ಸರ್ಕಾರಿ ಆಸ್ಪತ್ರೆ

- ಮಂಜುನಾಥ ವಿ ಎಂ

ನಾನು ನೋಡಿದ ಬೇಸಗೆಯ ಅಪರಿಪೂರ್ಣ ಚಿತ್ರವಿದು:

ಒಳರೋಗಿಗಳು ಇನ್ನೆಂದಿಗೂ ಹೊರಬರದಂತೆ ಕಾರಿಡಾರ್‌ನ
ಕತ್ತಲ ಗುಹೆಯಲ್ಲಿ ಹೋದ ಬೇಸಗೆಯ ಹಗಲುಗಳನ್ನು ಕಾಣಲೆತ್ನಿಸುತ್ತಾ,
ಎಣಿಸುತ್ತಾ ತಟಸ್ಥರಾಗಿ ಹೋಗಿದ್ದರು.

ದಗಲ್ಬಾಜಿ ವೈದ್ಯನೊಬ್ಬ ಹೊಸದಾಗಿ ನೇಮಕಗೊಂಡ ನರ್ಸ್ ಅನ್ನು
ಕಕ್ಕಸುಕೋಣೆಯ ಗೋಡೆಗೆ ನಿಲ್ಲಿಸಿಕೊಂಡು ಅವಳ ಶರೀರದ ರಂಧ್ರಗಳಿಗೆ
ಶಾಖ ಊದುತ್ತಿದ್ದ.

ಅನ್ನನಾಳಗಳು ಹೂಮರದಂತೆ ನಗರದ ಗಾಳಿಗೆ ಮಿಡುಕುತ್ತಿರುವಂತೆ,
ಬಲಿತ ಬೀದಿ ನಾಯಿಗಳು ಬಾಗಿಲಲ್ಲಿ ನಾಲಗೆ ಬೀಸುತ್ತಿದ್ದವು.

ಸೆಪ್ಟೆಂಬರ್‌ನ ಒಂದು ರಾತ್ರೆ ಇದೇ ಆಸ್ಪತ್ರೆಯಲ್ಲಿ
ನನ್ನ ತಂದೆಯನ್ನು ಕೊಂದು ಹಾಕಿದ್ದರು.

ಅಲ್ಲಿ ಬಾಲ್ಕನಿಯಲ್ಲಿ ಮುದಿ ದಾದಿಯೊಬ್ಬಳು
ತನ್ನ ಒಳ ಉಡುಪುಗಳನ್ನು ಒಣಗಿಸಿಕೊಳ್ಳುತ್ತಿದ್ದಳು,
ಸರ್ಕಾರಿ ಆಸ್ಪತ್ರೆಯ ಒಳಗಿನ್ ಚಿತ್ರಣದಂತೆ ಅವಳ ಮೈ ಮೇಲೂ ಬಟ್ಟೆಯಿರಲಿಲ್ಲ.

ಅದು ರಂಜನೀಯವೆನಿಸಿದ್ದರಿಂದ ಹಾಡೆಂದು ಭಾವಿಸಿದೆ.
          *****

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ