ಮಾದಾಯಿ

-ರವಿ ಕೋಟಾರಗಸ್ತಿ

ಹಸಿರು ಸೀರೆಯುಟ್ಟು....
ಭೂಮಡಿಲ... ಮುತ್ತಿಟ್ಟು
ಜಲ-ತಾರೆಗಳ ಅಪ್ಪಿ
ಹರಿದ್ವರ್ಣದ ಆಲಿಂಗನ
ನಿತ್ಯ ಕಾನನಗೋಡೆ ಮಾದಾಯಿ ಮಡಿಲು

ಏರು ತಗ್ಗುಗಳ...
ಬೆಟ್ಟಗಳ ನಡುವಲಿ
ಜುಳು... ಜುಳು... ಸುಮಧುರ
ನಿಸರ್ಗ ನಿನಾದ ಸಂಗೀತ ಚೆಲ್ಲುತ
ಬಳಲಿದ ದಾಹಕೆ ತಂಪೆರೆಯುತಿಹದು

ಗಿರಿ-ಕಾನನಗಳ...
ಜೀವನಾಡಿಯಾಗಿ
ಗಿಲ್ಲ... ಗಿಲ್ಲ ಗೆಜ್ಜೆ ನಾದದಲಿ
ಹೆಜ್ಜೆಯಲಿ ಆಡುತ
ಹಾಡುತ ಹರಿಸುತಿಹಳು
ಮಹಾತಾಯಿ... ಮಾದಾಯಿ

ಗಡಿ-ನಾಡು... ಭೇದವೆಣಿಸದೆ
ದುಡಿವ ಕೈಗಳಿಗೆ ಜೀವಧಾರೆಯಾಗಿ
ಬಹುಜನರ ಒಡಲು ತುಂಬಿಹಳು

ಮಲಪ್ರಭೆಯ ವಾತ್ಸಲ್ಯದಡಿ...
ನೆರಳಾಗಿ... ಎಲ್ಲೆ ಮೀರಿ...
ಅಪ್ಪುಗೆಯಲಿ ಐಕ್ಯವಾಗಿಹಳು

ವೈವಿಧ್ಯದ ಭಾಷೆ-ವೇಷಗಳ
ಬದುಕು-ಕನಸು ಬೇರಾದರೂ
ಒಡ ಹುಟ್ಟಿದವರೆನ್ನುತ ಸಾರುತಲಿ

ಜಗಕ್ಕೆ ಸಾಕ್ಷಿಯಾಗಿಹಳು ಮಾದಾಯಿ
         *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ