸ್ವಿನಿಯಲ್ಲಿ ತೇಲಿಹೋಗಿದ್ದ.  ಯಾವುದೋ ಮುಳ್ಳುಕಂಟಿಗೆ ಸಿಕ್ಕಿಕೊಂಡಿದ್ದ ಮೀನುಗಳು ಕಚ್ಚಿ ಕಚ್ಚಿ ತಿಂದುಳಿದ ಅವನ ಅವಶೇಷಗಳನ್ನು ಅಲ್ಲೇ ಒಟ್ಟು ಮಾಡಿ ಬಿಂಕಿಕೊಟ್ಟು ಬಂದ ಎಳೆಹೆಣ್ಣು ದೊಂಬಿ ಗಂಡನ ಪಾರ್ಶ್ವವಾಯು ಪೀಡಿತ ಅಪ್ಪನನ್ನು ಬಿಟ್ಟು ತವರಿಗೆ ಹೋಗಲು ಮನಸ್ಸೊಪ್ಪದೆ ಕಪಿಲಳ್ಳಿಯಲ್ಲೇ ಉಳಿದಿದ್ದಳು.  ಗಂಡ ಸತ್ತು ಒಂದು ತಿಂಗಳಾಗುವ ಮೊದಲೇ ಕಪಿಲಳ್ಳಿ ಧನಿಗಳು ಮನಗೆ ಬಂದು, "ಹೀಗಾಯಿತೇ" ಎಂದು ಲೊಚಗುಟ್ಟಿ, ಒಂದಷ್ಟು ದುಡ್ಡನ್ನು ಮಲಗಿದಲ್ಲೇ ಇರುವ ಗಂಡನ ಅಪ್ಪನಿಗೆ ನೀಡಿ, "ಏನಾದರೂ ಬೇಕಿದ್ದರೆ ಕೇಳಲು ನಾಮಸು ಮಾಡಬೇಡ.  ಗಂಡ ತೀರಿಹೋಗಿದ್ದಾನೆಂದು ಹೆದರಿಕೊಳ್ಳಬೇಡ.  ನಾನಿಲ್ವಾ?" ಎಂದು ಧೈರ್ಯ ನೀಡಿ ಹೋಗಿದ್ದರು.

ಮತ್ತೆರಡೇ ದಿನ ಕಳೆದು ಇಳಿಹೊತ್ತಲ್ಲಿ, ಧೋ ಎಂದು ಸುರಿಯುವ ಮಳೆಯಲ್ಲಿ ಮನೆಗೆ ಬಂದು ಚಾಪೆಯಲ್ಲೇ ಬಿದ್ದಿದ್ದ ಮಾವನಿಗೆ ಒಂದು ಬಾಟಲು ಭರ್ತಿ ನೀಡಿದ್ದಕ್ಕೆ, ಮುದುಕನ ಮುಖ ಬ್ರಹ್ಮಾನಂದದಿಂದ ಬೆಳಗಿ, ಬಾಟಲ್ಲನು ಖಾಲಿ ಮಾಡಿ ಸ್ವಲ್ಪ ಹೊತ್ತಲ್ಲಿ ಇಹವನ್ನೇ ಮರೆತಂತೆ ಗೊರಕೆ ಹೊಡೆಯತೊಡಗಿದಾಗ ಕಪಿಲಳ್ಳಿ ಧನಿಗಳು ಅಗಳಿ ಹಾಕಿ ತನ್ನೆಡೆಗೆ ಬಂದಿದ್ದರು.  ತಾನು ಕೊಸರಿಕೊಂಡಾಗ ಪಿಸ್ತೂಲು ತೋರಿಸಿ, "ಒಪ್ಪಿದರೆ ಸೈ, ಇಲ್ಲದಿದ್ದರೆ ನಿನ್ನ ಗಂಡ ಹೋದಲ್ಲಿಗೆ ಕಳುಹಿಸಿ ಬಿಡುತ್ತೇನೆ" ಎಂದದ್ದೇ ಕೈಕಾಲು ಉಡುಗಿ ಕುಸಿದವಳನ್ನು ಹಾಗೇ ಒಳ ಕೋಣಗೆ ಎತ್ತಿಕೊಂಡೊಯ್ದು ಹಸಿ ಹಸಿ ಸುಖವುಂಡಿದ್ದರು.  ಇದು ಮತ್ತೆ ಮತ್ತೆ ಆವರ್ತಿಸಿದಾಗ ವಿರೋದಿಸುವುದನ್ನೇ ಮರೆತ ಎಳೆಹೆಣ್ಣು ದೊಂಬಿ ತೀರಾ ಯಾಂತ್ರಿಕವಾಗಿ ವಸ್ತುಸ್ಥಿತಿಗೆ ಒಗ್ಗಿಕೊಂಡಿದ್ದವಳ ಬದುಕಿನಲ್ಲಿ ಈಗ ಇನ್ನೊಂದು ತಿರುವು ಕಾಣಿಸಿಕೊಳ್ಳುತ್ತಿರುವುದನ್ನು ಗಮನಿಸಿ ನಡುಗಿದಳು.  ಮಳೆಗಾಲದ ಆರಂಭದಲ್ಲಿ ತಪಸ್ವಿನಿಗೆ ಬಲಿಯೊಂದು ದೊರೆತಿದ್ದು, ಒಂದಕ್ಕೇ ಮುಗಿಯುತ್ತದಾ ಅಲ್ಲಾ ಏಕೈಕ ಸಾಕ್ಷಿಯಾದ ತನ್ನವರೆಗೂ ಮುಂದುವರಿಯುತ್ತದಾ ಎಂಬ ಆತಂಕದಿಂದ ಅವಳ ನಡುಕ ಹೆಚ್ಚಾಯಿತು.

"ಏನು ಯಕ್ಷಗಾನ ನೋಡಿಕೊಂಡು ನಿಂತಿದ್ದಿ?  ಬೇಗ ಹೋಗಿ ಒಂದು ಹುರಿಹಗ್ಗ ತೆಗೆದುಕೊಂಡು ಬಾ.  ತಪಸ್ವಿನಿಯಲ್ಲಿ ನೀರು ಉಕ್ಕೇರುತ್ತಿರುವ ಸದ್ದು ಕೇಳಿಸುತ್ತಿದೆಯಲ್ಲಾ?  ಈ ಕತ್ತಲಲ್ಲೇ ಕೆಲಸ ಮುಗಿಸಿದರೆ ನಾಳೆ ಗುರುವಪ್ಪನಿಗಾಗಿ ಅವನ ಅಪ್ಪ, ಅಮ್ಮ ಹುಡುಕಾಟ ಆರಂಭಿಸಬೇಕಾಗುತ್ತದೆ.  ಇಂಥದ್ದೆಲ್ಲಾ ಕಪಿಲಳ್ಳಿಯಲ್ಲಿ ಮಳೆಗಾಲದಲ್ಲೇ ಆಗುತ್ತಿರುವುದು ತಪಸ್ವಿನಿಯ ದಯೆಯೆಂದೇ ಹೇಳಬೇಕು.  ಕಳೆದ ವರ್ಷ ಡಿಕ್ಲರೇಷನ್ನಿನಲ್ಲಿ ನನಗೆ ಎದುರುಬಿದ್ದು ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಹೇಳಿದ ನಿನ್ನ ಗಂಡ;  ಈಗ ನಾವಿಬ್ಬರೂ ಸಂಜೆ ಹೊತ್ತು ನಡೆಸುವುದೇನೆಂದು ಕಂಡುಹಿಡಿದು ಊರಿಡೀ ಹೇಳಿಕೊಂಡು ಬಂದ ಈ ನರಪೇತಲ ಪತ್ತೇದಾರ!  ಹೇಗೂ ಮುಗಿಯಿತಲ್ಲಾ ಇವನಿಗೆ ತಪಸ್ವಿನಿಯ ನೀರಿನ ಋಣ?  ಅರೆ, ಅದೇನು ಪುರಾಣ ಕೇಳುತ್ತಾ ನೀನು ನಿಂತಿರೋದು?  ಓಡು, ಬೇಗ ಓಡು."

ಎಳೆಹೆಣ್ಣು ದೊಂಬಿ ಮನೆಯೊಳಗೆ ಓಡಿ ತಡಕಾಡಿದಳು.  ಅಲ್ಲೇ ನೂರು ಗಜ ದೂರದ ತಪಸ್ವಿನಿಯಲ್ಲೇ ಮಿಂದು ಮನೆಗೆ ದಿನಾ ಅಲ್ಲಿಂದಲೇ ನೀರು ತರುವವಳ ಮನೆಯಲ್ಲಿ ಬಾವಿಯ ಹಗ್ಗ ಎಲ್ಲಿಂದ ಬರಬೇಕು?  ಕಾವೇರಿಯನ್ನು ಕಟ್ಟಿಹಾಕುವ ಪುಟ್ಟ ಹಟ್ಟಿಗೆ ಓಡಿದಳು.  ಕಾವೇರಿ ಆರಾಮವಾಗಿ ಮೆಲುಕು ಹಾಕುತ್ತಾ ಮಲಗಿತ್ತು.  ಇವಳಿಗಿರುವ ನೆಮ್ಮದಿಯೂ ತನಗಿಲ್ಲದಾಯಿತೇ ದೇವರೇ ಎಂದುಕೊಂಡು ಕಾವೇರಿಯ ಹತ್ತಿರಕ್ಕೆ ಬಂದು ಅದರ ಎರಡು ಕೋಡುಗಳ ನಡುವೆ ತುರುಸತೊಡಗಿದಾಗ ಅದು ತಲೆಯನ್ನು ಮೇಲೆತ್ತಿತು.  ಅದರ ಕುತ್ತಿಗೆಯ ಕೆಳಗೆ ಮಾಲೀಸು ಮಾಡುತ್ತಾ ಮಾಡುತ್ತಾ ಅದಕ್ಕೆ ಗೊತ್ತಾಗದಂತೆ ಮೆಲ್ಲ ಹಗ್ಗ ಬಿಚ್ಚಿ, ಗುರುವಪ್ಪನೊಟ್ಟಿಗೆ ಕಪಿಲಳ್ಳಿ ಧನಿಗಳು ತನ್ನನ್ನೂ ಹೆಣವಾಗಿಸಿ ತಪಸ್ವಿನಿಯಲ್ಲಿ ತೇಲಬಿಟ್ಟರೂ, ಕಾವೇರಿ ಹೊರ ಹೋಗಿ ಹುಲ್ಲು ಮೇದು ಬದುಕಿಕೊಳ್ಳುತ್ತಾಳೆ ಎಂದುಕೊಳ್ಳುತ್ತಾ ಕಣ್ಣೀರು ತುಂಬಿ ಗುರುವಪ್ಪನ ಹೆಣವಿದ್ದಲ್ಲಿಗೆ ಬಂದಳು.

"ಈ ಕುಂಬು ಲಟ್ಟೂಸು ಹಗ್ಗ ನಿನ್ನ ಬೊಜ್ಜಕ್ಕಾ ತಂದದ್ದು?  ಬೇರೆ ಹುಡುಕಿ ತಾ" ಎಂದು ಕಪಿಲಳ್ಳಿಯ ಧನಿಗಳು ಗರ್ಜಿಸಿದಾಗ ಎಳೆಹೆಣ್ಣು ದೊಂಬಿ ಅಡ್ಡಕ್ಕೆ ತಲೆಯಾಡಿಸಿದಳು.  "ನಿನ್ನ ಕರ್ಮ.  ಕಟ್ಟು ಅವನ ಕುತ್ತಿಗೆಗೆ".  ನಡುಗುವ ಕೈಗಳಿಂದ ಎಳೆಹೆಣ್ಣು ದೊಂಬಿ ಪೀಂಟೆಲು ಗುರುವಪ್ಪನ ಕುತ್ತಿಗೆಗೆ ಹಗ್ಗ ಸಿಕ್ಕಿಸಿದಳು.  "ಹ್ಞುಂ, ಎಳಕೊಂಡು ನಡಿ" ಎಂದು ಕಪಿಲಳ್ಳಿಯ ಧನಿಗಳು ಆಜ್ಞಾಪಿಸಿದಾಗ, "ಬಾಗಿಲು ಎಳಕೊಂಡು ಬಂದುಬಿಡುತ್ತೇನೆ" ಎಂದು ಎಳೆಹೆಣ್ಣು ದೊಂಬಿ ಮನೆಯೊಳಗೆ ಹೋಗಿ ಬಾಟಲಿ ಪ್ರಭಾವದಿಂದ ಮೈಮೇಲಿನ ಸ್ವಯ ಕಳಕೊಂಡು ಮಲಗಿದ್ದ ಮುದುಕನ ಕಾಲು ಹಿಡಿದು ನಮಸ್ಕರಿಸಿ "ಕಾವೇರಿ ದನಕ್ಕಿರುವ ಪುಣ್ಯವೂ ಇದಕ್ಕಿಲ್ಲವಲ್ಲಾ" ಎಂದುಕೊಳ್ಳುತ್ತಾ ಮನೆಯನ್ನು ಕೊನೆಯ ಬಾರಿಗೊಮ್ಮೆ ಎಂಬಂತೆ ನೋಡಿ ಬಾಗಿಲೆಳೆದುಕೊಂಡು ಹೊರಬಂದಳು.

"ಆಯತಾ ನಿನ್ನದು?  ಕುತ್ತಿಗೆಗೆ ಹಗ್ಗ ಹಾಕಿದವಳು ನೀನೇ.  ಅದನ್ನು ಎಳಕೊಂಡು ನದಿಯತ್ತ ನಡೆ."  ಕಪಿಲಳ್ಳಿಯ ಧನಿಗಳ ಮಾತಿನ ಅರ್ಥವಾಗಿ ಎಳೆಹೆಣ್ಣು ದೊಂಬಿ ಮತ್ತಷ್ಟು ನಡುಗಿದಳು.  ಹೆಣವನ್ನು ಎಳಕೊಂಡು ಹೋಗುವಾಗ ಯಾರಾದರೂ ಕಂಡರೆ ತಾನೇ ಕೊಲೆಗಾರ್ತಿಯಾಗಿ ಬಿಡುತ್ತೇನೆ!  ಅವಳ ಮನಸ್ಸಿನ ಆಂದೋಲನದ ಅರಿವಾಗಿ ಧನಿಗಳು ಹೇಳಿದರು.  "ಅರ್ಥ ಆಗುವುದಿಲ್ವಾ ನಿನಗೆ?  ಅವನನ್ನು ಈಗ ನಾನು ಮುಟ್ಟಿದರೆ ಸ್ನಾನ ಮಾಡಿ ಜನಿವಾರ ಬದಲಾಯಿಸದೆ ಮನೆಗೆ ನುಗ್ಗುವಂತಿಲ್ಲ.  ಮನೆಯಲ್ಲಿ ತಂದಿಟ್ಟ ಜನಿವಾರ ಮುಗಿದು ಹೋಗಿದೆ.  ಈ ಜಡಿಮಳೆಗೆ ಬೇರೆಲ್ಲೀಂತ ಹುಡುಕಿ ತರುವುದು?  ನೀನೀಗ ಎಳಕೊಂಡು ಹೋಗದಿದ್ದರೆ ಈ ಹೆಣ ಹೀಗೆ ನಿನ್ನ ದನದ ಹಗ್ಗ ಕುತ್ತಿಗೆಗೆ ಬಿಗಿದ ಸ್ಥಿತಿಯಲ್ಲಿ ಇಲ್ಲೇ ಬಿದ್ದಿರುತ್ತದೆ.  ನಾಳೆ ಪೋಲಿಸರು ಬಂದು ಈ ಎಳೆಹೆಣ್ಣು ಎಳಕೊಂಡು ಹೋಗಿ ಲಾಕಪ್ಪಿನಲ್ಲಿ ಕೆಡವಿಕೊಂಡರೆ ಮುಂದೆ ಏನೇನಾಗಬಹುದು ಯೋಚಿಸು.  ಆಮೇಲೆ ಕಪಿಲೇಶ್ವರನೂ ನಿನ್ನನ್ನು ಬಚಾವು ಮಾಡಲಾರ."

ನಡುಗುವ ಕೈಗಳಿಂದ ಎಳೆಹೆಣ್ಣು ದೊಂಬಿ ಪೀಂಟೆಲು ಗುರುವಪ್ಪನ ಹೆಣವನ್ನು ಎಳೆದುಕೊಂಡು ನದಿಯತ್ತ ಸಾಗಿದಳು.  ಪೀಂಟೆಲು ಗುರುವಪ್ಪನ ಕೊಲೆಯಿಂದ ಹುಟ್ಟುಕೊಳ್ಳಲಿರುವ ಅನಾಹುತಗಳ ಅವ್ಯಕ್ತ ಭೀತಿ, ಮಳೆಯಿಂದ ತೊಯ್ದು ಹೋದ ಗದಗುಟ್ಟುವ ಶರೀರ, ಇದೀಗ ಸೊಕ್ಕಿ ಹರಿಯುವ ತಪಸ್ವಿನಿಯ ಗರ್ಜನೆ ಸೇರಿ ಅವಳ ತ್ರಾಣವೆಲ್ಲಾ ಎಲ್ಲೋ ಸೋರಿ ಹೋದಂತಾಗಿ ತಪಸ್ವಿನಿಯತ್ತ ನೋಡಿ, "ನನ್ನನ್ನು ಯಾಕೆ ಹೆದರಿಸುತ್ತೀಯೆ?  ನಿನ್ನಂತೆ ನಾನೂ ಹೆಣ್ಣು.  ಕಳೆದ ವರ್ಷ ನನ್ನ ಗಂಡನನ್ನು ನುಂಗಿದ್ದು ಸಾಕಾಗದಿದ್ದರೆ ಬಾ, ನನ್ನನ್ನೂ ನುಂಗು.  ಆದರೆ ಪೀಂಟೆಲು ಗುರುವಪ್ಪನನ್ನು ಕೊಂದದ್ದು ನಾನಲ್ಲ.  ಕಪಿಲಳ್ಳಿ ಧನಿಗಳು.  ದೈರ್ಯವಿದ್ದರೆ ಅವರನ್ನು ಹೆದರಿಸು" ಎಂದು ತುಟಿಯಲ್ಲೇ ಮಣಮಣಿಸಿ ದಂಡೆ ಮೀರಿ ಹರಿಯುತ್ತಿರುವ ತಪಸ್ವಿನಿಯ ನೀರು ಕಾಲಿಗೆ ಸೋಕುತ್ತಲೇ ಉಸ್ಸಪ್ಪಾ ಎಂದು ಅಲ್ಲೇ ಪಚಕ್ಕನೆ ಕುಳಿತುಬಿಟ್ಟಳು.

ಕಪಿಲಳ್ಳಿ ಧನಿಗಳು ಪೀಂಟೆಲು ಗುರುವಪ್ಪನ ಸಾವಿಗೆ ಕಾರಣವಾದ ಕೊತ್ತಳಿಂಗೆಯಿಂದ ಅವನ ಹೆಣವನ್ನು ನೂಕುತ್ತಾ ನೂಕುತ್ತಾ ನೀರಿಗೆ ಉರುಳಿಸಿದರು.  ಮೊಣಕಾಲವರೆಗಿನ ನೀರಲ್ಲಿ ಮುಂದೊತ್ತಿದಾಗ ಸ್ವಲ್ಪ ಎತ್ತರದ ಬಂಡೆಯೊಂದು ಆಧಾರಕ್ಕೆ ಸಿಕ್ಕಿತು.  ಹೆಣವನ್ನು ನೂಕುತ್ತಾ ಮುಂದಕ್ಕೆ ಸರಿಸಿದರು.  ನೀರಿನ ಸೆಳೆತಕ್ಕೆ ಮುಂದೆ ಹೋದ ಹೆಣ ಅಲ್ಲೇ ಸುಳಿಯಲ್ಲಿ ಚಕ್ರಾಕಾರವಾಗಿ ಸುತ್ತತೊಡಗಿದ್ದನ್ನು ನೋಡಿ ಬಂಡೆಯಿಂದ ಕೆಳಗಿಳಿದು ಅದರ ಕುತ್ತಿಗೆಯಿಂದ ಹಗ್ಗವನ್ನು ಬಿಡಿಸಿ ಬಲವಾಗಿ ನೀರಿಗೆಸೆದರು.  ಆದರೂ ಹೆಣ ಅಲ್ಲೇ ಸುತ್ತುತ್ತಿರುವುದನ್ನು ಕಂಡು ನಾಳೆ ಖಂಡಿತವಾಗಿಯೂ ಈ ಪೀಂಟೆಲು ಗುರುವಪ್ಪ ತನ್ನ ಕುತ್ತಿಗೆಗೇ ತಂದುಹಾಕುತ್ತಾನೆಂದುಕೊಂಡು, "ದೊಂಬೀ, ಹಾಳಾದವನ ಹೆಣ ಸುಳಿಯಲ್ಲೇ ಸುತ್ತುತ್ತಿದೆ.  ಒಂದು ಉದ್ದದ ಬಡಿಗೆ ಕೊಟ್ಟರೆ ದೂರಕ್ಕೆ ನೂಕಿ ಬಿಡುತ್ತೇನೆ" ಎಂದು ಬೊಬ್ಬಿಟ್ಟರು.  ಇದು ಧನಿಗಳ ಹೊಸಪಟ್ಟು.  ಪೀಂಟೆಲು ಗುರುವಪ್ಪನ ಹೆಣ ನೂಕುವ ನೆಪದಿಂದ ತನ್ನನ್ನು ಸುಳಿಗೆ ನೂಕಿ ಬಿಡುವ ತಂತ್ರವೆಂದು ಅವಳಿಗೆ ಖಚಿತವಾಯಿತು.  ತಾನು ಬದುಕಿದ್ದು ಪೋಲಿಸರ ಕೈಗೆ ಸಿಕ್ಕಿ ಯಮಯಾತನೆ ಪಡುವುದಕ್ಕಿಂತ, ಬಚಾವಾದರೂ ಪ್ರತಿದಿನ ಕಪಿಲಳ್ಳಿ ಧನಿಗಳ ಕೆಳಗೆ ಕೊರಡಾಗಿ ಬಿದ್ದುಕೊಳ್ಳುವುದಕ್ಕಿಂತ ತಪಸ್ವಿನಿಯ ಮಡಿಲು ಸೇರುವುದೇ ಒಳ್ಳೆಯದೆಂದುಕೊಂಡು ಅಲ್ಲೇ ಬೇಲಿಯ ಬದಿಯಲ್ಲಿ ಬಿದ್ದಿದ್ದ ಉದ್ದದ ಬಡಿಗೆಯೊಂದನ್ನು ತಂದು, ಸ್ವತಂತ್ರಳಾಗಿರುವ ಕಾವೇರಿ ದನವನ್ನು, ಬದುಕಿಯೂ ಸತ್ತಂತಿರುವ, ತಾನೀಗ ತಪಸ್ವಿನಿಯಲ್ಲಿ ತೇಲಿಹೋದರೆ ಮಲಗಿದಲ್ಲಿಯೇ ಹೊಟ್ಟೆಗಿಲ್ಲದೆ ಸಾಯಲಿರುವ ಮುದುಕ ಮಾವನನ್ನು ನೆನೆಯುತ್ತಾ, ಬಂಡೆಯ ಮೇಲೇರಿ ಅದನ್ನು ಕಪಿಲಳ್ಳಿ ಧನಿಗಳಿಗೆ ಕೊಟ್ಟಳು.

ಕಪಿಲಳ್ಳಿ ಧನಿಗಳು ಬಂಡೆಯಿಂದ ನದಿಗಭಿಮುಖವಾಗಿ ಇಳಿದು ಸುಳಿಯಲ್ಲಿ ಚಕ್ರಾಕಾರವಾಗಿ ಸುತ್ತುತ್ತಿದ್ದ ಪೀಂಟೆಲು ಗುರುವಪ್ಪನ ಹೆಣವನ್ನು ಬಡಿಗೆಯಿಂದ ನೂಕುತ್ತಿರುವಂತೆ ಪ್ರವಾಹ ಒಮ್ಮೆಲೇ ಹೆಚ್ಚಾಗಿ ಆಯತಪ್ಪಿ ಬಿದ್ದುಬಿಟ್ಟರು.  ಕೈಕಾಲು ಬಡಿಯುತ್ತಾ ಚಕ್ರಾಕಾರವಾಗಿ ಸುತ್ತುತ್ತಿದ್ದ ಅವರು, "ದೊಂಬೀ, ದೊಂಬೀ, ನಿನ್ನ ಸೀರೆ ಬಿಚ್ಚು.  ಅದನ್ನು ಎಸೆದು ನನ್ನನ್ನು ಎಳಕೋ" ಎನ್ನುತ್ತಾ ಕಿರಿಚತೊಡಗಿದರು.  ಎಲ್ಲವನ್ನೂ ನೋಡುತ್ತಾ ಕಲ್ಲಾಗಿ ನಿಂತಿದ್ದ ಎಳೆಹೆಣ್ಣು ದೊಂಬಿಯನ್ನು ನೋಡಿ ಸಾವು ಕೂಗು ಹಾಕಿದರು.  "ದೊಂಬೀ, ಏನು ನೋಡುತ್ತಾ ನಿಂತಿದ್ದಿ? ನನ್ನನ್ನು ಬದುಕಿಸು.  ನಿನ್ನ ತಂಟೆಗೆ ಬರುವುದಿಲ್ಲ.  ನಿನ್ನ ಸೀರೆ ಎಸಿ, ಎಸಿ" ಎಂದು ಆ ಸ್ಥಿತಿಯಲ್ಲೂ ಬೊಬ್ಬಿಟ್ಟರು.  ಇದ್ದಕ್ಕಿದ್ದ ಹಾಗೆ ಭೋರ್ಗರೆತ ಹೆಚ್ಚಾಗಿ ಬಂದ ಪ್ರವಾಹದಲ್ಲಿ ಕೈಕಾಲು ಬಡಿಯುತ್ತಾ ಪೀಂಟೆಲು ಗುರುವಪ್ಪನ ಹೆಣದೊಂದಿಗೆ ತೇಲಿಹೋದರು.  ಅವರ ಬೊಬ್ಬೆ ಕೇಳದಾದಾಗ ಅವರು ಕಣ್ಮರೆಯಾದದ್ದು ಖಚಿತವಾಗಿ ಎಳೆಹೆಣ್ಣು ದೊಂಬಿ ದಡಕ್ಕೆ ಧಾವಿಸಿ, ತಪಸ್ವಿನಿಗೆ ಕೈ ಮುಗಿದು, ಕೆಂಪು ನೀರನ್ನು ಹೊಟ್ಟೆ ತುಂಬಾ ಕುಡಿದು, ತಲೆಗೂ ಚಿಮುಕಿಸಿ ಕಾಲೆಳೆದುಕೊಂಡು ಮನೆಯತ್ತ ನಡೆದಳು.

ಪೀಂಟೆಲು ಗುರುವಪ್ಪ ಮತ್ತು ಕಪಿಲಳ್ಳಿ ಧನಿಗಳು ಒಂದೇ ದಿನ ಕಾಣೆಯಾದ ರಹಸ್ಯ ಎಳೆಹೆಣ್ಣು ದೊಂಬಿ ಮತ್ತು ಜೀವನದಿ ತಪಸ್ವಿನಿಯನ್ನು ಬಿಟ್ಟರೆ ಬೇರಾರಿಗೂ ಗೊತ್ತಿಲ್ಲ.  ಎಳೆಹೆಣ್ಣು ದೊಂಬಿ ಅದನ್ನು ಯಾಗಿರೂ ಹೇಳುವುದಿಲ್ಲ.  ಈ ಗುಟ್ಟನ್ನು ತಪಸ್ವಿನಿ ತನ್ನ ಗರ್ಭದಲ್ಲೇ ಇಟ್ಟುಕೊಳ್ಳುವುದರಿಂದ ಅದೆಂದೂ ಹೊರಗೆ ಬರುವುದಿಲ್ಲ.

ಕಪಿಲಳ್ಳಿಯ ಜನಮಾನಸದಿಂದ ಕಪಿಲಳ್ಳಿ ಧನಿಗಳು ಎಂದೆಂದಿಗೂ ಮಾಸಿ ಹೋಗುವುದಿಲ್ಲ.  ಕಪಿಲಳ್ಳಿ ಧನಿಗಳ ನೆನಪಾದಾಗಲೆಲ್ಲಾ ಲಹರಿ ಬಂದವನೊಬ್ಬ ಇದ್ದಕ್ಕಿದ್ದಂತೆ, "ಧನಿಗಳು ಎಲ್ಲಿಗೆ ಹೋಗಿದ್ದಾರೆ?" ಎಂದು ಕೇಳುತ್ತಾನೆ.  ಆಗ ಉಳಿದವರು ಸಾಮೂಹಿಕವಾಗಿ "ಧನಿಗಳು ದೊಂಬಿಗೆ ಹೋಗಿದ್ದಾರೆ" ಎಂದು ಉತ್ತರಿಸುತ್ತಾರೆ!
                                   *****
ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ